ADVERTISEMENT

ಡಿಎ, ಡಿಆರ್‌ ಬಿಡುಗಡೆಗೆ ಪ್ರಧಾನಿ ಮಧ್ಯಸ್ಥಿಕೆ ವಹಿಸಲಿ: ಬಿಎಂಎಸ್‌

ಪಿಟಿಐ
Published 12 ಸೆಪ್ಟೆಂಬರ್ 2021, 7:30 IST
Last Updated 12 ಸೆಪ್ಟೆಂಬರ್ 2021, 7:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ:‘ ಕೇಂದ್ರ ಸರ್ಕಾರಿ ನೌಕಕರು ಮತ್ತು ಪಿಂಚಣಿದಾರರ ಬಾಕಿ ಉಳಿದಿರುವ ತುಟ್ಟಿಭತ್ಯೆ (ಡಿ.ಎ) ಮತ್ತು ತುಟ್ಟಿ ಪರಿಹಾರಗಳ (ಡಿ.ಆರ್‌) ಬಿಡುಗಡೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕು’ ಎಂದು ಭಾರತೀಯ ಪೆನ್ಷನರ್ಸ್‌ ಮಂಚ್ (ಬಿಎಂಎಸ್) ಮನವಿ ಮಾಡಿದೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ಹಣಕಾಸು ಸಚಿವಾಲಯವು ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ತುಟಿಭತ್ಯೆ (ಡಿ.ಎ) ಹೆಚ್ಚಳವನ್ನು 2021, ಜೂನ್‌ 30ರವರೆಗೆ ತಡೆಹಿಡಿಯಿತು.

ಈ ವರ್ಷ ಸರ್ಕಾರವು ಜುಲೈ 1 ರಿಂದಡಿ.ಎ ಮತ್ತು ಡಿ.ಆರ್‌ ಅನ್ನು ಶೇಕಡ 28ಕ್ಕೆ ಏರಿಸಿತು. 48 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರಿ ನೌಕಕರು ಮತ್ತು 65 ಲಕ್ಷ ಪಿಂಚಣಿದಾರರು ಇದರ ಪ್ರಯೋಜನವನ್ನು ಪಡೆದರು.

ADVERTISEMENT

2020, ಜನವರಿ 1ರಿಂದ ಜೂನ್ 30, 2021ರವರೆಗಿನ ಡಿಎ ದರವು ಶೇಕಡ 17ರಷ್ಟಿತ್ತು. ಆದರೂ ಸಚಿವಾಲಯವು, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಬಾಕಿ ಉಳಿದಿರುವ ಡಿ.ಎ ಮತ್ತು ಡಿ.ಆರ್‌ ಅನ್ನು ಬಿಡುಗಡೆ ಮಾಡಿಲ್ಲ.

‘ಈ ವಿಷಯದಲ್ಲಿ ಪ್ರಧಾನಿ ಮೋದಿ ಅವರು ಮಧ್ಯಪ್ರವೇಶಿಸಿ, ಜನವರಿ 1, 2020 ರಿಂದ ಜೂನ್‌ 30, 2021ರವರೆಗಿನ ಡಿಎ/ಡಿಆರ್‌ ಅನ್ನು ಶೀಘ್ರವಾಗಿ ಬಿಡುಗಡೆಗೊಳಿಸುವಂತೆ ಹಣಕಾಸು ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು’ ಎಂದು ಬಿಎಂಎಸ್‌ ಪತ್ರದಲ್ಲಿ ಮನವಿ ಮಾಡಿದೆ.

‘ಈ ಅವಧಿಯಲ್ಲಿ ಚಿಲ್ಲರೆ ಹಣದುಬ್ಬರ ಹೆಚ್ಚಾಗಿದೆ. ಜತೆಗೆ, ಇಂಧನ, ಖಾದ್ಯ ತೈಲ, ಧಾನ್ಯಗಳ ಬೆಲೆಯು ದಾಖಲೆ ಮಟ್ಟಕ್ಕೆ ಏರಿದೆ. ಜೀವನ ವೆಚ್ಚ ಹೆಚ್ಚಾಗಿರುವ ಈ ಸಮಯದಲ್ಲಿ ನೌಕಕರು ಮತ್ತು ಪಿಂಚಣಿದಾರರಿಗೆಡಿಎ/ಡಿಆರ್‌ ನೆರವಾಗಲಿದೆ. ಹಾಗಾಗಿ ಅವರಿಗೆ ಪರಿಹಾರವನ್ನು ನಿರಾಕರಿಸುವುದು ಅನ್ಯಾಯ’ ಎಂದು ಪತ್ರದಲ್ಲಿ ಹೇಳಲಾಗಿದೆ.

‘ಹೆಚ್ಚಿನ ಪಿಂಚಣಿದಾರರು ತಮ್ಮ ವೃದ್ಧಾಪ್ಯದಲ್ಲಿರುವುದರಿಂದ ಅವರಿಗೆ ವೈದ್ಯಕೀಯ ನೆರವಿನ ಅಗತ್ಯವಿರುತ್ತದೆ. ಅಲ್ಲದೆ, ಕೋವಿಡ್‌ನಿಂದಾಗಿ ಪ್ರತಿ ಸರಕಿನ ಬೆಲೆಯು ದುಪ್ಪಟಾಗಿದೆ. ದೇಶ ಕೋವಿಡ್‌ನಿಂದಾಗಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ, ಈಗಾಗಲೇ ಪಿಂಚಣಿದಾರರು ತಮ್ಮ ಒಂದು ದಿನದ ಪಿಂಚಣಿಯನ್ನು ಪ್ರಧಾನಿ ಕೇರ್‌ ಫಂಡ್‌ಗೆ ನೀಡಿದ್ದಾರೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.