ADVERTISEMENT

ಪ್ರತಿಪಕ್ಷದ ಕೆಲಸ ಮಾಡಿದ ಶಿವಸೇನಾ

ಸಾರ್ವಜನಿಕ ವಿಷಯಗಳ ಮೇಲೆ ಚರ್ಚೆ; ಕೇಂದ್ರ ಸರ್ಕಾರವನ್ನು ಗುರಿಯಾಗಿಸಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 20:15 IST
Last Updated 21 ನವೆಂಬರ್ 2019, 20:15 IST
ಲೋಕಸಭೆಯಲ್ಲಿ ಗುರುವಾರ ಮಾತನಾಡಿದ ಸಂಸದೆ ಹೇಮಾಮಾಲಿನಿ
ಲೋಕಸಭೆಯಲ್ಲಿ ಗುರುವಾರ ಮಾತನಾಡಿದ ಸಂಸದೆ ಹೇಮಾಮಾಲಿನಿ   

ನವದೆಹಲಿ: ಮಹಾರಾಷ್ಟ್ರದಲ್ಲಿ ಸೇನಾ ನೇತೃತ್ವದ ಸರ್ಕಾರ ರಚನೆ ಖಚಿತವಾಗುತ್ತಿದ್ದಂತೆಯೇ, ಇತ್ತ ಸಂಸತ್ತಿನಲ್ಲಿ ಶಿವಸೇನಾ ಸಂಸದರು ಪ್ರತಿಪಕ್ಷದ ರೀತಿ ಕೆಲಸ ಮಾಡಿದರು. ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಇಟ್ಟುಕೊಂಡು ಮೋದಿ ನೇತೃತ್ವದ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಮಹಾರಾಷ್ಟ್ರದ ರೈತ ಸಮುದಾಯ ತೊಂದರೆ ಎದುರಿಸುತ್ತಿದ್ದು, ಸರ್ಕಾರ ತಕ್ಷಣವೇ ಅವರ ನೆರವಿಗೆ ಧಾವಿಸಬೇಕು ಎಂದು ಶಿವಸೇನಾ ಸಂಸದೆ ಭಾವನಾ ಗವಳಿ ಒತ್ತಾಯಿಸಿದರು.

ಮಹಾರಾಷ್ಟ್ರದ ಹಲವು ರೈತರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಉಪಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಓಂಪ್ರಕಾಶ್ ಹೇಳಿದರು.

ADVERTISEMENT

ತಮ್ಮ ಕ್ಷೇತ್ರದಲ್ಲಿ ಪಾಸ್‌ಪೋರ್ಟ್ ಸೇವಾಕೇಂದ್ರ ತೆರೆಯಲು ಜಾಗ ನಿಗದಿಪಡಿಸುವಲ್ಲಿ ಆಗುತ್ತಿರುವ ವಿಳಂಬವನ್ನು ಸಂಸದ ಶ್ರೀಕಾಂತ್ ಶಿಂಧೆ ಪ್ರಸ್ತಾಪಿಸಿದರು. ಲೋಕಸಭೆಯಲ್ಲಿ ಸೇನಾದ 18 ಸಂಸದರು ಇದ್ದಾರೆ.

ಹಾಡು ಗುನುಗಿದ ಸುಪ್ರಿಯೊ: ವಾಯುಮಾಲಿನ್ಯ ತಗ್ಗಿಸಲು ಸರ್ಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದನ್ನು ತಿಳಿಸಲು ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಅವರು ಹಿಂದಿ ಗೀತೆಯೊಂದನ್ನು ಹಾಡಿ ಗಮನಸೆಳೆದರು.

ಹಿನ್ನೆಲೆ ಗಾಯಕರೂ ಆಗಿರುವ ಸುಪ್ರಿಯೊ, ಸೀತಾ ಔರ್ ಗೀತಾ ಚಿತ್ರದ ‘ಹವಾ ಕೆ ಸಾಥ್ ಸಾಥ್’ ಗೀತೆಯ ಕೆಲ ಸಾಲುಗಳನ್ನು ಗುನುಗಿದರು. ಗಾಳಿಯನ್ನು ಸ್ವಚ್ಛಗೊಳಿಸುವತ್ತ ಸರ್ಕಾರ ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದ್ದು, ಎಲ್ಲರೂ ಈ ಹಾಡು ಹಾಡಬಹುದು ಎಂದು ಸಲಹೆಯಿತ್ತರು.

ರಾಷ್ಟ್ರೀಯ ಸ್ವಚ್ಛಗಾಳಿ ಕಾರ್ಯಕ್ರಮ (ಎನ್‌ಸಿಎಪಿ) ಅನುಷ್ಠಾನಕ್ಕೆ ಪಕ್ಷಭೇದ ಮರೆತು ಎಲ್ಲ ಸಂಸದರೂ ಗಮನಹರಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅಭಿಪ್ರಾಯಪಟ್ಟರು.

ದೆಹಲಿ ವಾಯುಗುಣಮಟ್ಟ ಕಳೆದ ಮೂರು ವರ್ಷಗಳಲ್ಲಿ ಉತ್ತಮಗೊಂಡಿದೆ ಎಂದು ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.

ಮಂಗಗಳ ಉಪಟಳ: ಹೇಮಾಮಾಲಿನಿ ಕಳವಳ

ಧಾರ್ಮಿಕ ಸ್ಥಳಗಳು ಹಾಗೂ ದೆಹಲಿಯ ಲ್ಯುಟೆನ್ಸ್ ಪ್ರದೇಶದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ ಎಂದು ಸಂಸದೆ ಹೇಮಾಮಾಲಿನಿ ಲೋಕಸಭೆಯಲ್ಲಿ ಕಳವಳ ವ್ಯಕ್ತಪಡಿಸಿದರು.

‘ಮಂಗಗಳು ಈಗ ಮನುಷ್ಯರ ಆಹಾರವನ್ನೇ ಅಭ್ಯಾಸ ಮಾಡಿಕೊಂಡಿವೆ. ಅವು ಹಣ್ಣುಗಳ ಬದಲಾಗಿ ಸಮೋಸ, ಫ್ರೂಟಿಯನ್ನು ಇಷ್ಟಪಡುತ್ತಿವೆ’ ಎಂದು ಹೇಮಾಮಾಲಿನಿ ಹೇಳಿದರು.

‘ನನ್ನ ಕ್ಷೇತ್ರ ವ್ಯಾಪ್ತಿಯ ಮಥುರಾ ಹಾಗೂ ವೃಂದಾವನದ ಜನರು ಮಂಗಗಳಿಂದ ತೊಂದರೆ ಅನುಭವಿಸುತ್ತಿದ್ದು, ಈ ಸಮಸ್ಯೆಗೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.

ಅರಣ್ಯ ನಾಶದಿಂದ ಸಮಸ್ಯೆ ಉದ್ಭವಿಸಿದ್ದು, ಸರ್ಕಾರ ಪ್ರತ್ಯೇಕ ಉದ್ಯಾನ (ಮಂಕಿ ಸಫಾರಿ) ನಿರ್ಮಿಸಬೇಕಿದೆ ಎಂದರು. ಇದಕ್ಕೆ ಕೆಲ ಸಂಸದರು ದನಿಗೂಡಿಸಿದರು.ಲ್ಯುಟೆನ್ಸ್ ಪ್ರದೇಶದಲ್ಲಿ ಮಕ್ಕಳು ಹೊರಗಡೆ ಆಟವಾಡಲೂ ಕಷ್ಟವಾಗುತ್ತಿದೆ ಎಂದು ಸಂಸದ ಚಿರಾಗ್ ಪಾಸ್ವಾನ್ ಗಮನ ಸೆಳೆದರು.

ಸಂಸತ್ತಿನಲ್ಲಿ ಇಂದು...

lಸೇನಾಪಡೆಗಳ ಸಮವಸ್ತ್ರವನ್ನು ಹೋಲದ ರೀತಿಯಲ್ಲಿ ರಾಜ್ಯಸಭೆಯ ಮಾರ್ಷಲ್‌ಗಳಿಗೆ ಹೊಸ ಸಮವಸ್ತ್ರ ವಿನ್ಯಾಸಗೊಳಿಸುವಂತೆ ಸಚಿವಾಲಯದ ಕಾರ್ಯದರ್ಶಿಗೆ ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯ ನಾಯ್ಡು ಸೂಚನೆ

lಹಿಂದುತ್ವವಾದಿ ವೀರ್ ಸಾವರ್ಕರ್ ಹಾಗೂ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರಿಗೆ ‘ಭಾರತರತ್ನ’ ಪುರಸ್ಕಾರ ನೀಡುವಂತೆ ಶಿವಸೇನಾ ಸಂಸದರಿಂದ ಲೋಕಸಭೆಯಲ್ಲಿ ಆಗ್ರಹ

l10 ಮತ್ತು 12ನೇ ತರಗತಿಯ ಸಿಬಿಎಸ್‌ಇ ಪರೀಕ್ಷಾ ಶುಲ್ಕ ಹೆಚ್ಚಳ: ಮಾನವ ಸಂಪನ್ಮೂಲ ಸಚಿವಾಲಯ ಸಮರ್ಥನೆ

lಹೊಸ ಮೋಟಾರು ವಾಹನ ಕಾಯ್ದೆ ಜಾರಿ ಬಳಿಕ 38 ಲಕ್ಷ ಪ್ರಕರಣಗಳಲ್ಲಿ ₹577 ಕೋಟಿ ದಂಡ ವಿಧಿಸಲಾಗಿದೆ: ರಸ್ತೆ ಸಾರಿಗೆ ಸಚಿವಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.