ADVERTISEMENT

ವಾಹನಗಳ ಮರುನೋಂದಣಿ ನಿಯಮ ಪ್ರಶ್ನಿಸಿ ಪಿಐಎಲ್

ಪಿಟಿಐ
Published 3 ಮಾರ್ಚ್ 2020, 19:15 IST
Last Updated 3 ಮಾರ್ಚ್ 2020, 19:15 IST
   

ನವದೆಹಲಿ: ಒಂದು ರಾಜ್ಯದಲ್ಲಿ ನೋಂದಣಿಯಾಗಿರುವ ವಾಹನ ಮತ್ತೊಂದು ರಾಜ್ಯದವರಿಗೆ ಮಾರಾಟವಾದಾಗ, ಮರುನೋಂದಣಿಗೆಅನುಸರಿಸಬೇಕಿರುವ ನಿಯಮಗಳನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ.

ಈ ಅರ್ಜಿಗೆ ಪ್ರತಿಕ್ರಿಯಿಸುವಂತೆ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಹಾಗೂ ನ್ಯಾಯಮೂರ್ತಿ ತಲ್ವಂತ್ ಸಿಂಗ್ ಅವರ ಪೀಠ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.

ಎಎಪಿ ನಾಯಕ ದೀಪಕ್ ಬಾಜಪೇಯಿ ಅವರು ಸಲ್ಲಿಸಿರುವ ಈ ಪಿಐಎಲ್‌ನಲ್ಲಿ ‘ಬೇರೆ ರಾಜ್ಯದಲ್ಲಿ ನೋಂದಣಿಯಾಗಿರುವ ವಾಹನ ಖರೀದಿಸಿದಾಗ, ಅಲ್ಲಿ ಪಾವತಿಸಿದ್ದ ರಸ್ತೆ ತೆರಿಗೆಯ ಮರುಪಾವತಿಗೆ ಹೊಸ ಮಾಲೀಕರು ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಮರುನೋಂದಣಿ ನಿಯಮಗಳು ವಿಚಿತ್ರವಾಗಿವೆ’ ಎಂದು ತಿಳಿಸಲಾಗಿದೆ.

ADVERTISEMENT

‘ವಾಹನಗಳ ಹೊಸ ಮಾಲೀಕರು ತಮ್ಮ ರಾಜ್ಯದಲ್ಲಿ ರಸ್ತೆ ತೆರಿಗೆ ಪಾವತಿಸಬೇಕು. ಬಳಿಕ ಆ ತೆರಿಗೆ ರಸೀದಿಯನ್ನು ನೋಂದಣಿ ಇದ್ದ ಹಳೆಯ ರಾಜ್ಯದಲ್ಲಿ ತೋರಿಸಿ ಅಲ್ಲಿಂದ ತೆರಿಗೆ ಮರುಪಾವತಿಸಿಕೊಳ್ಳಬೇಕಿದೆ. ಇದಕ್ಕಾಗಿ ರಸ್ತೆ ಸಾರಿಗೆ ಕಚೇರಿಗೆ ಹಲವು ಬಾರಿ ಅಲೆದಾಡಬೇಕಾಗುತ್ತದೆ. ಈ ಇಡೀ ಪ್ರಕ್ರಿಯೆ ವಾಸ್ತವವಾಗಿ ಅಸಾಧ್ಯವಾದದ್ದು ಮತ್ತು ಆರ್ಥಿಕವಾಗಿ ಹೊರೆಯಾಗುತ್ತದೆ’ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.

‘ಖಾಸಗಿ ವಾಹನಗಳಿಗೆ ದೇಶದಾದ್ಯಂತ ಏಕರೂಪ ರಸ್ತೆ ತೆರಿಗೆ ನೀತಿ ರೂಪಿಸಲು ಸಚಿವಾಲಯಕ್ಕೆ ನಿರ್ದೇಶಿಸಬೇಕು’ ಎಂದು ಕೋರಲಾಗಿದೆ.

‘ದೇಶದೆಲ್ಲೆಡೆ ನೋಂದಣಿಯಾಗುವ ವಾಹನಗಳ ಮಾಹಿತಿ ಅಂತರ್ಜಾಲದಲ್ಲಿ ಸಮಗ್ರವಾಗಿ ದೊರಕುವಂತೆ ಕೇಂದ್ರ ಸರ್ಕಾರ ವ್ಯವಸ್ಥೆ ಮಾಡಬೇಕು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.