ADVERTISEMENT

ಮಾತಿಗೆ ಅಡ್ಡಿ: ಅಮೋಲ್ ಪಾಲೇಕರ್ ಕಿಡಿ

ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ವಿರುದ್ಧ ಆಕ್ರೋಶ

ಪಿಟಿಐ
Published 10 ಫೆಬ್ರುವರಿ 2019, 19:46 IST
Last Updated 10 ಫೆಬ್ರುವರಿ 2019, 19:46 IST
ಅಮೋಲ್ ಪಾಲೇಕರ್
ಅಮೋಲ್ ಪಾಲೇಕರ್   

ಮುಂಬೈ: ಕಳೆದ ವಾರ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (ಎನ್‌ಜಿಎಂಎ) ಕಾರ್ಯಕ್ರಮದಲ್ಲಿ ತಮ್ಮ ಭಾಷಣಕ್ಕೆ ಅದರ ಕೆಲವು ಸದಸ್ಯರು ಅಡ್ಡಿಪಡಿಸಿದ್ದರು ಎಂದು ನಟ–ನಿರ್ದೇಶಕ ಅಮೋಲ್ ಪಾಲೇಕರ್ ಭಾನುವಾರ ಆರೋಪ ಮಾಡಿದ್ದಾರೆ.

ಇಬ್ಬರು ಹಿರಿಯ ಕಲಾವಿದರಬೆಳವಣಿಗೆಯನ್ನು ಸೂಚಿಸುವ ಕಲಾ ಪ್ರದರ್ಶನ ರದ್ದುಗೊಳಿಸಿದ್ದ ಹಿಂದಿನ ಉದ್ದೇಶವೇನು ಎಂಬುದನ್ನು ತಿಳಿಯಬಯಸಿದ್ದಕ್ಕೆ ಸದಸ್ಯರು ಆಕ್ಷೇಪ ಎತ್ತಿದ್ದರು ಎಂದು ಪಾಲೇಕರ್ ಹೇಳಿದ್ದಾರೆ.

ಕಳೆದ ಶುಕ್ರವಾರ ಕಲಾವಿದ ಪ್ರಭಾಕರ್ ಬಾರ್ವೆ ಅವರ ಜೀವನ ಕುರಿತ ಪ್ರದರ್ಶನದಲ್ಲಿ ಮಾತನಾಡಲು ಮುಂದಾದ ಪಾಲೇಕರ್‌ಗೆ ಅಡ್ಡಿಪಡಿಸಲಾಗಿತ್ತು. ಬೆಂಗಳೂರು ಹಾಗೂ ಮುಂಬೈ ಕೇಂದ್ರಗಳ ಸಲಹಾ ಸಮಿತಿಗಳನ್ನು ರದ್ದುಪಡಿಸಿದ ಕೇಂದ್ರ ಸಂಸ್ಕೃತಿ ಸಚಿವಾಲಯದ ನಡೆಯನ್ನು ಪಾಲೇಕರ್ ಅವರು ಟೀಕಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗಿದೆ.

ADVERTISEMENT

ಬಾರ್ವೆ ಅವರ ಪ್ರದರ್ಶನ ಏರ್ಪಡಿಸಿದ್ದ ಕಾರ್ಯಕ್ರಮದಲ್ಲೇ ಇನ್ನಿಬ್ಬರು ಕಲಾವಿದರ ಪ್ರದರ್ಶನವನ್ನೂ ನಡೆಸಲು ಎನ್‌ಜಿಎಂಎ ಸಲಹಾ ಮಂಡಳಿಯು ಒಪ್ಪಿಗೆ ನೀಡಿತ್ತು. ಆದರೆ ಸಮಿತಿಗೆ ಯಾವುದೇ ಪೂರ್ವ ಮಾಹಿತಿ ನೀಡದೇ, ಕಲಾವಿದರ ಕುರಿತ ಪ್ರದರ್ಶನವನ್ನು ಮುಂಬೈ ಎನ್‌ಜಿಎಂಎ ನಿರ್ದೇಶಕರಾದ ಅನಿತಾ ರೂಪಾವತಾರಂ ಅವರು ರದ್ದುಗೊಳಿಸಿದ್ದಾರೆ ಎಂದು ಪಾಲೇಕರ್ ದೂರಿದ್ದಾರೆ.

‘ಈ ವಿಷಯವನ್ನು ನಾನು ಪ್ರಸ್ತಾಪಿಸಬೇಕೆಂದಿದ್ದೆ. ಯಾವಾಗ ಮತ್ತು ಹೇಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಎಂದು ನಾನು ತಿಳಿಯಬಯಸಿದ್ದೆ’ ಎಂದು ಪಾಲೇಕರ್ ಪುಣೆಯಲ್ಲಿ ಹೇಳಿದ್ದಾರೆ.

‘ನನ್ನ ಮಾತು ಅಪ್ರಸ್ತುತ ಹೇಗಾಗುತ್ತದೆ? ಸ್ವತಃ ಎನ್‌ಜಿಎಂಎ ತಮಗೆ ಆಹ್ವಾನ ನೀಡಿದ್ದು, ಅದರ ಕುರಿತೇ ಮಾತನಾಡಿದ್ದರೂ ಆಕ್ಷೇಪ ವ್ಯಕ್ತಪಡಿಸಿದ್ದು ಏಕೆ ಎಂಬುದು ಸೋಜಿಗವಾಗುತ್ತಿದೆ’ ಎಂದು ಅವರು ಹೇಳಿದ್ದಾರೆ. ಸದಸ್ಯರು ಅಡ್ಡಿಪಡಿಸಿದ್ದರೂ ಪಾಲೇಕರ್ ತಮ್ಮ ಮಾತು ನಿಲ್ಲಿಸಿರಲಿಲ್ಲ.

ಹೊಸ ನಿರ್ದೇಶಕರ ಪ್ರಕಾರ, ಗ್ಯಾಲರಿಯ ನಾಲ್ಕು ಮಹಡಿಗಳನ್ನು ಪ್ರದರ್ಶನಕ್ಕೆ ಬಳಸಿಕೊಳ್ಳಬಹುದು. ಐದನೇ ಮಹಡಿಯು (ಡೋಮ್) ಹೊಸಬರಿಗೆ ಮಾತ್ರ ಮೀಸಲು ಎಂಬ ಮಾಹಿತಿಯನ್ನುಪಾಲೇಕರ್‌ ಅವರಿಗೆ ನೀಡಲಾಗಿತ್ತು.

–––

‘ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆಯಿಲ್ಲವೇ?’

‘ಇತ್ತೀಚೆಗೆ ನಡೆದ ಮರಾಠಿ ಸಾಹಿತ್ಯ ಸಮಾವೇಶದಲ್ಲಿ ಮಾತನಾಡುವಂತೆ ಬರಹಗಾರ್ತಿ ನಯನತಾರಾ ಸೆಹಗಲ್ ಅವರನ್ನು ಆಹ್ವಾನಿಸಿ, ಕೊನೆಯ ಕ್ಷಣದಲ್ಲಿ ಆಹ್ವಾನ ಹಿಂಪಡೆಯಲಾಗಿತ್ತು. ವಾಸ್ತವ ಸ್ಥಿತಿಯನ್ನು ಸೆಹಗಲ್ ಅವರು ಟೀಕಿಸುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ಅವರಿಗೆ ಮಾನತಾಡಲು ಅವಕಾಶ ನೀಡಿರಲಿಲ್ಲ’ ಎಂಬ ಅಂಶವನ್ನು ಪಾಲೇಕರ್ ತಮ್ಮ ಭಾಷಣದಲ್ಲಿ ಉಲ್ಲೇಖಿಸಲು ಯತ್ನಿಸಿದ್ದರು.

ಈ ಮಧ್ಯೆ ಮಾತನಾಡಿರುವ ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್, ‘ಇದೇನು ಕೇವಲ ಒಂದು ಘಟನೆಯಲ್ಲ. ಕಳೆದ ಐದು ವರ್ಷಗಳಿಂದ ಉದ್ದೇಶಪೂರ್ವಕವಾಗಿ ಇಂತಹ ಯತ್ನಗಳು ನಡೆದಿವೆ’ ಎಂದಿದ್ದಾರೆ.

‘ಸಮಾಜದ ಯಾವುದೇ ಕ್ಷೇತ್ರದಿಂದ ಟೀಕೆಗಳು ಎದುರಾದರೂ ಅದನ್ನು ಸಹಿಸಿಕೊಳ್ಳುವ ಶಕ್ತಿ ಕೇಂದ್ರ ಸರ್ಕಾರಕ್ಕೆ ಇಲ್ಲ. ಅಭಿಪ್ರಾಯಗಳನ್ನು ಹತ್ತಿಕ್ಕುವುದು ಮತ್ತು ವಿಭಿನ್ನ ವಿಚಾರಧಾರೆಗಳನ್ನು ಪಾಲಿಸುವವರನ್ನು ಬೆದರಿಸುವುದು ಮಾತ್ರ ಅದರ ಉದ್ದೇಶ’ ಎಂದು ಸಾವಂತ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.