ADVERTISEMENT

ಸಂಸತ್‌ ಅಧಿವೇಶನ: ಬೆಲೆ ಏರಿಕೆ, ಜಿಎಸ್‌ಟಿ ಹೇರಿಕೆ ಕುರಿತು ನಡೆಯದ ಚರ್ಚೆ

ಪಿಟಿಐ
Published 19 ಜುಲೈ 2022, 16:59 IST
Last Updated 19 ಜುಲೈ 2022, 16:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ನವದೆಹಲಿ: ಮುಂಗಾರು ಅಧಿವೇಶನ ನಡೆಯುತ್ತಿರುವ ಲೋಕಸಭೆ ಮತ್ತು ರಾಜ್ಯಸಭೆಯು ಮಂಗಳವಾರವೂ ಗದ್ದಲಕ್ಕೆ ಸಾಕ್ಷಿಯಾಯಿತು. ಕಲಾಪ ನಡೆಯಲಿಲ್ಲ. ಬೆಲೆ ಏರಿಕೆ, ಜಿಎಸ್‌ಟಿ ಹೇರಿಕೆ, ಅಗ್ನಿಪಥ ಯೋಜನೆ ಬಗ್ಗೆ ಚರ್ಚೆಗೆ ಅವಕಾಶ ಕೊಡುವಂತೆ ವಿರೋಧ ಪಕ್ಷಗಳು ಪಟ್ಟು ಹಿಡಿದವು. ಸರ್ಕಾರ ಇದಕ್ಕೆ ಸಮ್ಮತಿಸಲಿಲ್ಲ.

ಕೆಲವು ವಸ್ತುಗಳ ಮೇಲೆ ಜಿಎಸ್‌ಟಿ ಹೇರಿಕೆ ಮತ್ತು ಬೆಲೆ ಏರಿಕೆಯವಿರುದ್ಧ ವಿರೋಧ ಪಕ್ಷಗಳ ಸಂಸದರು ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿದರು. ಸ್ಪೀಕರ್ ಓಂ ಬಿರ್ಲಾ ಅವರುಬೆಳಿಗ್ಗೆ 11 ಗಂಟೆಗೆ ಕಲಾಪವನ್ನುಮಧ್ಯಾಹ್ನ 2 ಗಂಟೆವರೆಗೆ ಮುಂದೂಡಿದರು.

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಸಂಸದರು ಘೋಷಣೆಗಳನ್ನುಕೂಗಿದರು. ‘ಮತ್ತೆ ಗಬ್ಬರ್‌ ಸಿಂಗ್‌ ಪ್ರಹಾರ’ ಎಂಬ ಫಲಕಗಳನ್ನು ಅವರು ಹಿಡಿದಿದ್ದರು.

ADVERTISEMENT

‘ನೀವು ನಿಯಮ ಪುಸ್ತಕಗಳನ್ನು ಹಿಡಿದುಕೊಂಡು ಬರುತ್ತೀರಿ. ಆದರೆ, ನಿಯಮಗಳನ್ನು ಅನುಸರಿಸುವುದಿಲ್ಲ. ಸದನದೊಳಕ್ಕೆ ಫಲಕಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಹಾಗಿದ್ದರೂ ಫಲಕಗಳನ್ನು ತಂದಿದ್ದೀರಿ. ರೈತರಿಗೆ ಸಂಬಂಧಿಸಿದ ವಿಷಯಗಳನ್ನು ಸದನದ ಹೊರಗೆ ಎತ್ತುತ್ತೀರಿ. ಆದರೆ, ಸದನದಲ್ಲಿ ಆ ಬಗ್ಗೆ ಚರ್ಚೆ ನಡೆದಾಗ ಭಾಗವಹಿಸುವುದಿಲ್ಲ’ ಎಂದು ಓಂ ಬಿರ್ಲಾ ಅವರು ಹೇಳಿದರು. ಆದರೆ, ವಿರೋಧ ಪಕ್ಷಗಳ ಸಂಸದರು ಈ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ.

ಮಧ್ಯಾಹ್ನ 2 ಗಂಟೆಗೆ ಸದನ ಸೇರಿದಾಗ ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌, ಡಿಎಂಕೆ ಮತ್ತು ಇತರ ವಿರೋಧ ಪಕ್ಷಗಳ ಸದಸ್ಯರು ಫಲಕಗಳನ್ನು ಹಿಡಿದು ಸ್ಪೀಕರ್ ಪೀಠದ ಎದುರು ಜಮಾಯಿಸಿದರು. ಆಗ ಸ್ಪೀಕರ್ ಪೀಠದಲ್ಲಿದ್ದ ಕಿರೀಟ್‌ ಪ್ರೇಮ್‌ಜಿಭಾಯಿ ಸೋಲಂಕಿ ಅವರು ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು.

ರಾಜ್ಯಸಭೆಯಲ್ಲಿ ಗದ್ದಲ ತೀವ್ರವಾಗಿತ್ತು. ಗದ್ದಲ ಹೆಚ್ಚುತ್ತಿದ್ದಂತೆಯೇ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಮುಂಗಾರು ಅಧಿವೇಶನದ ಮೊದಲ ದಿನವಾದ ಸೋಮವಾರವೂ ಸಂಸತ್ತಿನಲ್ಲಿ ಇದೇ ಪರಿಸ್ಥಿತಿ ಇತ್ತು. ಬೆಲೆ ಏರಿಕೆ, ನಿರುದ್ಯೋಗ, ಅಗ್ನಿಪಥ ಯೋಜನೆ ಬಗ್ಗೆ ಚರ್ಚಿಸುವಂತೆ ವಿರೋಧ ಪಕ್ಷಗಳು ಪಟ್ಟು ಹಿಡಿದ ಕಾರಣ ಯಾವುದೇ ಕಲಾಪ ನಡೆದಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.