ADVERTISEMENT

ಪಾಕಿಸ್ತಾನ ದೌರ್ಜನ್ಯಗಳ ತವರೂರು: ಇಮ್ರಾನ್‌ ಖಾನ್‌ಗೆ ಬಿಜೆಪಿ ತಿರುಗೇಟು

ಅಲ್ಪಸಂಖ್ಯಾತರ ಕುರಿತ ಇಮ್ರಾನ್‌ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ

ಪಿಟಿಐ
Published 23 ಡಿಸೆಂಬರ್ 2018, 16:18 IST
Last Updated 23 ಡಿಸೆಂಬರ್ 2018, 16:18 IST
ಮುಖ್ತಾರ್‌ ಅಬ್ಬಾಸ್‌ ನಖ್ವಿ
ಮುಖ್ತಾರ್‌ ಅಬ್ಬಾಸ್‌ ನಖ್ವಿ   

ನವದೆಹಲಿ: ‘ಅಲ್ಪಸಂಖ್ಯಾತ ಸಮುದಾಯವನ್ನು ಯಾವ ರೀತಿ ನಡೆಸಿಕೊಳ್ಳಬೇಕು ಎನ್ನುವುದನ್ನು ನರೇಂದ್ರ ಮೋದಿ ಸರ್ಕಾರಕ್ಕೆ ತೋರಿಸುತ್ತೇವೆ’ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ ನೀಡಿರುವ ಹೇಳಿಕೆಯನ್ನು ಬಿಜೆಪಿ ಕಟುವಾಗಿ ಟೀಕಿಸಿದೆ.

ನಟ ನಾಸಿರುದ್ದೀನ್‌ ಶಾ ಹೇಳಿಕೆಯನ್ನು ಪ್ರಸ್ತಾಪಿಸಿ ಲಾಹೋರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಇಮ್ರಾನ್‌ ಖಾನ್‌, ‘ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ. ತಾವು ಸುರಕ್ಷಿತವಾಗಿದ್ದೇವೆ ಎನ್ನುವ ಭಾವನೆ ಅಲ್ಪಸಂಖ್ಯಾತರಲ್ಲಿ ಮೂಡಬೇಕು ಮತ್ತು ಎಲ್ಲ ಸಮಾನ ಹಕ್ಕುಗಳು ದೊರೆಯಬೇಕು’ ಎಂದು ಹೇಳಿದ್ದರು.

ಇಮ್ರಾನ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರದ ಅಲ್ಪಸಂಖ್ಯಾತ ಖಾತೆ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ, ‘ಪಾಕಿಸ್ತಾನವೇ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸುವ ತವರೂರಾಗಿದೆ’ ಎಂದು ಟೀಕಿಸಿದ್ದಾರೆ. ‘100 ಇಲಿ
ಗಳನ್ನು ತಿಂದ ಮೇಲೆ ಬೆಕ್ಕು ಹಜ್‌ ಯಾತ್ರೆಗೆ ತೆರಳಿತು ಎನ್ನುವ ಗಾದೆ ಮಾತು ಪಾಕಿಸ್ತಾನ ಅಕ್ಷರಶಃ ಅನ್ವಯವಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಪಾಕಿಸ್ತಾನ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ನಮಗೆ ಪಾಠ ಹೇಳಲು ಮುಂದಾಗಿರುವುದು ಹಾಸ್ಯಾಸ್ಪದವಾಗಿದೆ’ ಎಂದು ನಖ್ವಿ ವ್ಯಂಗ್ಯವಾಡಿದ್ದಾರೆ.

ADVERTISEMENT

‘1947ರಿಂದ ಹಿಂದೂಗಳು, ಸಿಖ್ಖರು ಮತ್ತು ಕ್ರೈಸ್ತರ ಸಂಖ್ಯೆ ಪಾಕಿಸ್ತಾನದಲ್ಲಿ ಶೇಕಡ 90ರಷ್ಟು ಕುಸಿದಿದೆ. ಸರ್ಕಾರ ಬೆಂಬಲಿತ ಇಸ್ಲಾಂ ಮೂಲಭೂತವಾದಿಗಳ ದೌರ್ಜನ್ಯವೇ ಇದಕ್ಕೆ ಕಾರಣ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಹತ್ಯೆ ನಿರಂತರವಾಗಿ ನಡೆಯುತ್ತಿದೆ. ಹಲವರನ್ನು ಒತ್ತಾಯಪೂರ್ವಕವಾಗಿ ಮತಾಂತರ ಮಾಡಲಾಗಿದೆ. ಪಾಕಿಸ್ತಾನದ ಜನಸಂಖ್ಯೆಯಲ್ಲಿ ಈಗ ಕೇವಲ ಶೇಕಡ 2 ಅಥವಾ 3ರಷ್ಟು ಮಾತ್ರ ಅಲ್ಪಸಂಖ್ಯಾತರಿದ್ದಾರೆ. ಆದರೆ, ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಜತೆಗೆ ಅಭಿವೃದ್ಧಿಯಲ್ಲೂ ಸಮಪಾಲು ಹೊಂದಿದ್ದಾರೆ’ ಎಂದು ಪ್ರತಿಪಾದಿಸಿದ್ದಾರೆ.

‘ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಒಬ್ಬ ಪಾಕಿಸ್ತಾನ ಕಲಾವಿದನ ಹೆಸರನ್ನು ಇಮ್ರಾನ್‌ ಖಾನ್‌ ಹೇಳಲಿ. ಆದರೆ, ಭಾರತದಲ್ಲಿ ಸಲ್ಮಾನ್‌ ಖಾನ್‌, ಅಮಿರ್‌ಖಾನ್‌ ಸೇರಿದಂತೆ ಸಾವಿರಾರು ಕಲಾವಿದರಿದ್ದು, ಇವರೆಲ್ಲರನ್ನೂ ಭಾರತೀಯರು ಪ್ರೀತಿಸುತ್ತಾರೆ’ ಎಂದು ಹೇಳಿದ್ದಾರೆ.

‘ನಟ ನಾಸಿರುದ್ದೀನ್‌ ಶಾ ಸಹ ತಪ್ಪು ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯನ್ನು ಭಾರತ ವಿರೋಧಿ ಶಕ್ತಿಗಳು ಬಳಸಿಕೊಳ್ಳುತ್ತಿವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.