
ಲಖನೌ: ‘ವೈಟ್ ಕಾಲರ್ ಭಯೋತ್ಪಾದನೆ ಮಾದರಿ’ಯ ಸದಸ್ಯೆ ಎಂಬ ಶಂಕೆಯ ಮೇಲೆ ಬಂಧನದಲ್ಲಿರುವ ವೈದ್ಯೆ ಶಾಹೀನ್ ಸಯೀದ್ ಪಾಕಿಸ್ತಾನದ ಸೇನಾ ವೈದ್ಯರೊಂದಿಗೆ ಸಂಪರ್ಕ ಹೊಂದಿದ್ದಳು ಮತ್ತು ದೇಶದ ವಿವಿಧೆಡೆ ಬಾಂಬ್ ದಾಳಿ ನಡೆಸಿ ವಿದೇಶಕ್ಕೆ ಪಲಾಯನ ಮಾಡುವ ಯೋಜನೆ ಹೊಂದಿದ್ದಳು.
ಶಾಹೀನ್ ಸಹೋದರ ಡಾ.ಪರ್ವೇಜ್ ಅಹ್ಮದ್‌ನನ್ನೂ ಇದೇ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಶಾಹೀನ್, ಉತ್ತರ ಪ್ರದೇಶದಲ್ಲಿ ಕೆಲಸ ಮಾಡುವ ಜಮ್ಮು ಮತ್ತು ಕಾಶ್ಮೀರದ 10ಕ್ಕೂ ಹೆಚ್ಚು ವೈದ್ಯರು ಮತ್ತು ವೈದ್ಯ ವಿದ್ಯಾರ್ಥಿಗಳನ್ನು ತನ್ನ ಜಾಲಕ್ಕೆ ಸೆಳೆಯಲು ಯತ್ನಿಸಿದ್ದಳು ಎಂದು ಮೂಲಗಳು ತಿಳಿಸಿವೆ.
ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ಸಹೋದರಿ ಸಹೀದಾ ಅಜರ್ ಜತೆ ಶಾಹೀನ್ ಸಂಪರ್ಕ ಹೊಂದಿದ್ದಳು. ಸಹೀದಾ ನಿರ್ದೇಶನದಂತೆ ಭಯೋತ್ಪಾದನೆ ಸಂಘಟನೆಯ ಮಹಿಳಾ ಘಟಕ ಸ್ಥಾಪಿಸುವ ಮತ್ತು ಅದರ ಜಾಲವನ್ನು ಕೆಲ ದೇಶಗಳಿಗೂ ವಿಸ್ತರಿಸುವ ಯೋಜನೆ ಹೊಂದಿದ್ದಳು ಎಂದು ತಿಳಿಸಿವೆ.
ಶಾಹೀನ್ ಬಳಸುತ್ತಿದ್ದ ಮೊಬೈಲ್ ಫೋನ್‌ನಲ್ಲಿದ್ದ ಸಿಮ್ ಕಾರ್ಡ್ ಅನ್ನು ಪಡೆಯಲು ನಕಲಿ ವಿಳಾಸ ನೀಡಲಾಗಿದೆ. ಸಿಮ್ ಪಡೆಯಲು ಫರೀದಾಬಾದ್ ಜಿಲ್ಲೆಯ ಮಸೀದಿಯ ವಿಳಾಸ ನೀಡಲಾಗಿದೆ. ಶಾಹೀನ್, ಥಾಯ್ಲೆಂಡ್‌ಗೂ ಪ್ರವಾಸ ಮಾಡಿ ಬಂದ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿವೆ.
ಕಳೆದ ನಾಲ್ಕು ವರ್ಷಗಳಿಂದ ವೈಟ್ ಕಾಲರ್ ಭಯೋತ್ಪಾದನಾ ಮಾದರಿ ಸಕ್ರಿಯಗೊಂಡಿದ್ದು, ಭಾರತದ ಪ್ರಮುಖ ಧಾರ್ಮಿಕ ಸ್ಥಳಗಳು ಮತ್ತು ರಾಷ್ಟ್ರ ರಾಜಧಾನಿಯೇ ಅದರ ಗುರಿಯಾಗಿತ್ತು.
ಎಂಬಿಬಿಎಸ್ ವಿದ್ಯಾರ್ಥಿ ಬಂಧನ
ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬನನ್ನು ಪಶ್ಚಿಮ ಬಂಗಾಳದ ಉತ್ತರ ದಿನಾಜಪುರ ಜಿಲ್ಲೆಯಲ್ಲಿ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಬಂಧಿಸಿದೆ.
‘ಆರೋಪಿಯನ್ನು ಜಾನಿಸೂರ್ ಆಲಮ್ ಅಲಿಯಾಸ್ ನಿಸಾರ್ ಆಲಮ್ ಎಂದು ಗುರುತಿಸಲಾಗಿದೆ. ಈತ ಹರಿಯಾಣದ ಅಲ್ ಫಲಾಹ್ ವಿಶ್ವವಿದ್ಯಾಲಯದ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದು, ಲೂಧಿಯಾನದಲ್ಲಿ ನೆಲಸಿದ್ದ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಸ್ ತೆರಳುವ ಸಂದರ್ಭದಲ್ಲಿ ಉತ್ತರ ದಿನಾಜಪುರದ ಸುರ್ಜಾಪುರ ಬಜಾರ್‌ನಲ್ಲಿ ಶುಕ್ರವಾರ ಬಂಧಿಸಲಾಗಿದೆ ಎಂದು ತಿಳಿಸಿದರು.
ಇತ್ತೀಚೆಗೆ ದೆಹಲಿಯ ಕೆಂಪುಕೋಟೆ ಸಮೀಪ ಸಂಭವಿಸಿದ ಕಾರು ಸ್ಫೋಟ ಪ್ರಕರಣದಲ್ಲಿ ಈತ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ತಿಳಿಸಿದರು.
‘ಜಾನಿಸೂರ್, ಠಾಣೆ ಸಮೀಪ ಅನುಮಾನಾಸ್ಪದ ರೀತಿಯಲ್ಲಿ ಅಡ್ಡಾಡುತ್ತಿದ್ದ. ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವಾಗ ಪರಾರಿಯಾಗಲು ಯತ್ನಿಸಿದ್ದ. ಆತನ ಬಳಿ ಇದ್ದ ಡಿಜಿಟಲ್ ಸಾಧನಗಳು ಮತ್ತು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಸಿಲಿಗುಡಿ ಠಾಣೆಗೆ ಕರೆದೊಯ್ಯಲಾಗಿದೆ.
ಆಲಮ್ ಮೇಲಿನ ಆರೋಪಗಳನ್ನು ಅಲ್ಲಗಳೆದಿರುವ ಕುಟುಂಬಸ್ಥರು, ‘ಅಲಾಮ್ ಮೃದು ಸ್ವಭಾವದ ಸಭ್ಯ ವ್ಯಕ್ತಿ. ಯಾವಾಗಲೂ ಓದಿನ ಕಡೆಗೇ ಗಮನ ನೀಡುತ್ತಿದ್ದ. ಯಾವುದೇ ಉಗ್ರ ಸಂಘಟನೆಯೊಂದಿಗೆ ಆತ ನಂಟು ಹೊಂದಿಲ್ಲ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.