ನವದೆಹಲಿ: ‘ಸಂಸತ್ತಿನ ಉಭಯ ಸದನಗಳಲ್ಲಿ ಕಲಾಪ ನಡೆಯದೇ ಇರುವುದಕ್ಕೆ ಸರ್ಕಾರವೇ ಸಂಪೂರ್ಣ ಕಾರಣ. ಆದರೆ ವಿರೋಧ ಪಕ್ಷಗಳೇ ಇದಕ್ಕೆ ಕಾರಣ ಎಂದು ಸರ್ಕಾರ ಸುಳ್ಳು ಪ್ರಚಾರ ನಡೆಸುತ್ತಿದೆ’ ಎಂದು 14 ವಿರೋಧ ಪಕ್ಷಗಳು ಆರೋಪಿಸಿವೆ.
ಈ ಸಂಬಂಧ ಸಂಸತ್ತಿನ ಉಭಯ ಸದನಗಳ ಸದಸ್ಯರಾಗಿರುವ 14 ವಿರೋಧ ಪಕ್ಷಗಳ 18 ಸಂಸದರು ಬುಧವಾರ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ‘ಪೆಗಾಸಸ್ ಗೂಢಚರ್ಯೆ ಮತ್ತು ಕೃಷಿ ಕಾಯ್ದೆಗಳಸಂಬಂಧ ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತು ಚರ್ಚೆ ನಡೆಸಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆಗೆ ಮಾನ್ಯತೆ ನೀಡಬೇಕು' ಎಂದುಸಂಸತ್ತಿನ ಉಭಯ ಸದನಗಳಲ್ಲೂ ವಿರೋಧ ಪಕ್ಷಗಳು ಆಗ್ರಹಿಸಿವೆ.
‘ಉಭಯ ಸದನಗಳಲ್ಲಿ ಚರ್ಚೆ ನಡೆಸಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆಗೆ ಕಿವುಡಾಗಿರುವ, ಬೇಡಿಕೆಯನ್ನು ನಿರಾಕರಿಸುತ್ತಿರುವ ಈ ಅಹಂಕಾರಿ ಸರ್ಕಾರವೇ ಕಲಾಪ ನಡೆಯದೇ ಇರುವುದಕ್ಕೆ ಏಕೈಕ ಕಾರಣ. ಆದರೆ ಈ ಬೇಡಿಕೆ ಇಡುತ್ತಿರುವ ವಿರೋಧ ಪಕ್ಷಗಳ ಒಗ್ಗಟ್ಟೇ ಕಲಾಪ ನಡೆಯದೇ ಇರಲು ಕಾರಣ ಎಂದು ಸರ್ಕಾರ ಸುಳ್ಳು ಪ್ರಚಾರಕ್ಕೆ ಚಾಲನೆ ನೀಡಿದೆ‘’ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
‘ಪೆಗಾಸಸ್ ಗೂಢಚರ್ಯೆಯು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರ. ಹೀಗಾಗಿ ಸಂಸತ್ತಿನ
ಉಭಯ ಸದನಗಳಲ್ಲೂ ಚರ್ಚೆ ನಡೆಸಬೇಕು ಎಂಬ ವಿರೋಧ ಪಕ್ಷಗಳ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಜಂಟಿ ಹೇಳಿಕೆಯಲ್ಲಿ ಒತ್ತಾಯಿಸಲಾಗಿದೆ.
‘ಪೆಗಾಸಸ್ ಚರ್ಚೆಯ ನಂತರ, ಕೃಷಿ ಕಾಯ್ದೆಗಳ ಬಗ್ಗೆಯೂ ಚರ್ಚೆ ನಡೆಸಬೇಕು. ಈ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಹೀಗಾಗಿ ಈ ಬಗ್ಗೆಯೂ ಚರ್ಚೆ ನಡೆಯಬೇಕಿದೆ' ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಡಿಎಂಕೆಯ ಟಿ.ಆರ್.ಬಾಲು ಮತ್ತು ತಿರುಚ್ಚಿ ಶಿವಾ, ಕಾಂಗ್ರೆಸ್‌ನ ಆನಂದ್ ಶರ್ಮಾ, ಸಮಾಜವಾದಿ ಪಕ್ಷದ ರಾಮಗೋಪಾಲ್ ಯಾದವ್. ಟಿಎಂಸಿಯ ಡೆರೆಕ್ ಒಬ್ರಿಯಾನ್ ಮತ್ತು ಕಲ್ಯಾಣ್ ಬ್ಯಾನರ್ಜಿ, ಶಿವಸೇನಾದ ಸಂಜಯ್ ರಾವುತ್ ಮತ್ತು ವಿನಾಯಕ್ ರಾವುತ್ ಈ ಜಂಟಿ ಹೇಳಿಕೆಗೆ ಸಹಿ ಮಾಡಿದ್ದಾರೆ.
ಆರ್‌ಜೆಡಿಯ ಮನೋಜ್ ಝಾ, ಸಿಪಿಎಂನ ಎಲಮರಂ ಕರೀಂ, ಸಿಪಿಐನ ಬಿನೋಯ್ ವಿಸ್ವಂ, ಎಎಪಿಯ ಸುಶೀಲ್ ಗುಪ್ತಾ, ಮುಸ್ಲಿಂ ಲೀಗ್‌ನ ಮೊಹಮ್ಮದ್ ಬಶೀರ್, ನ್ಯಾಷನಲ್ ಕಾನ್ಫರೆನ್ಸ್‌ನ ಹಸ್ನೈನ್ ಮಸೂದಿ, ಆರ್‌ಎಸ್‌ಪಿಯ ಎನ್.ಕೆ.ಪ್ರೇಮಚಂದ್ರನ್ ಮತ್ತು ಎಲ್‌ಜೆಡಿಯ ಶ್ರೇಯಾಂಶ್ ಕುಮಾರ್ ಅವರೂ ಈ ಹೇಳಿಕೆಗೆ ಸಹಿ ಮಾಡಿದ್ದಾರೆ.
ಸದನದಲ್ಲಿ ನಡೆದದ್ದು...
*ಪೆಗಾಸಸ್ ಗೂಢಚರ್ಯೆ ಕುರಿತು ಚರ್ಚೆ ನಡೆಸಬೇಕು ಎಂದು ಸಂಸತ್ತಿನ ಉಭಯ ಸದನಗಳಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದವು. ಹೀಗಾಗಿ ರಾಜ್ಯಸಭೆಯಲ್ಲಿ ಕಲಾಪವನ್ನು ನಾಲ್ಕು ಬಾರಿ ಮತ್ತು ಲೋಕಸಭೆಯಲ್ಲಿ ಕಲಾಪವನ್ನು4 ಬಾರಿ ಮುಂದೂಡಲಾಯಿತು
* ವಿರೋಧ ಪಕ್ಷಗಳ ಪ್ರತಿಭಟನೆಯ ನಡುವೆಯೇ ‘ತೆಂಗು ಅಭಿವೃದ್ಧಿ ಮಂಡಳಿ (ತಿದ್ದುಪಡಿ) ಮಸೂದೆ-2021’ಕ್ಕೆ ಲೋಕಸಭೆಯ ಅನುಮೋದನೆ ಪಡೆಯಲಾಯಿತು. ಯಾವುದೇ ಚರ್ಚೆ ಇಲ್ಲದೆ, ಧ್ವನಿ ಮತದ ಮೂಲಕ ಈ ಮಸೂದೆಯನ್ನು ಅಂಗೀಕರಿಸಲಾಯಿತು. ರಾಜ್ಯಸಭೆಯಲ್ಲಿ ಕಳೆದ ವಾರವೇ ಈ ಮಸೂದೆಗೆ ಅನುಮೋದನೆ ದೊರೆತಿದೆ
* ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ (ತಿದ್ದುಪಡಿ) ಮಸೂದೆ-2021ಕ್ಕೆ ರಾಜ್ಯಸಭೆ ಅನುಮೋದನೆ ನೀಡಿತು. ಯಾವುದೇ ಚರ್ಚೆ ಇಲ್ಲದೆ ಮಸೂದೆಯನ್ನು ಅಂಗೀಕರಿಸಲಾಯಿತು. ಲೋಕಸಭೆಯಲ್ಲಿ ಈಗಾಗಲೇ ಅನುಮೋದನೆ ಸಿಕ್ಕಿದೆ
* ಠೇವಣಿದಾರರ ವಿಮೆ ಮತ್ತು ಸಾಲ ಖಾತರಿ ಕಾರ್ಪೊರೇಷನ್ (ತಿದ್ದುಪಡಿ) ಮಸೂದೆ-2021ಗೆ ರಾಜ್ಯಸಭೆ ಅನುಮೋದನೆ ನೀಡಿದೆ
ಟಿಎಂಸಿ ಸದಸ್ಯರ ಅಮಾನತು
ಪೆಗಾಸಸ್ ಗೂಢಚರ್ಯೆ ಕುರಿತು ಚರ್ಚೆ ನಡೆಸಬೇಕು ಎಂದು ರಾಜ್ಯಸಭೆಯಲ್ಲಿ ಫಲಕ ಹಿಡಿದು ಪ್ರತಿಭಟನೆ ನಡೆಸಿದ ಟಿಎಂಸಿಯ ಆರು ಸಂಸದರನ್ನು ದಿನದ ಮಟ್ಟಿಗೆ ಸದನದಿಂದ ಅಮಾನತು ಮಾಡಿ ಸಭಾಪತಿ ಎಂ.ವೆಂಕಯ್ಯ ನಾಯ್ಡು ಆದೇಶಿಸಿದರು.
ಈ ಕ್ರಮಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ಅಮಾನತಾದ ಸದಸ್ಯರನ್ನು ಹೊರಗೆ ಕಳುಹಿಸುವಾಗ ಅವರು ಮತ್ತೆ ಪ್ರತಿಭಟನೆ ನಡೆಸಿದರು. ಜತೆಗೆ ಪ್ರತಿಭಟನಾ ಗೀತೆಗಳನ್ನು ಹಾಡಿದರು. ಈ ವೇಳೆ ಸದಸ್ಯರೊಬ್ಬರು ರಾಜ್ಯಸಭೆಯ ಲಾಬಿಯ ಬಾಗಿಲೊಂದರ ಗಾಜನ್ನು ಒಡೆದಿದ್ದಾರೆ. ಒಡೆದ ಗಾಜಿನಿಂದ ಮಹಿಳಾ ಭದ್ರತಾ ಸಿಬ್ಬಂದಿಯೊಬ್ಬರಿಗೆ ಗಾಯಗಳಾಗಿವೆ ಎಂದು ರಾಜ್ಯಸಭಾ ಕಾರ್ಯಾಲಯವು ಹೇಳಿದೆ. ಈ ಸಂಬಂಧ ವರದಿ ಸಿದ್ಧಪಡಿಸಿದ್ದು, ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಸಿಎಎಗೆ ತಿದ್ದುಪಡಿ ಇಲ್ಲ: ಕೇಂದ್ರ
‘ಪೌರತ್ವ ತಿದ್ದುಪಡಿ ಕಾಯ್ದೆ ಅಡಿ ಭಾರತದ ಪೌರತ್ವ ಪಡೆಯಲು ಅರ್ಹರಾಗಿರುವ ಧಾರ್ಮಿಕ ಅಲ್ಪಸಂಖ್ಯಾತರ ಪಟ್ಟಿಗೆ ಯಾವುದೇ ತಿದ್ದುಪಡಿ ಮಾಡುವುದಿಲ್ಲ. ಹೊಸದಾಗಿ ಬೇರೆ ಅಲ್ಪಸಂಖ್ಯಾತ ಧರ್ಮವನ್ನು ಈ ಪಟ್ಟಿಗೆ ಸೇರಿಸುವುದಿಲ್ಲ' ಎಂದು ಕೇಂದ್ರ ಸರ್ಕಾರವು ಹೇಳಿದೆ.
ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾದ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರೈಸ್ತ ಧರ್ಮೀಯರಿಗೆ ಈ ಕಾಯ್ದೆ ಅಡಿ ಭಾರತದ ಪೌರತ್ವ ನೀಡಲಾಗುತ್ತದೆ.
‘ಈ ಪಟ್ಟಿಗೆ ಹೊಸ ಧರ್ಮವನ್ನು ಸೇರಿಸುವ ಪ್ರಸ್ತಾವ ನಮ್ಮ ಮುಂದೆ ಇಲ್ಲ. ಈ ಕಾಯ್ದೆ ಅಡಿ ಅಧಿಸೂಚನೆ ಹೊರಡಿಸಿದ ನಂತರವಷ್ಟೇ ಅರ್ಹ ಫಲಾನುಭವಿಗಳಿಗೆ ಪೌರತ್ವ ನೀಡಲಾಗುತ್ತದೆ. ನಿಯಮಗಳನ್ನು ಸಿದ್ಧಪಡಿಸಲು 2022ರ ಜನವರಿ 9ರವರೆಗೆ ಸಮಯಾವಕಾಶ ಕೇಳಲಾಗಿದೆ’ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.