ADVERTISEMENT

ರಕ್ಷಣಾ ಕ್ಷೇತ್ರದ ಕಂಪನಿಯಲ್ಲಿ ಅದಾನಿ ಹೂಡಿಕೆ: ವಿಪಕ್ಷಗಳಿಂದ ಹೊಸ ಆರೋಪ

‘ಬೆಂಗಳೂರು ಮೂಲದ ಎಡಿಟಿಪಿಎಲ್‌ ಪ್ರವರ್ತಕ ಎಲಾರ ಕ್ಯಾಪಿಟಲ್ ಜೊತೆ ನಂಟು’

ಪಿಟಿಐ
Published 15 ಮಾರ್ಚ್ 2023, 12:32 IST
Last Updated 15 ಮಾರ್ಚ್ 2023, 12:32 IST
-
-   

ನವದೆಹಲಿ: ಅದಾನಿ ಸಮೂಹದ ಪ್ರಮುಖ ಹೂಡಿಕೆದಾರ ಸಂಸ್ಥೆಯೊಂದು ಸಹ ಮಾಲೀಕತ್ವ ಹೊಂದಿರುವ ಕಂಪನಿಯೊಂದಕ್ಕೆ ರಕ್ಷಣಾ ವ್ಯವಸ್ಥೆಗಳ ಪೂರೈಕೆಗೆ ಗುತ್ತಿಗೆ ನೀಡಲಾಗಿದೆ ಎಂದು ಕಾಂಗ್ರೆಸ್‌ ಸೇರಿದಂತೆ ಕೆಲ ವಿರೋಧ ಪಕ್ಷಗಳು ಕೇಂದ್ರದ ವಿರುದ್ಧ ಬುಧವಾರ ಆರೋಪಿಸಿವೆ.

‘ವಿದೇಶ ಮೂಲದ ಅಪರಿಚಿತ ಕಂಪನಿಗಳಿಗೆ ರಕ್ಷಣಾ ಕ್ಷೇತ್ರದ ಉಪಕರಣಗಳ ಅಭಿವೃದ್ಧಿ, ಪೂರೈಕೆಯ ಗುತ್ತಿಗೆ ನೀಡುವ ಮೂಲಕ ದೇಶದ ಭದ್ರತೆಯಂತಹ ವಿಷಯದಲ್ಲಿ ಕೇಂದ್ರ ಸರ್ಕಾರ ಏಕೆ ರಾಜಿ ಮಾಡಿಕೊಂಡಿದೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ.

ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ದೈನಿಕದಲ್ಲಿ ಪ್ರಕಟವಾಗಿರುವ ವರದಿಯನ್ನು ರಾಹುಲ್‌ ಗಾಂಧಿ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

‘ಭಾರತದ ಕ್ಷಿಪಣಿ ಹಾಗೂ ರಾಡಾರ್‌ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಗುತ್ತಿಗೆಯನ್ನು ಅದಾನಿ ಹಾಗೂ ವಿದೇಶ ಮೂಲದ ಸಂಶಯಾಸ್ಪದ ಸಂಸ್ಥೆ ಎಲಾರ ಒಡೆತನದ ಕಂಪನಿಯೊಂದಕ್ಕೆ ನೀಡಲಾಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಎಲಾರ ಕ್ಯಾಪಿಟಲ್‌ ಎಂಬ ಸಂಸ್ಥೆಯು ‘ಎಲಾರ ಇಂಡಿಯಾ ಅಪಾರ್ಚುನಿಟೀಸ್‌ ಫಂಡ್’ (ಎಲಾರ ಐಒಎಫ್) ಎಂಬ ಫಂಡ್ ನಿರ್ವಹಣೆ ಮಾಡುತ್ತಿದೆ. ಈ ಫಂಡ್‌ ಮೂಲಕ ಎಲಾರ ಕ್ಯಾಪಿಟಲ್ ಅದಾನಿ ಸಮೂಹದಲ್ಲಿ ಅಧಿಕ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ಇದು ಮಾರಿಷಸ್‌ನಲ್ಲಿ ನೋಂದಾಯಿತ ಕಂಪನಿ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ವರದಿಯಲ್ಲಿ ವಿವರಿಸಲಾಗಿದೆ.

ಎಲಾರ ಕ್ಯಾಪಿಟಲ್‌, ಬೆಂಗಳೂರು ಮೂಲದ ಅಲ್ಫಾ ಡಿಸೈನ್ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ನ (ಎಡಿಟಿಪಿಎಲ್‌) ಪ್ರವರ್ತಕ ಕಂಪನಿಯಾಗಿದೆ. ಅದಾನಿ ಸಮೂಹ ಕೂಡ ಎಡಿಟಿಪಿಎಲ್‌ನ ಪ್ರವರ್ತಕ ಕಂಪನಿಗಳಲ್ಲೊಂದು ಎಂದು ವರದಿಯಲ್ಲಿ ಹೇಳಲಾಗಿದೆ.

2003ರಲ್ಲಿ ಸ್ಥಾಪಿತ ಈ ಕಂಪನಿಯು ಇಸ್ರೊ ಹಾಗೂ ಡಿಆರ್‌ಡಿಒಗೆ ಅಗತ್ಯವಿರುವ ಸಾಧನಗಳನ್ನು ಪೂರೈಸುತ್ತದೆ. ಕ್ಷಿಪಣಿ ಹಾಗೂ ರಾಡಾರ್‌ ವ್ಯವಸ್ಥೆಗಳನ್ನು ಮೇಲ್ದರ್ಜೆಗೇರಿಸುವುದು ಹಾಗೂ ಡಿಜಿಟಲೀಕರಣಗೊಳಿಸಲು ₹ 590 ಕೋಟಿ ವೆಚ್ಚದ ಗುತ್ತಿಗೆಯನ್ನು 2020ರಲ್ಲಿ ಎಡಿಟಿಪಿಎಲ್‌ಗೆ ಕೇಂದ್ರ ರಕ್ಷಣಾ ಸಚಿವಾಲಯ ನೀಡಿದೆ.

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಸಹ ಈ ವರದಿಯನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಆಸ್ಕರ್‌ ಪುರಸ್ಕಾರದ ಛುಪಾ ರುಸ್ತುಂ ವಿಭಾಗದ ಪ್ರಶಸ್ತಿಯು ಡಿಆರ್‌ಡಿಒ ಹಾಗೂ ಗೃಹ ಸಚಿವಾಲಯಕ್ಕೆ ಸಲ್ಲಬೇಕು. ಸೂಕ್ಷ್ಮವಾದ ರಕ್ಷಣಾ ಗುತ್ತಿಗೆಗಳನ್ನು ವಿದೇಶದ ಅಪರಿಚಿತ ಕಂಪನಿಗಳು ನಿರ್ವಹಿಸುತ್ತಿರುವುದಕ್ಕೆ ಸಂತಸವಾಗಿದೆ’ ಎಂದು ಮೊಯಿತ್ರಾ ಟ್ವೀಟ್‌ ಮಾಡಿದ್ದಾರೆ.

ಶಿವಸೇನಾ (ಉದ್ಧವ್‌ ಠಾಕ್ರೆ ಬಣ) ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರೂ ಈ ವರದಿಯನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡು, ಕೇಂದ್ರದ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.