ADVERTISEMENT

ಮಹಾರಾಷ್ಟ್ರ ಪ್ರಕರಣ: ಹೈಕೋರ್ಟ್‌ಗೆ ಪರಮ್ ಬೀರ್‌ ಸಿಂಗ್ ಅರ್ಜಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 18:03 IST
Last Updated 25 ಮಾರ್ಚ್ 2021, 18:03 IST
ಪರಮ್ ಬೀರ್‌ ಸಿಂಗ್
ಪರಮ್ ಬೀರ್‌ ಸಿಂಗ್   

ಮುಂಬೈ: ಗೃಹ ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಮುಂಬೈನ ಮಾಜಿ ಪೊಲೀಸ್‌ ಕಮಿಷನರ್ ಪರಮ್ ವೀರ್‌ ಸಿಂಗ್ ಅವರು ಪ್ರಕರಣ ಕುರಿತು ಸಿಬಿಐನಿಂದ ‘ತ್ವರಿತ ಮತ್ತು ನಿಷ್ಪಕ್ಷಪಾತ’ ತನಿಖೆಗೆ ನಿರ್ದೇಶನ ನೀಡಬೇಕು ಎಂದು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಸಿಂಗ್‌ ಈ ಮೊದಲು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ವಿರುದ್ಧ ಆರೋಪಿಸಿರುವ ಇದೊಂದು ಗಂಭೀರ ಪ್ರಕರಣ ಎಂದಿದ್ದ ಸುಪ್ರೀಂ, ಈ ಸಂಬಂಧ ಬಾಂಬೆ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಬಹುದು ಎಂದು ಅಭಿಪ್ರಾಯಪಟ್ಟಿತ್ತು.

‘ಅನಿಲ್ ದೇಶ್‌ಮುಖ್ ಫೆಬ್ರುವರಿ ತಿಂಗಳಲ್ಲಿ ತಮ್ಮ ನಿವಾಸದಲ್ಲಿ ಮುಂಬೈನ ಹಲವು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದರು. ಆ ಸಭೆಯಲ್ಲಿ ಅಧಿಕಾರಿ ವಾಜೆ ಕೂಡಾ ಇದ್ದರು. ಆ ಸಭೆಯಲ್ಲಿಯೇ, ವಿವಿಧ ವಾಣಿಜ್ಯ, ವ್ಯಾಪಾರ ಸಂಸ್ಥೆಗಳಿಂದ ಪ್ರತಿ ತಿಂಗಳು ₹ 100 ಕೋಟಿ ಸಂಗ್ರಹಿಸಿಕೊಡಬೇಕು ಎಂದು ಗೃಹಸಚಿವರು ಸೂಚಿಸಿದ್ದರು’ ಎಂದು ಸಿಂಗ್‌ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ಗೃಹ ಸಚಿವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಕುರಿತು ನಿಷ್ಪಕ್ಷಪಾತ, ನ್ಯಾಯಸಮ್ಮತ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸುವುದು ಅಗತ್ಯ. ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ಕೋರಿದ್ದಾರೆ.

ಶಿವಸೇನೆಗೆ ಬಿಜೆಪಿ ತರಾಟೆ: ಗಂಭೀರ ಆರೋಪದ ನಂತರವೂ ಶಿವಸೇನೆಯು ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸದೇ ಸಮರ್ಥನೆಗೆ ನಿಂತಿದೆ ಎಂದು ಬಿಜೆಪಿ ಮುಖಂಡ ಪ್ರವೀಣ್‌ ದಾರೇಕರ್‌ ಹರಿಹಾಯ್ದಿದ್ದಾರೆ.

ಮಹಿಳೆಯ ಶಂಕಾಸ್ಪದ ಸಾವಿನ ಪ್ರಕರಣ ಸಂಬಂಧ ಕಳೆದ ತಿಂಗಳು ಶಿವಸೇನೆ ಪಕ್ಷದದವರೇ ಆದ ಸಚಿವ ಸಂಜಯ್‌ ರಾಥೋಡ್‌ ರಾಜೀನಾಮೆ ಪಡೆಯಲು ಮುಖಂಡ ಸಂಜಯ್‌ ರಾವುತ್‌ ಯಾವುದೇ ಆಕ್ಷೇಪ ಎತ್ತಿರಲಿಲ್ಲ. ಈಗ ಗಂಭೀರ ಆರೋಪವಿದ್ದರೂ ಗೃಹಸಚಿವರನ್ನು ಅವರು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ರಾಷ್ಟ್ರಪತಿ ಆಡಳಿತಕ್ಕೆ ಒತ್ತಾಯ: ಕೇಂದ್ರ ಸಚಿವ ರಾಮದಾಸ್‌ ಅತವಳೆ ಗು‌ರುವಾರ ನವದೆಹಲಿಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಭೇಟಿಯಾಗಿದ್ದು, ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಕೋರಿದ್ದಾರೆ.

ರಾಷ್ಟ್ರಪತಿ ಭೇಟಿ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಬೇಡಿಕೆಯನ್ನು ಪರಿಶೀಲಿಸುವುದಾಗಿ ರಾಷ್ಟ್ರಪತಿ ಭರವಸೆ ನೀಡಿದ್ದಾರೆ. ಗೃಹ ಸಚಿವರ ವಿರುದ್ಧವೇ ಭಾರಿ ಭ್ರಷ್ಟಾಚಾರ ಆರೋಪ ಬಂದಿರುವ ಕಾರಣ ರಾಜ್ಯದಲ್ಲಿ ಗಂಭೀರ ಪರಿಸ್ಥಿತಿ ಇದೆ’ ಎಂದು ಹೇಳಿದರು.

ಎನ್‌ಐಎ ವಶದಲ್ಲಿ ವಾಜೆ, ಅವಧಿ ವಿಸ್ತರಣೆ: ಬಂಧಿತ ಪೊಲೀಸ್‌ ಅಧಿಕಾರಿ ಸಚಿನ್ ವಾಜೆ ಅವರನ್ನು ವಿಚಾರಣೆಗೆ ಎನ್‌ಐಎ ವಶಕ್ಕೆ ಒಪ್ಪಿಸಿರುವ ಅವಧಿಯನ್ನು ಏ.3ರವರೆಗೂ ವಿಶೇಷ ನ್ಯಾಯಾಲಯ ಗುರುವಾರ ವಿಸ್ತರಿಸಿತು. ‘ಅಪರಾಧ ಕೃತ್ಯವು ಭಯೋತ್ಪಾದಕ ಕೃತ್ಯಕ್ಕೆ ಸಮನಾದುದು’ ಎಂದು ತನಿಖಾ ಸಂಸ್ಥೆ ಹೇಳಿತು.

ಮನ್‌ಸುಖ್‌ ಹಿರೇನ್ ಕೊಲೆ ಪ್ರಕರಣದಲ್ಲಿ ಬಂಧಿತನಾದ ಇನ್ನೊಬ್ಬ ಆರೋಪಿ ಜೊತೆ ವಾಜೆ ಅವರನ್ನು ಮುಖಾಮುಖಿ ಆಗಿಸಬೇಕಿದೆ. ದಾಖಲೆಯಿಲ್ಲದ 62 ಗುಂಡು ಪತ್ತೆ ಪ್ರಕರಣ ಕುರಿತೂ ತನಿಖೆ ನಡೆಸಬೇಕಾಗಿದೆ ಎಂದು ಎನ್ಐಎ ಕೋರ್ಟ್‌ಗೆ ತಿಳಿಸಿತು. ‘ಈ ಪ್ರಕರಣದಲ್ಲಿ ತಮ್ಮನ್ನು ಬಲಿಪಶು ಮಾಡಲಾಗಿದೆ’ ಎಂದು ವಾಜೆ ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.