ADVERTISEMENT

ಪಿಂಚಣಿ ಆಡಳಿತಕ್ಕೆ ವ್ಯವಸ್ಥಿತ ಸುಧಾರಣೆ ಅಗತ್ಯ: ಸಚಿವ ಜಿತೇಂದ್ರ ಸಿಂಗ್‌

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 15:52 IST
Last Updated 2 ಜುಲೈ 2025, 15:52 IST
ಜಿತೇಂದ್ರ ಸಿಂಗ್‌
ಜಿತೇಂದ್ರ ಸಿಂಗ್‌   

ನವದೆಹಲಿ (ಪಿಟಿಐ): ಪಿಂಚಣಿ ಆಡಳಿತ ವ್ಯವಸ್ಥೆಗೆ ತುರ್ತಾಗಿ ಸಾಂಸ್ಥಿಕ ಸಂಯೋಜನೆ ಮತ್ತು ವ್ಯವಸ್ಥಿತ ಸುಧಾರಣೆಯ ಅಗತ್ಯವಿದೆ ಎಂದು ಕೇಂದ್ರ ಸಿಬ್ಬಂದಿ ಖಾತೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಬುಧವಾರ ಪ್ರತಿಪಾದಿಸಿದರು.

ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಪಿಂಚಣಿ ವ್ಯಾಜ್ಯಗಳ ಕುರಿತು ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಒಟ್ಟು ಸಿಬ್ಬಂದಿಗೂ ಹೆಚ್ಚಿನ ಸಂಖ್ಯೆಯಲ್ಲಿ ಪಿಂಚಣಿದಾರರು ಇದ್ದಾರೆ. ಹೀಗಾಗಿ ಪಿಂಚಣಿ ಆಡಳಿತ ವ್ಯವಸ್ಥೆಯಲ್ಲಿ ಗಣನೀಯ ಸುಧಾರಣೆಗಳು ಆಗಬೇಕಿವೆ ಎಂದು ಅವರು ಹೇಳಿದರು.

ADVERTISEMENT

ಪಿಂಚಣಿ ಸಂಬಂಧಿತ ಕಾನೂನು ವಿವಾದಗಳನ್ನು ಕಡಿಮೆಗೊಳಿಸುವ ಮತ್ತು ತ್ವರಿತವಾಗಿ ನ್ಯಾಯ ದೊರಕಿಸುವುದನ್ನು ಖಾತರಿಪಡಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಅಲ್ಲದೆ ಹಿರಿಯ ನಾಗರಿಕರಿಗೆ ಅನಗತ್ಯ ಕಿರಿಕಿರಿ ತಪ್ಪಿಸಿ, ಪರಿಣಾಮಕಾರಿಯಾಗಿ ಸೇವೆ ದೊರೆಯುವಂತೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. 

60 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರದ ಪಿಂಚಣಿದಾರರು ಇದ್ದಾರೆ ಎಂದು ಮಾಹಿತಿ ನೀಡಿದ ಸಚಿವರು, ಕಾನೂನನ್ನು ತಪ್ಪಾಗಿ ಅರ್ಥೈಸುವುದರಿಂದ ಮತ್ತು ಕುಂದುಕೊರತೆಗಳನ್ನು ಪರಿಹರಿಸುವಲ್ಲಿನ ವಿಳಂಬದಿಂದಾಗಿ ಹಿರಿಯ ನಾಗರಿಕರಿಗೆ ಕಿರಿಕಿರಿ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ಪ್ರಸ್ತುತ ವಿವಿಧ ವೇದಿಕೆಗಳಲ್ಲಿ ಪಿಂಚಣಿ ಸಂಬಂಧ 300ಕ್ಕೂ ಹೆಚ್ಚು ಪ್ರಕರಣಗಳು ಬಾಕಿಯಿವೆ. ಇದರಲ್ಲಿ ಕೇಂದ್ರೀಯ ಆಡಳಿತ ನ್ಯಾಯಮಂಡಳಿ (ಸಿಎಟಿ)ಯಲ್ಲಿಯೇ ಶೇ 70ರಷ್ಟು ಪ್ರಕರಣಗಳಿವೆ ಎಂದು ಅವರು ಅಂಕಿ ಅಂಶ ನೀಡಿದರು.

‘ವ್ಯಾಜ್ಯವು ಯಾವಾಗಲೂ ಕೊನೆಯ ಮಾರ್ಗವಾಗಬೇಕೇ ಹೊರತು, ಮೊದಲಿನದ್ದಲ್ಲ’ ಎಂದ ಸಚಿವರು, ಪಿಂಚಣಿದಾರರ ದೂರು, ಕುಂದುಕೊರತೆಗಳನ್ನು ಎಚ್ಚರದಿಂದ ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.  

ಕಾರ್ಯಾಗಾರಕ್ಕೆ ವರ್ಚುವಲ್‌ ಆಗಿ ಹಾಜರಾಗಿದ್ದ ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ ಅವರು, ‘2028ರ ವೇಳೆಗೆ ಪಿಂಚಣಿ ಸಂಬಂಧಿತ ಯಾವುದೇ ವ್ಯಾಜ್ಯ ಇಲ್ಲದಂತೆ ಆಡಳಿತಾತ್ಮಕ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.