ADVERTISEMENT

ಬಿಪಿನ್‌ ರಾವತ್‌ಗೆ ಗೌರವ ಸಲ್ಲಿಸಲು ಅವಕಾಶ ನಿರಾಕರಣೆ: ವಿಪಕ್ಷಗಳ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2021, 19:14 IST
Last Updated 9 ಡಿಸೆಂಬರ್ 2021, 19:14 IST
ಅಮಾನತುಗೊಂಡ ಸಂಸದರು ಸಂಸತ್ ಅವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಭಿತ್ತಪತ್ರ ಹಿಡಿದು ಜನರಲ್ ರಾವತ್ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು–ಪಿಟಿಐ ಚಿತ್ರ
ಅಮಾನತುಗೊಂಡ ಸಂಸದರು ಸಂಸತ್ ಅವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಭಿತ್ತಪತ್ರ ಹಿಡಿದು ಜನರಲ್ ರಾವತ್ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು–ಪಿಟಿಐ ಚಿತ್ರ   

ನವದೆಹಲಿ (ಪಿಟಿಐ): ಬಿಪಿನ್‌ ರಾವತ್‌ ಮತ್ತು ಇತರ ಸೇನಾ ಸಿಬ್ಬಂದಿಗೆ ಸಂಸತ್ತಿನ ಒಳಗೆ ಅಂತಿಮ ಗೌರವ ಸಲ್ಲಿಸಲು ಧರಣಿ ನಿರತ ವಿರೋಧ ಪಕ್ಷದ ಸದಸ್ಯರಿಗೆ ಸರ್ಕಾರ ಅನುವು ಮಾಡಲಿಲ್ಲ.ಸರ್ಕಾರದ ಈ ನಡೆಯನ್ನು ವಿರೋಧ ಪಕ್ಷಗಳು ಖಂಡಿಸಿವೆ.

ರಾಜ್ಯಸಭೆಯ 12 ಸದಸ್ಯರನ್ನು ಅಮಾನತು ಮಾಡಿರುವುದನ್ನು ವಿರೋಧಿಸಿ ಧರಣಿ ನಡೆಸುತ್ತಿರುವ ವಿರೋಧ ಪಕ್ಷಗಳ ನಾಯಕರು, ರಾವತ್‌ ನಿಧನದ ಕಾರಣಕ್ಕೆ ಗುರುವಾರ ಧರಣಿಯನ್ನು ಹಿಂಪಡೆದಿದ್ದರು. ವಿಪಕ್ಷಗಳು ಮನವಿ ಮಾಡಿಕೊಂಡಿದ್ದರ ಹೊರತಾಗಿಯೂ ಅವರಿಗೆ ಅವಕಾಶ ನೀಡಲಾಗಿಲ್ಲ ಎನ್ನಲಾಗಿದೆ.

ಸರ್ಕಾರದ ನಡೆಯನ್ನು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಖಂಡಿಸಿದ್ದಾರೆ. ‘ತಮಿಳುನಾಡಿನಲ್ಲಿ ನಡೆದ ದುರಂತ ಹಿನ್ನೆಲೆಯಲ್ಲಿ ನಾವು ನಮ್ಮ ಧರಣಿಯನ್ನು ರದ್ದುಪಡಿಸಿದ್ದೆವು. ಸಂಸತ್ತಿನ ಒಳಗೆ ಬಂದು ಮೃತರಿಗೆ ಗೌರವ ಸೂಚಿಸಲು ಅವಕಾಶ ನೀಡಬೇಕು ಎಂದು ಸರ್ಕಾರವನ್ನು ಕೇಳಿಕೊಂಡೆವು. ಆದರೆ ನಮ್ಮ ಮನವಿಯನ್ನು ತಿರಸ್ಕರಿಸಲಾಯಿತು. ಸರ್ಕಾರದ ಈ ನಡವಳಿಕೆಯನ್ನು ನಾವು ಖಂಡಿಸುತ್ತೇವೆ. ಇಲ್ಲಿ ಯಾವ ರೀತಿಯ ಪ್ರಜಾಪ್ರಭುತ್ವ ಇದೆ. ಸೇನೆಯ ಅತ್ಯುನ್ನತ ಅಧಿಕಾರಿಗೆ ಗೌರವ ಸೂಚಿಸಲು ನಾಯಕರಿಗೆ ಅವಕಾಶ ನೀಡದಿರುವಾಗ ಸಂಸತ್ತನ್ನು ಹೇಗೆ ನಡೆಸುತ್ತಾರೆ’ ಎಂದು ಹೇಳಿದ್ದಾರೆ.

ADVERTISEMENT

‘ಸಂಸತ್ತು ಇರುವುದು ಕೇವಲ ಅವರ ಬಳಕೆಗಾಗಿ, ವಿರೋಧ ಪಕ್ಷಗಳಿಗಾಗಿ ಅಲ್ಲ ಎಂದು ಸರ್ಕಾರ ತಿಳಿದಂತಿದೆ. ಇದು ನೋವಿನ ಸಂಗತಿ’ ಎಂದು ಡಿಎಂಕೆ ಸಂಸದ ಟಿ.ಕೆ. ಇಳಂಗೋವನ್‌ ಹೇಳಿದ್ದಾರೆ.

‘ಸರ್ಕಾರ ದೊಡ್ಡ ತಪ್ಪನ್ನು ಮಾಡಿದೆ. ಇಂಥ ವಿಷಯಗಳಲ್ಲಿ ರಾಜಕೀಯ ಮಾಡಬೇಡಿ’ ಎಂದು ಆರ್‌ಜೆಡಿಯ ಸಂಸದ ಮನೋಜ್‌ ಝಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.