ಹೈದರಾಬಾದ್: ಮುಂಬರುವ ಚುನಾವಣೆಯಲ್ಲಿ ಲೋಕಸಭೆಗೆ ಸ್ಪರ್ಧಿಸಬೇಕೋ, ವಿಧಾನಸಭೆಗೆ ಸ್ಪರ್ಧಿಸಬೇಕೋ ಎಂಬ ಬಗ್ಗೆ ನಟ ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಗೊಂದಲದಲ್ಲಿ ಇದ್ದಾರೆ.
ಪೀಠಾಪುರಂ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸುವುದಾಗಿ ಪಕ್ಷದ ಕಾರ್ಯಕ್ರಮದಲ್ಲಿ ಗುರುವಾರ ಹೇಳಿದ್ದರಾದರೂ, ಲೋಕಸಭೆಗೇ ಸ್ಪರ್ಧಿಸಬೇಕು ಎಂಬ ಸಲಹೆಗಳೂ ಇವೆ. ಹೀಗಾಗಿ, ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುತ್ತಿಲ್ಲ ಎಂದಿದ್ದಾರೆ.
ಜನಸೇನಾಗೆ ನಿಗದಿಯಾದ ಕ್ಷೇತ್ರಗಳ ಪೈಕಿ ಒಂದರಿಂದ ಲೋಕಸಭೆಗೆ ಸ್ಪರ್ಧಿಸಲು ಬಿಜೆಪಿ ಮುಖಂಡರು ಪವನ್ ಕಲ್ಯಾಣ್ ಅವರಿಗೆ ಸಲಹೆ ನೀಡಿದ್ದಾರೆ. ಗೆದ್ದರೆ ಕೇಂದ್ರದಲ್ಲಿ ಮಂತ್ರಿಯಾಗುವ ಭರವಸೆಯನ್ನೂ ನೀಡಿದ್ದಾರೆ ಎನ್ನಲಾಗಿದೆ.
ಸೀಟು ಹಂಚಿಕೆ ಸೂತ್ರದಂತೆ, ಜನಸೇನಾ ಪಕ್ಷಕ್ಕೆ ಕಾಕಿನಾಡ, ಮಚಿಲಿಪಟ್ನಂ ಲೋಕಸಭೆ ಕ್ಷೇತ್ರಗಳು ನಿಗದಿಯಾಗಿವೆ. ಮಚಿಲಿಪಟ್ನಂ ಕ್ಷೇತ್ರಕ್ಕೆ ವಲ್ಲಭನೇನಿ ಬಾಲಶೌರಿ ಅವರನ್ನು ಅಭ್ಯರ್ಥಿಯಾಗಿ ಈಗಾಗಲೇ ಜನಸೇನಾ ಆಯ್ಕೆ ಮಾಡಿದೆ. ಉಳಿದಂತೆ ಕಾಕಿನಾಡ ಲೋಕಸಭೆ ಕ್ಷೇತ್ರದಿಂದ ಪವನ್ ಕಲ್ಯಾಣ್ ಸ್ಪರ್ಧಿಸಬೇಕು ಎಂದು ಬಿಜೆಪಿ ಬಯಸಿದೆ.
2019ರಲ್ಲಿ ಪವನ್ ಕಲ್ಯಾಣ್ ಅವರು ಗಜುವಾಕಾ ಮತ್ತು ಭೀಮಾವರಂ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದರು. ಎರಡೂ ಕಡೆ ಸೋತಿದ್ದರು. ಈಗ ಕಾಕಿನಾಡ ಜಿಲ್ಲೆಯ ಪಿಠಾಪುರಂ ಕ್ಷೇತ್ರ ಸುರಕ್ಷಿತ ಎಂದು ಭಾವಿಸಿದ್ದಾರೆ ಎನ್ನಲಾಗಿದೆ.
ಪಿಠಾಪುರಂ ವಿಧಾನಸಭಾ ಕ್ಷೇತ್ರದಲ್ಲಿ ಪವನ್ ಕಲ್ಯಾಣ್ ಸೇರಿದ ಕಾಪು ಸಮಾಜದ ಅಂದಾಜು 90 ಸಾವಿರ, ಹಿಂದುಳಿದ ವರ್ಗದ 80 ಸಾವಿರ ಮತಗಳಿವೆ. ಹಿಂದಿನ ಚುನಾವಣೆಗಳಲ್ಲಿ ಬಹುತೇಕ ಕಾಪು ಸಮುದಾಯದವರೇ ಗೆದ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.