ನವದೆಹಲಿ: ಸಾಲು–ಸಾಲು ಗದ್ದಲ, ಕೋಲಾಹಲಗಳಿಗೆ ಸಾಕ್ಷಿಯಾದ ಸಂಸತ್ತಿನ ಮುಂಗಾರು ಅಧಿವೇಶನ ಗುರುವಾರ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ. 84 ಗಂಟೆಗಳಷ್ಟು ಕಲಾಪದ ಸಮಯ ವ್ಯರ್ಥವಾಗುವುದರೊಂದಿಗೆ 18ನೇ ಲೋಕಸಭೆಯ ಅವಧಿಯಲ್ಲೇ ಇದು ಅತ್ಯಂತ ಹೆಚ್ಚು ಸಮಯ ವ್ಯರ್ಥವಾದ ಅಧಿವೇಶನ ಎನಿಸಿಕೊಂಡಿತು.
ಜುಲೈ 21ರಂದು ಅಧಿವೇಶನ ಆರಂಭವಾಗಿತ್ತು. ಸದನ 21 ದಿನ ನಡೆಯಿತಾದರೂ, ಪರಿಣಾಮಕಾರಿಯಾದ ಕಲಾಪ ನಡೆದಿದ್ದು 37 ಗಂಟೆ 7 ನಿಮಿಷಗಳಷ್ಟು ಮಾತ್ರ ಎಂದು ಲೋಕಸಭೆಯ ಸಚಿವಾಲಯ ತಿಳಿಸಿದೆ.
ಅಧಿವೇಶನ ಆರಂಭವಾದಾಗ 120 ಗಂಟೆಗಳಷ್ಟು ಕಾಲ ಸದನ ಕಲಾಪ ನಡೆಯಬೇಕು ಎಂದು ಎಲ್ಲಾ ಪಕ್ಷಗಳೂ ನಿರ್ಧರಿಸಿದ್ದವು. ಇದಕ್ಕೆ ಕಲಾಪ ಸಲಹಾ ಸಮಿತಿಯೂ ಒಪ್ಪಿತ್ತು. ಪದೇ ಪದೇ ಕಲಾಪ ಸ್ಥಗಿತಗೊಂಡಿದ್ದರಿಂದ ಕೇವಲ 37 ಗಂಟೆಗಳಷ್ಟು ಕಲಾಪ ನಡೆದಿದೆ ಎಂದು ಲೋಕಸಭೆ ಅಧ್ಯಕ್ಷ ಓಂ ಬಿರ್ಲಾ ತಿಳಿಸಿದರು.
ಗದ್ದಲ, ಗಲಾಟೆ ನಡುವೆಯೂ 14 ಮಸೂದೆಗಳನ್ನು ಮಂಡಿಸಿದ ಸರ್ಕಾರ, 12 ಪ್ರಮುಖ ಮಸೂದೆಗಳಿಗೆ ಕಾಯ್ದೆಯ ದಾರಿ ತೆರೆಯುವ ಅವಕಾಶಗಳನ್ನು ಪಡೆದುಕೊಂಡಿದೆ.
ಗಂಭೀರ ಅಪರಾಧ ಪ್ರಕರಣಗಳಲ್ಲಿ 30 ದಿನಕ್ಕಿಂತ ಹೆಚ್ಚು ಕಾಲ ಬಂಧನದಲ್ಲಿದ್ದರೆ ಪ್ರಧಾನಿ, ಮುಖ್ಯಮಂತ್ರಿ ಮತ್ತು ಸಚಿವರನ್ನು ವಜಾ ಮಾಡಬಹುದು ಎಂಬ ಮಸೂದೆಯನ್ನು ಬುಧವಾರ ಸಚಿವ ಅಮಿತ್ ಶಾ ಮಂಡಿಸಿದ್ದರು. ಇದು ಲೋಕಸಭೆಯಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು.
419 ಚುಕ್ಕೆ ಗುರುತಿನ ಪ್ರಶ್ನೆಗಳನ್ನು ಈ ಬಾರಿ ಕೇಳಲಾಗಿತ್ತಾದರೂ 55ಕ್ಕೆ ಮಾತ್ರ ಉತ್ತರ ದೊರೆಯಿತು. 4,829 ಚುಕ್ಕೆ ಗುರುತಿಲ್ಲದ ಪ್ರಶ್ನೆಗಳನ್ನೂ ಕೇಳಲಾಗಿತ್ತು.
ಅಡೆತಡೆಗಳ ನಡುವೆಯೂ ಅಧಿವೇಶನವು ದೇಶ ಮತ್ತು ಸರ್ಕಾರಕ್ಕೆ ಫಲಪ್ರದ ಮತ್ತು ಯಶಸ್ವಿ ಎನಿಸಿದೆ. ಆದರೆ ವಿಪಕ್ಷಗಳಿಗೆ ಹಾನಿಕರವಾಗಿದೆ– ಕಿರಣ್ ರಿಜಿಜು ಸಂಸದೀಯ ವ್ಯವಹಾರಗಳ ಸಚಿವ
ಆನ್‌ಲೈನ್ ಮನಿ ಗೇಮ್ ನಿಷೇಧ ಮಸೂದೆ: ಸಂಸತ್‌ನಲ್ಲಿ ಒಪ್ಪಿಗೆ ನವದೆಹಲಿ (ಪಿಟಿಐ): ಹಣ ಹೂಡಿ ಆಡುವ ಎಲ್ಲ ರೀತಿಯ ಆನ್‌ಲೈನ್ ಗೇಮ್‌ಗಳು ಇ–ಸ್ಪೋರ್ಟ್ಸ್‌ಗಳು ಮತ್ತು ಆನ್‌ಲೈನ್ ಸೋಷಿಯಲ್ ಗೇಮ್‌ಗಳನ್ನು ನಿಷೇಧಿಸುವ ಮಹತ್ವದ ಮಸೂದೆಗೆ ಸಂಸತ್ತು ಗುರುವಾರ ಸಮ್ಮತಿ ನೀಡಿದೆ.
ರಾಜ್ಯಸಭೆಯಲ್ಲಿ ಗುರುವಾರ ಯಾವುದೇ ಚರ್ಚೆ ಇಲ್ಲದೇ ಮಸೂದೆಗೆ ಅನುಮೋದನೆ ನೀಡಲಾಯಿತು. ಆನ್‌ಲೈನ್ ಗೇಮಿಂಗ್ (ಉತ್ತೇಜನ ಮತ್ತು ನಿಯಂತ್ರಣ) ಮಸೂದೆ–2025ಕ್ಕೆ ಒಪ್ಪಿಗೆ ಸಿಕ್ಕಿದ್ದು ಕಾಯ್ದೆಯು ಆನ್‌ಲೈನ್ ಗೇಮಿಂಗ್‌ನ ಮೂರನೇ ಎರಡರಷ್ಟು ಭಾಗವನ್ನು ಉತ್ತೇಜಿಸಲಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
ಬುಧವಾರ ಮಸೂದೆಗೆ ಲೋಕಸಭೆಯ ಒಪ್ಪಿಗೆ ಸಿಕ್ಕಿತ್ತು. ‘45 ಕೋಟಿ ಜನರು ಆನ್‌ಲೈನ್ ಗೇಮಿಂಗ್ ಚಟಕ್ಕೆ ಒಳಗಾಗಿದ್ದಾರೆ. ಮಧ್ಯಮ ವರ್ಗದ ಕುಟುಂಬಗಳು ದುಡಿದ ₹20 ಸಾವಿರ ಕೋಟಿಗೂ ಹೆಚ್ಚು ಹಣ ಆನ್‌ಲೈನ್ ಗೇಮ್‌ಗಳ ಪಾಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯೇ ಆನ್‌ಲೈನ್ ಗೇಮ್ ಅನ್ನು ಅಸ್ವಸ್ಥತೆಯ ಆಟ ಎಂದು ಗುರುತಿಸಿದೆ’ ಎಂದು ಅಶ್ವಿನಿ ವೈಷ್ಣವ್ ತಿಳಿಸಿದರು.
‘ಮಸೂದೆಯಲ್ಲಿ ಆನ್‌ಲೈನ್ ಮನಿ ಗೇಮ್‌ಗಳಿಗೆ ಸಂಬಂಧಿಸಿದ ಜಾಹೀರಾತುಗಳನ್ನೂ ನಿರ್ಬಂಧಿಸುವ ಅವಕಾಶವಿದೆ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಹಣ ಒದಗಿಸುವುದನ್ನೂ ತಡೆಯಲಿದೆ’ ಎಂದರು. ಕಾಯ್ದೆ ಉಲ್ಲಂಘಿಸಿದವರಿಗೆ ಮೂರು ವರ್ಷ ಜೈಲು ವಾಸ ಅಥವಾ ₹1 ಕೋಟಿ ದಂಡ ಅಥವಾ ಈ ಎರಡನ್ನೂ ವಿಧಿಸುವ ಅವಕಾಶ ಇದೆ ಎಂದರು. ಆನ್‌ಲೈನ್ ಗೇಮಿಂಗ್ ಜಾಹೀರಾತುಗಳಲ್ಲಿ ಭಾಗಿಯಾದವರಿಗೆ ಎರಡು ವರ್ಷ ಜೈಲು ₹50 ಲಕ್ಷದವರೆಗೆ ದಂಡ ಅಥವಾ ಎರಡನ್ನೂ ವಿಧಿಸುವ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.