ADVERTISEMENT

POCSO ಕೇಸ್‌: ಲೈಂಗಿಕ ಹಲ್ಲೆ ತೀರ್ಮಾನಕ್ಕೆ ಸಾಕ್ಷ್ಯ ಬೇಕು– ದೆಹಲಿ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2024, 16:17 IST
Last Updated 29 ಡಿಸೆಂಬರ್ 2024, 16:17 IST
   

ನವದೆಹಲಿ: ಪೋಕ್ಸೊ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯೊಬ್ಬನನ್ನು ದೆಹಲಿ ಹೈಕೋರ್ಟ್‌ ದೋಷಮುಕ್ತಗೊಳಿಸಿದೆ. ಬಾಲಕ ಅಥವಾ ಬಾಲಕಿಯು ‘ದೈಹಿಕ ಸಂಬಂಧ’ ಎಂಬ ಪದವನ್ನು ಬಳಸಿದ್ದಾರೆ ಎಂದಮಾತ್ರಕ್ಕೆ, ಅದನ್ನು ಲೈಂಗಿಕ ಹಲ್ಲೆ ಎಂದು ಅರ್ಥ ಮಾಡಿಕೊಳ್ಳಬೇಕಿಲ್ಲ ಎಂದು ಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಪ್ರತಿಭಾ ಎಂ. ಸಿಂಗ್ ಮತ್ತು ಅಮಿತ್ ಶರ್ಮ ಅವರು ಇರುವ ವಿಭಾಗೀಯ ಪೀಠವು, ಸಂತ್ರಸ್ತೆಯು ಆರೋಪಿಯ ಜೊತೆ ಸ್ವಇಚ್ಛೆಯಿಂದ ತೆರಳಿದ್ದಾಗ, ಆಕೆಯ ಮೇಲೆ ಲೈಂಗಿಕ ಹಲ್ಲೆ ನಡೆದಿದೆ ಎಂಬ ತೀರ್ಮಾನಕ್ಕೆ ವಿಚಾರಣಾ ನ್ಯಾಯಾಲಯವು ಹೇಗೆ ಬಂದಿತು ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದೆ.

ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಮೇಲ್ಮನವಿಯನ್ನು ವಿಭಾಗೀಯ ಪೀಠವು ಮಾನ್ಯ ಮಾಡಿದೆ.

ADVERTISEMENT

ದೈಹಿಕ ಸಂಬಂಧವನ್ನು ಲೈಂಗಿಕ ಹಲ್ಲೆ ಮತ್ತು ಲೈಂಗಿಕ ಸಂಪರ್ಕದ ಮೂಲಕ ನಡೆದ ಹಲ್ಲೆ ಎಂಬುದನ್ನು ಹೇಳುವಾಗ, ಅದನ್ನು ಸಾಬೀತು ಮಾಡುವ ಸಾಕ್ಷ್ಯಗಳು ಇರಬೇಕು. ಅದನ್ನು ತರ್ಕ, ಅನುಮಾನದ ಆಧಾರದಲ್ಲಿ ಮಾತ್ರವೇ ತೀರ್ಮಾನಿಸಬಾರದು ಎಂದು ಪೀಠ ಹೇಳಿದೆ.

‘ಸಂತ್ರಸ್ತೆಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳು ಎಂಬ ಒಂದೇ ಸಂಗತಿಯು, ಅಲ್ಲಿ ಲೈಂಗಿಕ ಸಂಪರ್ಕದ ಮೂಲಕ ಹಲ್ಲೆ ನಡೆದಿತ್ತು ಎಂಬ ತೀರ್ಮಾನಕ್ಕೆ ಬರಲು ಸಾಕಾಗುವುದಿಲ್ಲ. ಸಂತ್ರಸ್ತೆಯು ದೈಹಿಕ ಸಂಬಂಧ ಎಂಬ ಪದವನ್ನು ಬಳಸಿದ್ದಾಳೆ. ಆದರೆ ಅದರ ಅರ್ಥ ಏನು ಎಂಬುದು ಸ್ಪಷ್ಟವಾಗಿಲ್ಲ’ ಎಂದು ಪೀಠ ವಿವರಿಸಿದೆ.

ಅನುಮಾನದ ಲಾಭವನ್ನು ಆರೋಪಿಗೇ ನೀಡಬೇಕು ಎಂದು ಹೇಳಿದೆ. ಸಂತ್ರಸ್ತ ಬಾಲಕಿಯ ತಾಯಿ ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿತ್ತು. 14 ವರ್ಷ ವಯಸ್ಸಿನ ತನ್ನ ಮಗಳನ್ನು ಆಮಿಷವೊಡ್ಡಿ ಅಪಹರಿಸಲಾಗಿದೆ ಎಂದು ದೂರಿನಲ್ಲಿ ಅವರು ಹೇಳಿದ್ದರು. 

ನಂತರ ಸಂತ್ರಸ್ತೆಯು ಆರೋಪಿಯ ಜೊತೆಯಲ್ಲಿ ಫರೀದಾಬಾದ್‌ನಲ್ಲಿ ಪತ್ತೆಯಾಗಿದ್ದಳು. ಆರೋಪಿಯನ್ನು ಐಪಿಸಿ ಅಡಿ ಹಾಗೂ ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.