ADVERTISEMENT

ಶೀಘ್ರವೇ ಎಂದಿನಂತೆ ಕಲಾಪ: 'ಸುಪ್ರೀಂ' ಸಮಿತಿ ಶಿಫಾರಸು

ಪಿಟಿಐ
Published 13 ಆಗಸ್ಟ್ 2020, 6:28 IST
Last Updated 13 ಆಗಸ್ಟ್ 2020, 6:28 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಸುಪ್ರೀಂ ಕೋರ್ಟಿನಲ್ಲಿ ಕಲಾಪ ಚಟುವಟಿಕೆಗಳು ಎಂದಿನಂತೆಯೇ ಮುಂದಿನ ವಾರದಿಂದ ಆರಂಭವಾಗುವ ಸಂಭವವಿದೆ. 15 ಪೀಠಗಳ ಪೈಕಿ ಕನಿಷ್ಠ 3ರಲ್ಲಿ ಹೆಚ್ಚುವರಿ ಸುರಕ್ಷತಾ ಕ್ರಮಗಳೊಂದಿಗೆ ಕಲಾಪ ಆರಂಭಿಸಬೇಕು ಎಂದು ಏಳು ನ್ಯಾಯಮೂರ್ತಿಗಳಿದ್ದ ಸುಪ್ರೀಂ ಕೋರ್ಟ್ ಸಮಿತಿ ಶಿಫಾರಸು ಮಾಡಿದೆ.

ಕೋವಿಡ್-19ನಿಂದ ಉದ್ಘವಿಸಿರುವ ಪರಿಸ್ಥಿತಿಯಿಂದಾಗಿ ಸುಪ್ರೀಂ ಕೋರ್ಟ್ ಈ ವರ್ಷದ ಮಾರ್ಚ್ 25ರಿಂದಲೂ ವಿಡಿಯೊ ಕಾನ್ಫರೆನ್ಸ್ ಮೂಲಕ ಕಲಾಪ ನಡೆಸುತ್ತಿದೆ. ಲಾಕ್ ಡೌನ್ ನಿಯಮಗಳನ್ನು ಸಡಿಲಿಸಿದ ನಂತರವೂ ಇದೇ ಸ್ಥಿತಿ ಮುಂದುವರಿದಿದೆ.

ಜುಲೈ ಕಡೆಯ ವಾರದಲ್ಲಿ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಏಳು ಸದಸ್ಯರ ಸಮಿತಿಯು ಎಂದಿನಂತೇ ಕಲಾಪ ಪುನರಾರಂಭಿಸುವ ಕುರಿತು ವಕೀಲರ ಸಂಘದ ಪದಾಧಿಕಾರಿಗಳ ಜೊತೆಗೂ ಚರ್ಚಿಸಿದ್ದು, ಎರಡು ವಾರದ ನಂತರ ತೀರ್ಮಾನ ಕೈಗೊಳ್ಳಬಹುದು ಎಂದು ಅಭಿಪ್ರಾಯಪಟ್ಟಿತ್ತು.

ADVERTISEMENT

ಸುಪ್ರಿಂ ಕೋರ್ಟಿನ ವಕೀಲರ ಸಂಘದ ಅಧ್ಯಕ್ಷ ಶಿವಾಜಿ ಎಂ.ಜಾಧವ್ ಅವರು, ನ್ಯಾಯಮೂರ್ತಿಗಳ ಸಮಿತಿಯು ಸಂಘದೊಂದಿಗೆಚರ್ಚಿಸಿದ್ದು, 2-3 ಪೀಠದಲ್ಲಿ ಕಲಾಪ ಪುನರಾರಂಭಿಸುವುದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ಅವರಿಗೆ ಸಮಿತಿಯು ಶೀಘ್ರದಲ್ಲಿಯೇ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.