ADVERTISEMENT

ದತ್ತಾಂಶ ಸುರಕ್ಷತಾ ಕಾಯ್ದೆ ಸೆಕ್ಷನ್‌ 44 (3) ತೆರವಿಗೆ ‘ಇಂಡಿಯಾ’ ಆಗ್ರಹ

ಪಿಟಿಐ
Published 10 ಏಪ್ರಿಲ್ 2025, 13:49 IST
Last Updated 10 ಏಪ್ರಿಲ್ 2025, 13:49 IST
   

ನವದೆಹಲಿ: ಡಿಜಿಟಲ್‌ ವೈಯಕ್ತಿಕ ದತ್ತಾಂಶ ಸುರಕ್ಷತಾ ಕಾಯ್ದೆ (ಡಿಪಿಡಿಪಿ) ಸೆಕ್ಷನ್‌ 44 (3) ಅನ್ನು ರದ್ದುಗೊಳಿಸುವಂತೆ ‘ಇಂಡಿಯಾ’ ಒಕ್ಕೂಟ ಗುರುವಾರ ಆಗ್ರಹಿಸಿದೆ.

ಕಾಂಗ್ರೆಸ್‌, ಡಿಎಂಕೆ, ಉದ್ಧವ್‌ ಶಿವಸೇನೆ, ಸಿಪಿಐ–ಎಂ, ಎಸ್‌ಪಿ, ಆರ್‌ಜೆಡಿ ಸೇರಿದಂತೆ ‘ಇಂಡಿಯಾ’ ಕೂಟದ ಹಲವು ನಾಯಕರು ದೆಹಲಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಈ ಆಗ್ರಹ ಮುಂದಿಟ್ಟಿದ್ದಾರೆ. ಜತೆಗೆ ‘ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅನ್ನು ಡಿಪಿಡಿಪಿಯ ಸೆಕ್ಷನ್‌ 44(3) ನಾಶಗೊಳಿಸುತ್ತಿದೆ’ ಎಂದೂ ಆರೋಪಿಸಿದ್ದಾರೆ. ‌

ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ಗೌರವ್‌ ಗೊಗೋಯಿ ಮಾತನಾಡಿ, ‘ಡಿಪಿಡಿಪಿ ಕಾಯ್ದೆಯ ಸೆಕ್ಷನ್‌ 44 (3) ಅನ್ನು ರದ್ದುಗೊಳಿಸಲು ಕೋರಿ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಎಸ್ಪಿ ನಾಯಕ ಅಖಿಲೇಶ್‌ ಯಾದವ್‌ ಸೇರಿದಂತೆ ಇಂಡಿಯಾ ಒಕ್ಕೂಟದ 120 ಸಂಸದರು ಮನವಿ ಪತ್ರಕ್ಕೆ ಸಹಿ ಮಾಡಿದ್ದೇವೆ. ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಈ ಮನವಿಪತ್ರ ಸಲ್ಲಿಸಲಾಗುವುದು’ ಎಂದಿದ್ದಾರೆ.

ADVERTISEMENT

ಅಲ್ಲದೇ, ‘2023ರಲ್ಲಿ ಕಾಯ್ದೆ ಅಂಗೀಕಾರಗೊಂಡಿತ್ತು. ಅದಕ್ಕೂ ಮುನ್ನ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿ ಪರಿಶೀಲಿಸಿತ್ತು. ಆ ಸಮಿತಿಯಲ್ಲಿ ನಾನೂ ಇದ್ದೆ. ಪರಿಶೀಲನೆ ವೇಳೆ, ಆರ್‌ಟಿಐ ಕಾಯ್ದೆಯ ಸೆಕ್ಷನ್‌ 8(1) (ಜೆ)ಗೆ ಪರ್ಯಾಯವಾಗಿ, ಡಿಪಿಡಿಪಿಯಲ್ಲಿ ಸೆಕ್ಷನ್‌ 44 (3) ಅನ್ನು ಸೇರಿಸುವ ಯಾವುದೇ ಪ್ರಸ್ತಾಪ ಇರಲಿಲ್ಲ. ಆದರೆ, ವಿಧೇಯಕಕ್ಕೆ ಅನುಮೋದನೆ ನೀಡುವಾಗ ಕೊನೆಯ ಹಂತದಲ್ಲಿ ಸರ್ಕಾರ ಈ ಬದಲಾವಣೆ ತಂದಿದೆ. ಈ ಮೂಲಕ ನಾಗರಿಕರ ಹಕ್ಕನ್ನು ಡಿ‍ಪಿಡಿಪಿ ಕಾಯ್ದೆ ಕಸಿದಿದೆ’ ಎಂದೂ ದೂಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.