ADVERTISEMENT

30 ವರ್ಷಗಳಿಂದ ಹೈಕೋರ್ಟ್‌ಗಳಲ್ಲಿ 71,000ಕ್ಕೂ ಅಧಿಕ ಪ್ರಕರಣಗಳು ಬಾಕಿ: ಕೇಂದ್ರ

ಪಿಟಿಐ
Published 28 ಜುಲೈ 2023, 13:10 IST
Last Updated 28 ಜುಲೈ 2023, 13:10 IST
   

ನವದೆಹಲಿ: ಕಳೆದ 30 ವರ್ಷಗಳಲ್ಲಿ ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ 71 ಸಾವಿರಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಲೋಕಸಭೆಗೆ ತಿಳಿಸಿದೆ.

ಅಲ್ಲದೇ ಸುಮಾರು 1.01 ಲಕ್ಷ ಪ್ರಕರಣಗಳು 30ಕ್ಕೂ ಅಧಿಕ ವರ್ಷಗಳಿಂದ ಕೆಳ ನ್ಯಾಯಾಲಯಗಳಲ್ಲಿ ಹಾಗೇ ಇವೆ ಎಂದು ಸರ್ಕಾರ ಹೇಳಿದೆ.

ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಲಿಖಿತವಾಗಿ ಉತ್ತರಿಸಿದ ಕಾನೂನು ಸಚಿವ ಅರ್ಜುನ್ ರಾಮ್‌ ಮೇಘ್ವಾಲ್‌, ಈ ವರ್ಷ ಜುಲೈ 24ರ ವರೆಗೆ, ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ 30ಕ್ಕೂ ಹೆಚ್ಚು ವರ್ಷ ಹಳೆಯದಾದ 71,204 ಪ್ರಕರಣಗಳು ಬಾಕಿ ಇವೆ. 1.01 ಲಕ್ಷ ಪ್ರಕರಣಗಳು ಜಿಲ್ಲಾ ಹಾಗೂ ಕೆಳ ನ್ಯಾಯಾಲಯಗಳಲ್ಲಿ ಬಾಕಿ ಇವೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಸುಪ್ರೀಂ ಕೋರ್ಟ್‌, 25 ಹೈಕೋರ್ಟ್‌ಗಳು ಹಾಗೂ ಇನ್ನಿತರ ಕೆಳ ನ್ಯಾಯಾಲಯಗಳಲ್ಲಿ ಒಟ್ಟಾರೆ ಸುಮಾರು 5.02 ಕೋಟಿ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ ಎಂದು ಅವರು ಜುಲೈ 20 ರಂದು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ದರು.

ಇಂಟಿಗ್ರೇಟೆಡ್ ಕೇಸ್ ಮ್ಯಾನೇಜ್ಮೆಂಟ್ ಸಿಸ್ಟಮ್ (ICMIS) ದತ್ತಾಂಶದಲ್ಲಿ ಲಭ್ಯ ಇರುವ ಮಾಹಿತಿ ಪ್ರಕಾರ ಜುಲೈ 1ರ ವೇಳೆಗೆ ಸುಪ್ರೀಂ ಕೋರ್ಟ್‌ನಲ್ಲಿ 69,766 ಪ್ರಕರಣಗಳು ಬಾಕಿ ಇವೆ.

ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಜಾಲದಲ್ಲಿ ಲಭ್ಯ ಇರುವ ಮಾಹಿತಿ ಅನ್ವಯ, ಹೈಕೋರ್ಟ್‌ಗಳಲ್ಲಿ ಮತ್ತು ಜಿಲ್ಲಾ ಹಾಗೂ ಕೆಳ ನ್ಯಾಯಾಲಯಗಳಲ್ಲಿ ಜುಲೈ 14ರ ವೇಳೆಗೆ ಕ್ರಮವಾಗಿ 60.62 ಲಕ್ಷ ಹಾಗೂ 4.41 ಕೋಟಿ ಪ್ರಕರಣಗಳು ಬಾಕಿ ಇವೆ.

ನ್ಯಾಯಾಧೀಶರ ಹುದ್ದೆ ಖಾಲಿ ಇರುವುದು ಮಾತ್ರ ಪ್ರಕರಣ ಇತ್ಯರ್ಥವಾಗದೆ ಉಳಿಯಲು ಕಾರಣವಲ್ಲ ಎಂದು ಸಚಿವರು ಹೇಳಿದ್ದಾರೆ.

ಮೂಲಭೂತ ಸೌಕರ್ಯ ಹಾಗೂ ಸಿಬ್ಬಂದಿಗಳ ಕೊರತೆ, ಪ್ರಕರಣದ ಸಂಕೀರ್ಣತೆ, ಸಾಕ್ಷ್ಯಗಳ ವಿಧ, ತನಿಖಾ ಸಂಸ್ಥೆಗಳು, ಸಾಕ್ಷಿಗಳು ಸೇರಿ ಸಂಬಂಧಪಟ್ಟವರ ಸಹಕಾರ, ಅರ್ಜಿ ಸಲ್ಲಿಸುವ ನಿಯಮಾವಳಿಗಳು ಮುಂತಾದವುಗಳಿಂದ ಪ್ರಕರಣಗಳ ಇತ್ಯರ್ಥ ತಡವಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.