ADVERTISEMENT

ಸ್ವಾಭಿಮಾನ ಕೆಣಕಲು ಬಂದರೆ ತಕ್ಕ ಉತ್ತರ: ರಾಜನಾಥ್ ಸಿಂಗ್

ಪಿಟಿಐ
Published 14 ಜನವರಿ 2021, 15:04 IST
Last Updated 14 ಜನವರಿ 2021, 15:04 IST
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್   

ಬೆಂಗಳೂರು: ಭಾರತ ಯುದ್ಧವನ್ನು ಬಯಸುವುದಿಲ್ಲ. ಆದರೆ ಯಾವುದೇ ಮಹಾಶಕ್ತಿ ದೇಶದ ಸ್ವಾಭಿಮಾನವನ್ನು ಕೆಣಕಲು ಬಂದರೆ ಅದಕ್ಕೆ ಯೋಧರು ತಕ್ಕ ಉತ್ತರ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ತಿಳಿಸಿದ್ದಾರೆ.

ನೆರೆಯ ಚೀನಾದೊಂದಿಗೆ ಕಳೆದ ಎಂಟು ತಿಂಗಳಿನಿಂದ ಗಡಿ ವಿವಾದ ಮುಂದುವರಿದಿರುವ ಮಧ್ಯೆ ಹೇಳಿಕೆ ನೀಡಿರುವ ರಾಜನಾಥ್ ಸಿಂಗ್, ನಾವು ಯುದ್ಧವನ್ನು ಬಯಸುವುದಿಲ್ಲ. ನಾವು ಎಲ್ಲರ ಸುರಕ್ಷತೆಯನ್ನು ಕಾಪಾಡುವುದರ ಪರವಾಗಿದ್ದೇವೆ. ಆದರೆ ಯಾವುದೇ ಸೂಪರ್ ಪವರ್ ನಮ್ಮ ಸ್ವಾಭಿಮಾನವನ್ನು ನೋಯಿಸಲು ಬಂದರೆ ನಮ್ಮ ಯೋಧರು ಸೂಕ್ತ ಉತ್ತರ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೇಳಿದರು.

ಭಾರತ ಎಂದಿಗೂ ಯಾವುದೇ ರಾಷ್ಟ್ರದೊಂದಿಗೆ ಯುದ್ಧವನ್ನು ಬಯಸವುದಿಲ್ಲ. ಬದಲಾಗಿ ನೆರೆಹೊರೆಯವರೊಂದಿಗೆ ಶಾಂತಿ ಮತ್ತು ಸ್ನೇಹ ಸಂಬಂಧವನ್ನು ಉಳಿಸಿಕೊಳ್ಳಲು ಆದ್ಯತೆ ನೀಡುತ್ತದೆ ಎಂದು ರಕ್ಷಣಾ ಸಚಿವರು ತಿಳಿಸಿದರು.

ADVERTISEMENT

ಭಾರತ ತನ್ನ ನೆರೆಹೊರೆಯ ರಾಷ್ಟ್ರದೊಂದಿಗೆ ಶಾಂತಿ ಹಾಗೂ ಸ್ನೇಹ ಸಂಬಂಧವನ್ನು ಬಯಸುತ್ತದೆ. ಯಾಕೆಂದರೆ ಅದು ನಮ್ಮ ರಕ್ತ ಮತ್ತು ಸಂಸ್ಕೃತಿಯಲ್ಲಿ ಅಡಗಿದೆ ಎಂದು ಬೆಂಗಳೂರಿನ ಭಾರತೀಯ ವಾಯುಪಡೆಯ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಳಿಸಿದರು.

ಚೀನಾ ವಿರುದ್ಧದ ಬಿಕ್ಕಟ್ಟನ್ನು ಉಲ್ಲೇಖಿಸಿದ ರಾಜನಾಥ್ ಸಿಂಗ್, ಭಾರತೀಯ ಸೈನಿಕರು ಅತ್ಯುತ್ತಮ ಧೈರ್ಯ ಹಾಗೂ ತಾಳ್ಮೆಯನ್ನು ಪ್ರದರ್ಶಿಸಿದ್ದಾರೆ. ಪ್ರತಿಯೊಬ್ಬ ಭಾರತೀಯನಿಗೂ ಈ ಬಗ್ಗೆ ಹೆಮ್ಮೆಯಿದೆ ಎಂದರು.

ಪಾಕಿಸ್ತಾನ ನೆಲದಿಂದಲೂ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಭಾರತೀಯ ಯೋಧರು ಅಸಾಧಾರಣ ಧೈರ್ಯವನ್ನು ತೋರಿದ್ದಾರೆ ಎಂದು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.