ADVERTISEMENT

ಪಾಸ್ವಾನ್‌ಗಿಲ್ಲ ‘ವಿಐಪಿ’ ಮನ್ನಣೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2019, 19:39 IST
Last Updated 8 ಜನವರಿ 2019, 19:39 IST

ಪಟ್ನಾ:ವಿಮಾನ ನಿಲ್ದಾಣಗಳಲ್ಲಿ ಗಣ್ಯರಿಗೆ (ವಿಐಪಿ) ನೀಡಲಾಗುವ ವಿಶೇಷ ಸೌಲಭ್ಯವನ್ನು ಕೇಂದ್ರ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಕಳೆದುಕೊಂಡಿದ್ದಾರೆ. ಬಿಜೆಪಿ ನಾಯಕತ್ವದ ವಿರುದ್ಧ ಬಂಡಾಯ ಸಾರಿರುವ ಸಂಸದ ಶತ್ರುಘ್ನ ಸಿನ್ಹಾ ಅವರಿಗೂ ಈ ಮನ್ನಣೆಯನ್ನು ಇತ್ತೀಚೆಗೆ ರದ್ದುಪಡಿಸಲಾಗಿದೆ.

ಎನ್‌ಡಿಎ ಮೈತ್ರಿಕೂಟದ ಪಾಲುದಾರ ಪಕ್ಷವಾದ ಲೋಕ ಜನಶಕ್ತಿ ಪಾರ್ಟಿ (ಎಲ್‌ಜೆಪಿ) ಅಧ್ಯಕ್ಷರೂ ಆಗಿರುವ ಪಾಸ್ವಾನ್‌ ಅವರು ಏರ್‌ ಇಂಡಿಯಾ ವಿಮಾನದಲ್ಲಿ ನವದೆಹಲಿಗೆ ತೆರಳಲು ಸೋಮವಾರ ಇಲ್ಲಿನ ಜಯಪ್ರಕಾಶ್‌ ನಾರಾಯಣ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಸಂದರ್ಭದಲ್ಲಿವಿಐಪಿ ಸೌಲಭ್ಯ ಕಳೆದುಕೊಂಡಿದ್ದು ಗೊತ್ತಾಯಿತು. ಕಡ್ಡಾಯವಾಗಿ ಭದ್ರತಾ ತಪಾಸಣೆಗೊಳಪಟ್ಟು, ಸಾಮಾನ್ಯ ಪ್ರಯಾಣಿಕರಂತೆ ವಿಮಾನ ನಿಲ್ದಾಣದೊಳಗೆ ಬರಲು ಪಾಸ್ವಾನ್‌ ಅವರಿಗೆ ಅಧಿಕಾರಿಗಳು ಸೂಚಿಸಿದರು.

‘ವಿಐಪಿ ಸ್ಥಾನಮಾನ ನೀಡಿದ್ದರಿಂದ, ವಿಮಾನ ನಿಲ್ದಾಣದೊಳಗೆ ವಿಮಾನದವರೆಗೂ ನಿಲ್ದಾಣದ ವಾಹನದ ಮೂಲಕ ಹೋಗಬಹುದಿತ್ತು. ಆದರೆ, ನಾಗರಿಕ ವಿಮಾನಯಾನ ಸಚಿವಾಲಯದ ಸುತ್ತೋಲೆ ಬಂದ ನಂತರ ಈಗ ಆ ಸೌಲಭ್ಯವನ್ನು ಹಿಂತೆಗೆದುಕೊಳ್ಳಲಾಗಿದೆ. ಆರೋಗ್ಯದ ಆಧಾರದ ಮೇಲೆ ಪಾಸ್ವಾನ್‌ ಅವರಿಗೆ ವಿಶೇಷ ಸೌಲಭ್ಯ ನಿಡಲಾಗಿತ್ತು. ಅದು ಡಿಸೆಂಬರ್‌ 31ಕ್ಕೆ ಮುಕ್ತಾಯವಾಗಿದೆ’ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

‘ವಿಶೇಷ ಸೌಲಭ್ಯ ಹಿಂಪಡೆದಿದ್ದಕ್ಕೆ ಯಾವುದೇ ಬೇಸರವಿಲ್ಲ. ಬೆಳಗಿನ ವಾಯುವಿಹಾರಕ್ಕೆ ಹೋದಂತೆ ಸ್ವಲ್ಪ ದೂರ ನಡೆದುಕೊಂಡು ಹೋಗಲು ನನ್ನದೇನೂ ಆಕ್ಷೇಪವಿಲ್ಲ’ ಎಂದು ಪಾಸ್ವಾನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.