ADVERTISEMENT

ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ವಿಪಕ್ಷಗಳ ಕರೆ

ಕೇಂದ್ರ ಸರ್ಕಾರದ್ದು ಟೊಳ್ಳು ಹೇಳಿಕೆ ಎಂಬುದು ಬಹಿರಂಗ: ವಿಪಕ್ಷಗಳ ಟೀಕೆ

ಪಿಟಿಐ
Published 23 ಏಪ್ರಿಲ್ 2025, 0:20 IST
Last Updated 23 ಏಪ್ರಿಲ್ 2025, 0:20 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ಜಮ್ಮು–ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದಿರುವ ಉಗ್ರರ ದಾಳಿಯನ್ನು ಬಲವಾಗಿ ಖಂಡಿಸಿರುವ ವಿರೋಧ ಪಕ್ಷಗಳು ಭಯೋತ್ಪಾದನೆ ವಿರುದ್ದ ಒಗ್ಗಟ್ಟಿನ ಹೋರಾಟ ನಡೆಸುವುದಾಗಿ ಮಂಗಳವಾರ ಹೇಳಿವೆ.‌

‘ಜಮ್ಮು–ಕಾಶ್ಮೀರದಲ್ಲಿ ಸಹಜಸ್ಥಿತಿ ಇದೆ ಎಂದು ಟೊಳ್ಳು ಹೇಳಿಕೆಗಳನ್ನು ನೀಡುವ ಬದಲು ಈ ಕೃತ್ಯಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಹೊಣೆ ಹೊರಬೇಕು’ ಎಂದು ಆಗ್ರಹಿಸಿವೆ.

‘ಉಗ್ರರ ದಾಳಿಯು ಮೋದಿ ಮತ್ತು ಶಾ ಅವರ ಟೊಳ್ಳು ಮಾತುಗಳನ್ನು ಬಹಿರಂಗಪಡಿಸಿದೆ’ ಎಂದು ಸಿಪಿಎಂ ಟೀಕಿಸಿದೆ.

ADVERTISEMENT

‘ಪ್ರವಾಸಿಗರನ್ನು ಗುರಿಯಾಗಿಸಿ ನಡೆದಿರುವ ಈ ನೀಚ ಕೃತ್ಯ ಮಾನವೀಯತೆಗೇ ಕಪ್ಪುಚುಕ್ಕೆ ಇದ್ದಂತೆ. ರಾಷ್ಟ್ರದ ಭದ್ರತೆಯೇ ಪ್ರಮುಖವಾದದ್ದು. ಹೀಗಾಗಿ ಸೂಕ್ತ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

‘ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ಇಡೀ ದೇಶವೇ ಒಟ್ಟಾಗಿ ಹೋರಾಡಲಿದೆ’ ಎಂದಿರುವ ಖರ್ಗೆ, ಈ ದಾಳಿಯಲ್ಲಿ ತಮ್ಮವರನ್ನು ಕಳೆದಕೊಂಡಿರುವ ಕುಟುಂಬಗಳಿಗೆ ಸಂತಾಪ ಹೇಳಿದ್ದಾರೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದೂ ಹಾರೈಸಿದ್ದಾರೆ.

‘ಇದು ಹೇಡಿತನದ ಕೃತ್ಯ’ ಎಂದು ಹೇಳಿರುವ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ‘ಇದು ಖಂಡನೀಯ ಹಾಗೂ ಹೃದಯವಿದ್ರಾವಕ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಇಡೀ ದೇಶವೇ ಒಂದಾಗಿ ನಿಲ್ಲಲಿದೆ’ ಎಂದೂ ಹೇಳಿದ್ದಾರೆ.

‘ಜಮ್ಮು–ಕಾಶ್ಮೀರದಲ್ಲಿ ಸಹಜಸ್ಥಿತಿ ನೆಲಸಿದೆ ಎಂದು ಸುಳ್ಳು ಹೇಳುವ ಬದಲು ಇಂತಹ ಬರ್ಬರ ಘಟನೆಗಳು ಮತ್ತೆ ಮರುಕಳಿಸದಂತೆ ಹಾಗೂ ಮುಗ್ಧ ಭಾರತೀಯರು ಈ ರೀತಿ ಪ್ರಾಣ ಕಳೆದುಕೊಳ್ಳುವುದನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು’ ಎಂದೂ ರಾಹುಲ್‌ ಆಗ್ರಹಿಸಿದ್ದಾರೆ.

ರಾಹುಲ್‌ ಗಾಂಧಿ
ಭಯೋತ್ಪಾದಕರ ದಾಳಿಯಿಂದ ಬಹಳ ದುಃಖಿತಳಾಗಿರುವೆ. ಇದು ಅತ್ಯಂತ ಖಂಡನೀಯ ಹಿಂಸಾಕೃತ್ಯ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು
ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ
ಯಾವುದೇ ದೃಷ್ಟಿಯಿಂದ ನೋಡಿದರೂ ಇದು ಖಂಡನೀಯ ದಾಳಿ. ಭಯೋತ್ಪಾದಕ ದಾಳಿ ಕುರಿತ ಚಿತ್ರಗಳು ಭಯಂಕರ ಹಾಗೂ ಹೃದಯವಿದ್ರಾವಕ. ಜಮ್ಮು–ಕಾಶ್ಮೀರದಲ್ಲಿ ಸುರಕ್ಷಿತ ವಾತಾವರಣ ನಿರ್ಮಿಸಿದಾಗ ಮಾತ್ರ ಸ್ಥಳೀಯರು ಹಾಗೂ ಪ್ರವಾಸಿಗರು ಕೂಡ ಸುರಕ್ಷಿತವಾಗಿರುತ್ತಾರೆ
–ಅಖಿಲೇಶ ಯಾದವ್ ಸಮಾಜವಾದಿ ಪಕ್ಷದ ಮುಖ್ಯಸ್ಥ
ಉಗ್ರರು ನಡೆಸಿರುವ ಈ ಹೇಡಿತನದ ದಾಳಿ ಖಂಡನೀಯ. ಮುಗ್ಧರನ್ನು ಗುರಿಯಾಗಿಸಿದ ನಡೆದ ಕೃತ್ಯ ಮಾನವೀಯತೆ ಮೇಲಿನ ದಾಳಿ. ಎಲ್ಲ ಬಗೆಯ ಭಯೋತ್ಪಾದನೆಯನ್ನು ಪಕ್ಷ ಖಂಡಿಸುತ್ತದೆ. ಈ ದುಃಖದ ಗಳಿಗೆಯಲ್ಲಿ ದೇಶವೇ ಒಗ್ಗಟ್ಟಾಗಿದೆ
–ಅರವಿಂದ ಕೇಜ್ರಿವಾಲ್ ಎಎಪಿ ಸಂಚಾಲಕ
ಉಗ್ರರ ದಾಳಿ ಅತ್ಯಂತ ಖಂಡನೀಯ. ತಪ್ಪಿತಸ್ಥರು ಕಠಿಣ ಶಿಕ್ಷೆ ಅರ್ಹರು
–ಅಸಾದುದ್ದೀನ್‌ ಒವೈಸಿ ಎಐಎಂಐಎಂ ಮುಖ್ಯಸ್ಥ
ಈ ಹೀನ ಕೃತ್ಯ ಎಸಗಿದವರ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗುವುದನ್ನು ಕೇಂದ್ರ ಸರ್ಕಾರ ಖಾತ್ರಿಪಡಿಸಬೇಕು. ಜಮ್ಮು–ಕಾಶ್ಮೀರ ಜನರ ಸಮಸ್ಯೆಗಳಿಗೆ ರಾಜಕೀಯ ಪರಿಹಾರ ಕಂಡುಕೊಳ್ಳಲು ಕೇಂದ್ರ ಕ್ರಮ ಕೈಗೊಳ್ಳಬೇಕು
–ಸಿಪಿಎಂ
ಈ ಭಯೋತ್ಪಾದಕ ದಾಳಿಯನ್ನು ಆಕ್ರಮಣಕಾರಿ ದೇಶಭಕ್ತಿ ಮತ್ತು ಕೋಮು ಸಂಕಥನ ಸೃಷ್ಟಿಗೆ ಬಳಸಿಕೊಳ್ಳುವ ಪ್ರಯತ್ನಗಳು ನಡೆಯಬಾರದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದಾದ್ಯಂತ ಜನರು ಒಟ್ಟಾಗಿ ನಿಲ್ಲುವುದು ಅಗತ್ಯ. ಇಂತಹ ದುರಂತಗಳನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ವಿಭಜಕ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕು
–ಸಿಪಿಎಂ(ಎಂಎಲ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.