ADVERTISEMENT

ಕೈದಿಗಳ ಅವಧಿಪೂರ್ವ ಬಿಡುಗಡೆ ಪರೋಲ್‌ ಅವಧಿ ಪರಿಗಣನೆ ಬೇಡ– ಸುಪ್ರೀಂ

ಪಿಟಿಐ
Published 7 ಜನವರಿ 2023, 13:31 IST
Last Updated 7 ಜನವರಿ 2023, 13:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ (ಪಿಟಿಐ): ಕೈದಿಗಳ ಅವಧಿಪೂರ್ವ ಬಿಡುಗಡೆ ಅರ್ಜಿ ಪರಿಗಣಿಸುವಾಗ ಕೈದಿಯು ಪರೋಲ್‌ ಮೇಲೆ ಜೈಲಿನ ಹೊರಗಿದ್ದ ಅವಧಿಯನ್ನು ಶಿಕ್ಷೆಯ ಅವಧಿಯ ಭಾಗವಾಗಿ ಪರಿಗಣಿಸಬಾರದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ, ಸಿ.ಟಿ.ರವಿಕುಮಾರ್ ಅವರಿದ್ದ ಪೀಠವು ಈ ಕುರಿತ ಬಾಂಬೆ ಹೈಕೋರ್ಟ್‌ನ ಆದೇಶವನ್ನು ಎತ್ತಿಹಿಡಿಯಿತು. ಪರೋಲ್ ಅವಧಿ ಪರಿಗಣಿಸಿದರೆ ಕೈದಿ ಹಲವು ಬಾರಿ ಪರೋಲ್‌ಗೆ ಅರ್ಜಿ ಸಲ್ಲಿಸಬಹುದು ಎಂದೂ ಹೇಳಿತು.

ಅರ್ಜಿದಾರ ಪರ ವಕೀಲರ ವಾದವನ್ನು ಪರಿಗಣಿಸಿದರೆ ಕೈದಿ ಹೆಚ್ಚು ಬಾರಿ ಪರೋಲ್‌ ಪಡೆಯಲು ಮುಂದಾಗಬಹುದು. ಪರೋಲ್ ಪಡೆಯಲು ಮಿತಿ ಇಲ್ಲದ ಕಾರಣ, ಶಿಕ್ಷೆಯನ್ನು ವಿಧಿಸುವ ಮೂಲ ಉದ್ದೇಶವೇ ಅರ್ಥಕಳೆದುಕೊಳ್ಳಬಹುದು ಎಂದು ಹೇಳಿತು.

ADVERTISEMENT

ಹೀಗಾಗಿ, ಶಿಕ್ಷೆಯ ಅವಧಿಯನ್ನು ಲೆಕ್ಕ ಹಾಕುವಾಗ ಪರೋಲ್ ಅವಧಿಯನ್ನು ಪರಿಗಣಿಸಬಾರದು. ಈ ಕುರಿತಂತೆ ಹೈಕೋರ್ಟ್ ಅದೇಶಕ್ಕೆಪೂರ್ಣ ಸಹಮತವಿದೆ ಎಂದು ಅಭಿಪ್ರಾಯಪಟ್ಟಿತು.

ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದು, ಗೋವಾ ಕಾರಾಗೃಹ ನಿಯಮ 2006ರ ಅನ್ವಯ ಬಿಡುಗಡೆಗೊಂಡಿದ್ದ ಹಲವು ಕೈದಿಗಳ ಪರವಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು.

ಎಲ್ಲ ಕೈದಿಗಳು 2006ರ ನಿಯಮದ ಅನುಸಾರ ಅವಧಿಪೂರ್ವ ಬಿಡುಗಡೆಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಗೋವಾ ಸರ್ಕಾರ, ಉಲ್ಲೇಖಿತ ಕೈದಿಗಳಿಗೆ ಶಿಕ್ಷೆ ವಿಧಿಸಿದ್ದ ಕೋರ್ಟ್‌ನ ಅಭಿಪ್ರಾಯ ಕೇಳಿತ್ತು. ಕೈದಿಗಳ ಅಪರಾಧ ಸ್ವರೂಪವನ್ನು ಆಧರಿಸಿ ಅವಧಿಪೂರ್ವ ಬಿಡುಗಡೆ ಸಲ್ಲದು ಎಂದು ಕೆಳಹಂತದ ನ್ಯಾಯಾಲಯಗಳು ಅಭಿಪ್ರಾಯ ನೀಡಿದ್ದವು.

ಹೀಗಾಗಿ, ಸರ್ಕಾರ ಅರ್ಜಿಯನ್ನು ತಿರಸ್ಕರಿಸಿತ್ತು. ಸರ್ಕಾರದ ಕ್ರಮವನ್ನು ಪರಶ್ನಿಸಿ ಕೈದಿಗಳು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಕೆಳಹಂತದ ಕೋರ್ಟ್‌ಗಳ ಅಭಿಪ್ರಾಯವನ್ನು ಅನುಮೋದಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.