ADVERTISEMENT

ಡಾ.ಬಿ.ಎಂ.ಹೆಗ್ಡೆ, ಎಸ್‌ಪಿಬಿಗೆ ಪದ್ಮವಿಭೂಷಣ; ಚಂದ್ರಶೇಖರ ಕಂಬಾರ ಪದ್ಮಭೂಷಣ

2021ರ ಪದ್ಮ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 18:47 IST
Last Updated 25 ಜನವರಿ 2021, 18:47 IST
ಡಾ.ಬಿ.ಎಂ.ಹೆಗ್ಡೆ, ಎಸ್‌.ಪಿ ಬಾಲಸುಬ್ರಹ್ಮಣ್ಯಂ, ಚಂದ್ರಶೇಖರ ಕಂಬಾರ
ಡಾ.ಬಿ.ಎಂ.ಹೆಗ್ಡೆ, ಎಸ್‌.ಪಿ ಬಾಲಸುಬ್ರಹ್ಮಣ್ಯಂ, ಚಂದ್ರಶೇಖರ ಕಂಬಾರ    

ನವದೆಹಲಿ: ಹಿನ್ನೆಲೆ ಗಾಯಕ ಎಸ್‌.ಪಿ.ಬಾಲಸುಬ್ರಮಣ್ಯಂ, ರಾಜ್ಯದ ಹೃದ್ರೋಗ ತಜ್ಞ ಬಿ.ಎಂ.ಹೆಗ್ಡೆ, ಸೇರಿದಂತೆ ಏಳು ಮಂದಿ ಈ ಸಾಲಿನ ಪದ್ಮ ವಿಭೂಷಣ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಹಿರಿಯ ನಾಟಕಕಾರ ಚಂದ್ರಶೇಖರ ಕಂಬಾರ ಸೇರಿ ಹತ್ತು ಮಂದಿ ಪದ್ಮಭೂಷಣ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಪದ್ಮಶ್ರೀ ಪುರಸ್ಕಾರಕ್ಕೆ ಕಲಾ ವಿಭಾಗದಲ್ಲಿ ರಾಜ್ಯದ ಹಿರಿಯ ನೃತ್ಯ ಕಲಾವಿದೆ ಮಂಜಮ್ಮ ಜೋಗತಿ, ಸಾಹಿತ್ಯ ಮತ್ತು ಶಿಕ್ಷಣ ವಿಭಾಗದಲ್ಲಿ ರಂಗಸಾಮಿ ಲಕ್ಷ್ಮೀನಾರಾಯಣ ಕಶ್ಯಪ್‌ ಮತ್ತು ಕ್ರೀಡಾ ವಿಭಾಗದಲ್ಲಿ ಕೆ.ವೈ.ವೆಂಕಟೇಶ್ ಅವರನ್ನು ಆಯ್ಕೆ ಮಾಡಲಾಗಿದೆ.

ಪದ್ಮವಿಭೂಷಣ ಪ್ರಶಸ್ತಿ

ADVERTISEMENT

* ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ
* ವೈದ್ಯಕೀಯ ಕ್ಷೇತ್ರದಲ್ಲಿ ಕರ್ನಾಟಕದ ಡಾ.ಬಿ.ಎಂ.ಹೆಗ್ಡೆ
* ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ (ಮರಣೋತ್ತರ)
* ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ನರಿಂದರ್‌ ಸಿಂಗ್‌ ಕಪಾನಿ (ಮರಣೋತ್ತರ)–ಅಮೆರಿಕ
* ಆಧ್ಯಾತ್ಮ– ಮೌಲಾನಾ ವಹೀದುದ್ದೀನ್‌ ಖಾನ್‌–ದೆಹಲಿ
* ಪುರಾತತ್ವ ಶಾಸ್ತ್ರ–ಬಿ.ಬಿ.ಲಾಲ್‌–ದೆಹಲಿ
* ಕಲೆ–ಸುದರ್ಶನ್‌ ಸಾಹೋ–ಒಡಿಶಾ

ಡಾ.ಬಿ.ಎಂ.ಹೆಗ್ಡೆ

2010 ರಲ್ಲಿ ನನಗೆ ಪದ್ಮಭೂಷಣ ಬಂದಿತ್ತು. ಆಗ ಪದ್ಮವಿಭೂಷಣ ನಿರೀಕ್ಷಿಸಿದ್ದೆ. ಈಗ ಬಂದಿದೆ. ಜನಸಾಮಾನ್ಯರಿಗೆ ಆರೋಗ್ಯದ ಅರಿವು ಮೂಡಿಸುವ ನಿಟ್ಟಿನಲ್ಲಿ ಇನ್ನಷ್ಟು ಒಳ್ಳೆಯ ಕೆಲಸ ಮಾಡಲು ಇದು ಪ್ರೇರೇಪಿಸಿದೆ. ಹಿಂದೆ ಗುಜರಾತ್ ಹೆಲ್ತ್ ಸೊಸೈಟಿ ಅಧ್ಯಕ್ಷನಾಗಿಯೂ ಕೆಲಸ ಮಾಡಿದ್ದೆ.

–ಡಾ.ಬಿ.ಎಂ.ಹೆಗ್ಡೆ

ಪದ್ಮಭೂಷಣ ಪ್ರಶಸ್ತಿ

* ಕಲೆ–ಕೃಷ್ಣನ್ ನಾಯರ್ ಶಾಂತಾಕುಮಾರಿ ಚಿತ್ರಾ–ಕೇರಳ
* ಸಾರ್ವಜನಿಕ ಕ್ಷೇತ್ರ– ತರುಣ್ ಗೊಗೊಯ್ (ಮರಣೋತ್ತರ)–ಅಸ್ಸಾಂ
* ಸಾಹಿತ್ಯ ಮತ್ತು ಶಿಕ್ಷಣ– ಚಂದ್ರಶೇಖರ ಕಂಬಾರ– ಕರ್ನಾಟಕ
* ಸಾರ್ವಜನಿಕ ಕ್ಷೇತ್ರ–ಸುಮಿತ್ರಾ ಮಹಾಜನ್–ಮಧ್ಯಪ್ರದೇಶ
* ನಾಗರಿಕ ಸೇವೆ–ನೃಪೇಂದ್ರ ಮಿಶ್ರಾ–ಉತ್ತರ ಪ್ರದೇಶ
* ಸಾರ್ವಜನಿಕ ಕ್ಷೇತ್ರ–ರಾಮ್ ವಿಲಾಸ್ ಪಾಸ್ವಾನ್(ಮರಣೋತ್ತರ) –ಬಿಹಾರ
* ಸಾರ್ವಜನಿಕ ಕ್ಷೇತ್ರ–ಕೇಶುಭಾಯ್ ಪಟೇಲ್(ಮರಣೋತ್ತರ)–ಗುಜರಾತ್‌
* ಆಧ್ಯಾತ್ಮ–ಕಲ್ಬೆ ಸಾದಿಕ್(ಮರಣೋತ್ತರ)–ಉತ್ತರ ಪ್ರದೇಶ
* ವಾಣಿಜ್ಯ ಮತ್ತು ಕೈಗಾರಿಕೆ–ರಜನಿಕಾಂತ್ ದೇವಿದಾಸ್ ಶ್ರಾಫ್–ಮಹಾರಾಷ್ಟ್ರ
* ಸಾರ್ವಜನಿಕ ಕ್ಷೇತ್ರ–ತರ್‌ಲೋಚನ್ ಸಿಂಗ್–ಹರಿಯಾಣ

ಪದ್ಮಶ್ರೀ ಪ್ರಶಸ್ತಿ ಪಡೆದ ಕರ್ನಾಟಕದವರು

* ಮಾತಾ ಬಿ. ಮಂಜಮ್ಮ ಜೋಗತಿ– ಕಲೆ
* ರಂಗಸ್ವಾಮಿ ಲಕ್ಷ್ಮಿನಾರಾಯಣ ಕಶ್ಯಪ್– ಸಾಹಿತ್ಯ ಮತ್ತು ಶಿಕ್ಷಣ
* ಕೆ. ವೈ. ವೆಂಕಟೇಶ್– ಕ್ರೀಡೆ

ಡಾ.ಬಿ.ಎಂ.ಹೆಗ್ಡೆಗೆ ಪದ್ಮವಿಭೂಷಣ

ಮಂಗಳೂರು: ಖ್ಯಾತ ಹೃದ್ರೋಗ ತಜ್ಞ ಡಾ.ಬೆಳ್ಳೆ ಮೋನಪ್ಪ ಹೆಗ್ಡೆ (ಡಾ.ಬಿ.ಎಂ.ಹೆಗ್ಡೆ) ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

1938ರ ಆಗಸ್ಟ್ 18ರಂದು ಜನಿಸಿದ ಹೆಗ್ಡೆ, ಹಿರಿಯಡಕದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ, ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಇಂಟರ್‌ಮೀಡಿಯೆಟ್ ಹಾಗೂ ಮದ್ರಾಸ್ ವಿಶ್ವವಿದ್ಯಾಲಯದಿಂದ ವೈದ್ಯ (ಎಂಬಿಬಿಎಸ್) ಪದವಿಯನ್ನು(1960) ಪಡೆದಿದ್ದಾರೆ.

ಲಖನೌ ವಿಶ್ವವಿದ್ಯಾಲಯದಲ್ಲಿ ಎಂ.ಡಿ. ಪದವಿ ಬಳಿಕ ಉನ್ನತ ಶಿಕ್ಷಣಕ್ಕಾಗಿ ಲಂಡನ್‌ಗೆ ತೆರಳಿದರು. ನೊಬೆಲ್ ಪುರಸ್ಕೃತ ಪ್ರೊ. ಬರ್ನಾರ್ಡ್ ಲೋವ್ನ್ ಜೊತೆ ಕೆಲಸ ಮಾಡಿದರು. ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಂಶುಪಾಲ ಮತ್ತು ಡೀನ್ ಆಗಿದ್ದರು. ಗುಜರಾತ್‌ ಹೆಲ್ತ್‌ ಸೊಸೈಟಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಮಣಿಪಾಲ ಉನ್ನತ ಶಿಕ್ಷಣ ಸಂಸ್ಥೆಯ (ಮಾಹೆ) ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದು, ಮಂಗಳೂರಿನಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದಾರೆ. ವೈದ್ಯಕೀಯ ವಿಜ್ಞಾನಗಳ ಸಾಹಿತ್ಯಕ್ಕೂ ಕೊಡುಗೆ ನೀಡಿದ್ದಾರೆ.

1997ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1999ರಲ್ಲಿ ಡಾ.ಬಿ.ಸಿ.ರಾಯ್ ರಾಷ್ಟ್ರೀಯ ಪ್ರಶಸ್ತಿ ಹಾಗೂ 2010ರಲ್ಲಿ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ– ಪುರಸ್ಕಾರಗಳಿಗೆ ಅವರು ಪಾತ್ರರಾಗಿದ್ದಾರೆ.

ಜೋಗತಿ ಕುಲದ ಹೆಮ್ಮೆ ಮಾತಾ ಮಂಜಮ್ಮ

ಮಾತಾ ಮಂಜಮ್ಮ

ಬಳ್ಳಾರಿ:ಜೋಗತಿ ಪರಂಪರೆಯ ಹೆಮ್ಮೆ, ಜಾನಪದ ಅಕಾಡೆಮಿ ಅಧ್ಯಕ್ಷೆ, ಜಿಲ್ಲೆಯ ಮಾತಾ ಮಂಜಮ್ಮ ಜೋಗತಿಯವರದ್ದು ನಾಲ್ಕು ದಶಕಗಳ ಹೋರಾಟದ ಬದುಕು.

ತಾಲ್ಲೂಕಿನ ಕಲ್ಲುಕಂಭದಲ್ಲಿ ಜನಿಸಿದ ಬಿ.ಮಂಜುನಾಥ ಶೆಟ್ಟಿ ‘ಮಂಗಳಮುಖಿ ಮಂಜಮ್ಮ’ನಾಗಿದ್ದೇ ಒಂದು ಚಾರಿತ್ರಿಕ ಮಹತ್ವದ ನಡೆ. ಹಸಿವು, ಅವರ ಕೈ ಹಿಡಿದು ನಡೆಸಿದ್ದು ಕಾಳವ್ವ ಜೋಗತಿ. ಅವಮಾನ, ಬಡತನ, ಬಹಿಷ್ಕಾರದಂಥ ನೋವುಗಳನ್ನು ಉಂಡು ಜೋಗತಿ ಬದುಕನ್ನು ಅಪ್ಪಿಕೊಂಡ ಮಂಜಮ್ಮ ನೃತ್ಯ, ಗಾಯನ, ಅಭಿನಯ, ಸಂಘಟನೆ, ಕಲಾ ತರಬೇತಿ ಎಲ್ಲದರಲ್ಲೂ ಎತ್ತಿದ ಕೈ.

1983ರಲ್ಲಿ ಹೊಸಪೇಟೆ ತಾಲೂಕಿನ ಹುಲಿಗೆಮ್ಮ ದೇಗುಲದಲ್ಲಿ ಜೋಗತಿಯಾಗಿ ದೀಕ್ಷೆ ಸ್ವೀಕರಿಸಿದ ಅವರು ಇಡೀ ಬದುಕನ್ನು ಜೋಗತಿ ಸಂಪ್ರದಾಯಕ್ಕೆ ಒಪ್ಪಿಸಿಕೊಂಡರು. ಈಗ ರಾಜ್ಯದೆಲ್ಲೆಡೆ, ರಾಜ್ಯದ ಹೊರಗೆ ನಡೆಯುವ ಪ್ರಮುಖ ಉತ್ಸವಗಳಲ್ಲಿ ಮಂಜಮ್ಮನ ಜೋಗತಿ ನೃತ್ಯ ಇದ್ದೇ ಇರುತ್ತದೆ. ಅಶಕ್ತ ಜೋಗತಿಯರ ಅಮ್ಮನಾಗಿ ಮಂಜಮ್ಮ ಮಾಡಿರುವ, ಮಾಡುತ್ತಿರುವ ಸೇವೆ ಕಡಿಮೆಯೇನಲ್ಲ.

ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಅವರು ಜಾನಪದ ಅಕಾಡೆಮಿಯ ಅಧ್ಯಕ್ಷೆಯಾಗಿಯೂ ನಾಡನ್ನು ಸುತ್ತಿದ್ದಾರೆ.

ಲೇಖಕ ಅರುಣ್‌ ಜೋಳದ ಕೂಡ್ಲಿಗಿ ನಿರೂಪಿಸಿರುವ ಮಂಜಮ್ಮನವರ ಆತ್ಮಕಥೆ ‘ನಡುವೆ ಸುಳಿವ ಹೆಣ್ಣು’ ಜ.31ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ.

‘ನೋವು, ಅವಮಾನಗಳನ್ನುಂಡು ಬೆಳೆದ ನನಗೆ ಪದ್ಮಶ್ರೀ ಪ್ರಶಸ್ತಿ ಬಂದಿದೆ ಎಂದು ಗೊತ್ತಾದ ಕೂಡಲೇ ಅಳು ಬಂತು. ಆ ಮಂಜಮ್ಮ ಈ ಮಂಜಮ್ಮ ನಾನೇನಾ ಎನ್ನಿಸಿದೆ. ಇದುನನ್ನೆಲ್ಲ ಜೋಗತಿಯರಿಗೆ, ಕರ್ನಾಟಕದ ಜನರಿಗೆ ಸಲ್ಲಬೇಕಾದ ಪ್ರಶಸ್ತಿ’ ಎಂದು ಪ್ರತಿಕ್ರಿಯಿಸಿದರು.

ಕನ್ನಡಕ್ಕೆ ಸಿಕ್ಕ ಪ್ರಶಸ್ತಿ: ಕಂಬಾರ

‘ನನಗೆ‘ಪದ್ಮಭೂಷಣ ಪ್ರಶಸ್ತಿ’ ಬರುತ್ತದೆ ಎಂಬ ಯಾವುದೇ ನಿರೀಕ್ಷೆ ಇರಲಿಲ್ಲ. ಇದು ಕನ್ನಡ ಸರಸ್ವತಿಗೆ ಸಿಕ್ಕ ಪ್ರಶಸ್ತಿ ಎಂದೇ ನಾನು ಭಾವಿಸಿದ್ದೇನೆ. ನಮ್ಮ ಭಾಷೆಯು ಅ‌ತ್ಯಂತ ಶ್ರೀಮಂತವಾಗಿದ್ದು, ಇದು ಎಲ್ಲವನ್ನೂ ಒಳಗೊಂಡಿದೆ. ಹಾಗಾಗಿ ಇಂಗ್ಲಿಷ್‌ ವ್ಯಾಮೋಹದಿಂದ ಹೊರಬಂದು, ಈ ಭಾಷೆಯ ಬಗ್ಗೆ ಎಲ್ಲರೂ ಗೌರವ ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆಗೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ದೊರೆಯುತ್ತಿದೆ ಎನ್ನುವುದಕ್ಕೆ ಈ ಪ್ರಶಸ್ತಿಯೇ ಸಾಕ್ಷಿ. ದೇಶದ ಎಲ್ಲ ಭಾಷೆಗಳಿಗೂಸ್ವಾಯತ್ತತೆ ಸಿಗಬೇಕು ಎಂದು ನಾನು ಮೊದಲಿನಿಂದಲೂ ಪ್ರತಿಪಾದಿಸುತ್ತಿದ್ದೇನೆ’ ಎಂದುಚಂದ್ರಶೇಖರ ಕಂಬಾರರು ಹೇಳಿದ್ದಾರೆ.

ಮಷೀನ್‌ ಇಂಟೆಲಿಜೆನ್ಸ್‌ನ ಸಾಧಕ ಡಾ. ಆರ್‌.ಎಲ್‌. ಕಶ್ಯಪ

ಅಮೆರಿಕದ ಪುರ್ಡು ವಿಶ್ವವಿದ್ಯಾಲಯದಲ್ಲಿಎಲೆಕ್ಟ್ರಿಕಲ್‌ ಮತ್ತು ಕಂಪ್ಯೂಟರ್‌ ಎಂಜಿನಿಯರ್‌ ಆಗಿದ್ದ ಡಾ. ರಂಗಸ್ವಾಮಿ ಲಕ್ಷ್ಮೀನಾರಾಯಣ ಕಶ್ಯಪ ಅವರು ಮಷೀನ್‌ ಇಂಟೆಲಿಜನ್ಸ್ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ಅವರ ಸಾಧನೆಯನ್ನು ಗಮನಿಸಿ ಜಾಗತಿಕ ಮಟ್ಟದ ಅನೇಕ ಸಂಸ್ಥೆಗಳು ಅವರಿಗೆ ಪ್ರಶಸ್ತಿ–ಪುರಸ್ಕಾರಗಳನ್ನು ನೀಡಿ ಗೌರವಿಸಿವೆ.

ತಮ್ಮ ವೃತ್ತಿಯ ಜತೆಯಲ್ಲೇ ಅವರು ವೇದ ಸಂಸ್ಕೃತಿ ಕ್ಷೇತ್ರದಲ್ಲೂ ಗಮನಾರ್ಹ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ನಾಲ್ಕು ವೇದಗಳನ್ನು ಇಂಗ್ಲಿಷ್‌ಗೆ ಭಾಷಾಂತರ ಮಾಡಿದ್ದಾರೆ. ಅಲ್ಲದೆ ವೇದ ಸೂಕ್ತಗಳಿಗೆ ಸಂಬಂಧಿಸಿದಂತೆ ಸುಮಾರು 25 ಪುಸ್ತಕಗಳನ್ನು ಬರೆದಿದ್ದಾರೆ. ಬೆಂಗಳೂರಿನ ನ್ಯಾಷನಲ್‌ ಕಾಲೇಜಿನಲ್ಲಿ ಆರಂಭದ ಶಿಕ್ಷಣ ಪಡೆದ ಅವರು ಹಾರ್ವರ್ಡ್‌ ವಿಶ್ವವಿದ್ಯಾಲಯದಿಂದ 1966ರಲ್ಲಿ ಪಿಎಚ್‌ಡಿ ಪಡೆದಿದ್ದರು. 2012ರಲ್ಲಿ ಅವರಿಗೆ ಕರ್ನಾಟಕ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಸಾಕ್ಷಿ ಟ್ರಸ್ಟ್‌ನ ಸಂಸ್ಥಾಪಕ ಮತ್ತು ಗೌರವ ನಿರ್ದೇಶಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.