ನವದೆಹಲಿ: ಮಗುವಿಗೆ ಹಾಲುಣಿಸುವ ತಾಯಂದಿರ ಖಾಸಗೀತನವನ್ನು ಖಚಿತಪಡಿಸಿಕೊಳ್ಳಲು ದೇಶದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಹಾಲುಣಿಸುವ ಕೊಠಡಿಗಳನ್ನು ಸ್ಥಾಪಿಸಲಾಗಿದೆ ಎಂದು ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಶುಕ್ರವಾರ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ತೆಲಂಗಾಣ ರಾಜ್ಯದ 11 ನಿಲ್ದಾಣಗಳು ಸೇರಿದಂತೆ ದೇಶದಾದ್ಯಂತ 423 ರೈಲು ನಿಲ್ದಾಣಗಳಲ್ಲಿ ಹಾಲುಣಿಸುವ ಕೊಠಡಿಗಳು ಲಭ್ಯವಿದೆ ಎಂದು ಅವರು ಹೇಳಿದ್ದಾರೆ.
ತೆಲಂಗಾಣದ ಭಾರತ ರಾಷ್ಟ್ರ ಸಮಿತಿ ಸಂಸದ ರವಿಚಂದ್ರ ವಡ್ಡಿರಾಜು ಈ ವಿಷಯವನ್ನು ಪ್ರಸ್ತಾಪಿಸಿ, ತೆಲಂಗಾಣ ಸೇರಿದಂತೆ ದೇಶದಾದ್ಯಂತದ ರೈಲು ನಿಲ್ದಾಣಗಳಲ್ಲಿ ಲಭ್ಯವಿರುವ ಶಿಶು ಆಹಾರ ಕಕ್ಷೆಗಳ (ಶಿಶುವಿಗೆ ಹಾಲುಣಿಸುವ ಕೊಠಡಿಗಳು) ಪ್ರಸ್ತುತ ಸ್ಥಿತಿ, ಅವುಗಳ ಸಂಖ್ಯೆ, ಬಳಕೆ ಹಾಗೂ ಹೆಚ್ಚಿನ ಬೇಡಿಕೆಯಿರುವ ರಾಜ್ಯಗಳ ದತ್ತಾಂಶದ ವಿವರ ನೀಡುವಂತೆ ಕೇಳಿದ್ದರು.
ತಾಯಂದಿರು ಮತ್ತು ಶಿಶುಗಳಿಗೆ ಈ ಕೊಠಡಿಗಳ ಸರಿಯಾದ ನಿರ್ವಹಣೆ, ಸ್ವಚ್ಛತೆ ಮತ್ತು ಸುರಕ್ಷತೆ ಖಚಿತಪಡಿಸಲು ರೈಲ್ವೆ ಸಚಿವಾಲಯ ತೆಗೆದುಕೊಂಡ ಕ್ರಮಗಳನ್ನು ವಡ್ಡಿರಾಜು ಪ್ರಶ್ನಿಸಿದ್ದರು.
ನಿಲ್ದಾಣಗಳಲ್ಲಿ ಶಿಶು ಆಹಾರ ಕಕ್ಷೆಯ ಸರಿಯಾದ ನಿರ್ವಹಣೆ ಮತ್ತು ಶುಚಿತ್ವವನ್ನು ವಲಯವಾರು ರೈಲ್ವೆ ಆಡಳಿತ ಮಂಡಳಿ ಖಚಿತಪಡಿಸುತ್ತವೆ. ನಿಲ್ದಾಣಗಳಲ್ಲಿ ತಾಯಂದಿರು ಮತ್ತು ಶಿಶುಗಳಿಗೆ ಆರಾಮದಾಯಕ ಮತ್ತು ಸುರಕ್ಷಿತ ವಾತಾವರಣವನ್ನು ಕಾಪಾಡಿಕೊಳ್ಳಲು ಆಗಾಗ್ಗೆ ತಪಾಸಣೆಗಳನ್ನು ಸಹ ನಡೆಸಲಾಗುತ್ತದೆ ಎಂದು ವೈಷ್ಣವ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.