ADVERTISEMENT

ಪಿಂಕ್ ಸಿಟಿಗೆ ಪಾರಂಪರಿಕ ಮುದ್ರೆ

ಸಾಂಸ್ಕೃತಿಕ ವೈಭವದ ಜೈಪುರಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ನೀಡಿದ ಯುನೆಸ್ಕೊ

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 20:00 IST
Last Updated 6 ಜುಲೈ 2019, 20:00 IST
   

ಸಾಂಪ್ರದಾಯಿಕ ವಾಸ್ತುಶಿಲ್ಪ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಜೈಪುರ ನಗರಕ್ಕೆ ಈಗ ಅಂತರರಾಷ್ಟ್ರೀಯ ಮಾನ್ಯತೆ ದೊರೆತಿದೆ. ‘ಪಿಂಕ್ ಸಿಟಿ’ ಎಂದೇ ಹೆಸರಾಗಿರುವ ರಾಜಸ್ಥಾನದ ಜೈಪುರ ನಗರ ಯುನೆಸ್ಕೊ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಅರಜ್‌ಬೈಜಾನ್‌ನ ಬಾಕು ಎಂಬಲ್ಲಿ ಜೂನ್ 30ರಿಂದ ಜುಲೈ 10ರವರೆಗೆ ಆಯೋಜನೆಗೊಂಡಿರುವ ಯುನೆಸ್ಕೊ ವಿಶ್ವ ಪಾರಂಪರಿಕ ಸಮಿತಿಯ 43ನೇ ಸಮಾವೇಶದಲ್ಲಿ ಶನಿವಾರ ಈ ಘೋಷಣೆ ಹೊರಬಿದ್ದಿದೆ.

ಸಮೀಕ್ಷೆ: ಸ್ಮಾರಕ ಹಾಗೂ ತಾಣ ಕುರಿತಯುನೆಸ್ಕೊದ ಅಂತರರಾಷ್ಟ್ರೀಯ ಮಂಡಳಿಯು (ಐಸಿಒಎಂಒಎಸ್) ಜೈಪುರ ನಗರಕ್ಕೆ 2018ರಲ್ಲಿ ಭೇಟಿ ನೀಡಿ ಸಮೀಕ್ಷೆ ನಡೆಸಿತ್ತು.

21 ದೇಶಗಳ ಪ್ರತಿನಿಧಿಗಳನ್ನು ಒಳಗೊಂಡ ವಿಶ್ವ ಪಾರಂಪರಿಕ ಸಮಿತಿಯ ಸಮಾವೇಶ ಪ್ರತಿವರ್ಷ ನಡೆಯುತ್ತದೆ. ಈ ಬಾರಿಯ ಸಮಾವೇಶದಲ್ಲಿ ಜೈಪುರ ನಗರಕ್ಕೆ ಪಾರಂಪರಿಕ ಮುದ್ರೆ ಒತ್ತುವ ಪ್ರಸ್ತಾವಕ್ಕೆ ಅಂಗೀಕಾರ ಸಿಕ್ಕಿತು. ಯುನೆಸ್ಕೊಗೆ ನಾಮನಿರ್ದೇಶಿತಗೊಂಡ ಪಟ್ಟಿಯಲ್ಲಿ ಜೈಪುರ ಸೇರಿ 36 ಸ್ಮಾರಕಗಳು ಇದ್ದವು.

ADVERTISEMENT

ಐತಿಹಾಸಿಕ ನಗರಿ

ಎರಡನೇ ಸವಾಯಿ ಜೈಸಿಂಗ್ ಅವರಿಂದ 1727ರಲ್ಲಿ ಜೈಪುರ ನಗರ ನಿರ್ಮಾಣವಾಯಿತು ಎಂದು ಇತಿಹಾಸ ಹೇಳುತ್ತದೆ.ವಾಸ್ತುಶಾಸ್ತ್ರದ ಪ್ರಕಾರ ನಿರ್ಮಿಸಿದ ಭಾರತದ ಮೊದಲ ನಗರ ಎಂಬ ಮಾತೂ ಇದೆ. ಈ ನಗರದಲ್ಲಿ ಉತ್ಕೃಷ್ಟ ವಾಸ್ತುಶಿಲ್ಪದ ಹಲವು ಕಟ್ಟಡಗಳು ಸಿಗುತ್ತವೆ.

ಉತ್ಕೃಷ್ಟ ಸಂಸ್ಕೃತಿಯೇ ಮಾನದಂಡ

ನಗರ ಯೋಜನೆ ಹಾಗೂ ವಾಸ್ತುಶಿಲ್ಪ ವಿಚಾರದಲ್ಲಿ ಅನುಕರಣೀಯ ಮಾದರಿ ಅನುಸರಿಸಿದ ಜೈಪುರವನ್ನು ಆಯ್ಕೆಗೆ ಪರಿಗಣಿಸಲಾಗಿದೆ. ಈ ಮೂಲಕ ಮಧ್ಯ ಕಾಲೀನ ಅವಧಿಯಲ್ಲಿ ಹೊಸ ಚಿಂತನೆಗಳ ವಿನಿಮಯಕ್ಕೂ ನಗರ ಕಾರಣವಾಗಿತ್ತು. ಹಿಂದೂ, ಮೊಘಲ್ ಹಾಗೂ ಪಾಶ್ಚಿಮಾತ್ಯ ಪರಿಕಲ್ಪನೆ ಮೇಳೈಸಿದ್ದವು.

ಇದೇ ಅವಧಿಯಲ್ಲಿ ದಕ್ಷಿಣ ಏಷ್ಯಾದಲ್ಲೇ ವಿಭಿನ್ನ ನೆಲೆಯ ವ್ಯಾಪಾರಿ ನಗರವಾಗಿ ಜೈಪುರ ಬೆಳೆದಿತ್ತು. ಅಭಿವೃದ್ಧಿ ಹೊಂದುತ್ತಿರುವ ವ್ಯಾಪಾರ ಹಾಗೂ ವಾಣಿಜ್ಯ ಕೇಂದ್ರ ರೂಪುಗೊಳ್ಳಲು ಹೊಸ ಹೊಸ ಪರಿಕಲ್ಪನೆಗಳಿಗೆ ವೇದಿಕೆಯಾಗಿತ್ತು. ಜೊತೆಗೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿರುವ ಸಾಂಪ್ರದಾಯಿಕ ಜೀವನಶೈಲಿ ಹಾಗೂ ಕರಕುಶಲ ಕಲೆಗಳು ಯುನೆಸ್ಕೊ ಗಮನ ಸೆಳೆದಿವೆ.

ಯುನೆಸ್ಕೊ ಮಾನ್ಯತೆಯ ಅನುಕೂಲಗಳು

* ಸ್ಮಾರಕ ಸಂರಕ್ಷಣೆಯ ಅಗತ್ಯತೆ ಬಗ್ಗೆ ಅಂತರರಾಷ್ಟ್ರೀಯ ಗಮನ ಸೆಳೆಯುತ್ತದೆ

* ಪ್ರವಾಸೋದ್ಯಮ ಹೆಚ್ಚಳವಾಗಿ, ದೇಶದ ಆರ್ಥಿಕತೆ ಹಾಗೂ ಸ್ಥಳೀಯ ವ್ಯಾಪಾರ ವೃದ್ಧಿ

* ಜಿನೀವಾ ಒಪ್ಪಂದದ ಪ್ರಕಾರ ಯುದ್ಧದ ವೇಳೆ ಈ ಸ್ಮಾರಕಗಳಿಗೆ ಹಾನಿ ಮಾಡುವಂತಿಲ್ಲ

* ಸ್ಮಾರಕ ಹಾನಿಗೀಡಾದರೆ, ಅಂತರರಾಷ್ಟ್ರೀಯ ವಲಯದಿಂದ ದೊಡ್ಡ ಹಣಕಾಸಿನ ನೆರವು

ಯೋಜನಾಬದ್ಧಮೊದಲ ನಗರ

1699–1744ರ ಅವಧಿಯಲ್ಲಿ ಆಳ್ವಿಕೆ ನಡೆಸಿದ್ದ ಜೈಸಿಂಗ್‌ನ ರಾಜಧಾನಿ ಅಂಬರ್‌. ಇದು ಜೈಪುರದಿಂದ 11 ಕಿಲೋಮೀಟರ್ ದೂರದಲ್ಲಿದೆ. ಜನಸಂಖ್ಯೆ ಹೆಚ್ಚಳ ಹಾಗೂ ನೀರಿನ ಕೊರತೆ ಮನಗಂಡು ರಾಜಧಾನಿಯನ್ನು ವರ್ಗಾಯಿಸುವ ನಿರ್ಧಾರ ಮಾಡಿದ ರಾಜ, ಅತ್ಯುತ್ತಮ ನಗರ ಯೋಜನೆ ರೂಪಿಸಿ ಜೈಪುರ ನಗರವನ್ನು ಕಟ್ಟಿದ. ಹೀಗಾಗಿ ಜೈಪುರ ದೇಶದ ಮೊದಲ ಯೋಜನಾಬದ್ಧ ನಗರ ಎನಿಸಿಕೊಂಡಿದೆ.ಇರಾನ್‌ನ ಹೈರ್ಕಾನಿಯ ಅರಣ್ಯ ಮತ್ತು ಇರಾಕ್‌ನ ಪ್ರಾಚೀನ ನಗರ ಬ್ಯಾಬಿಲಾನ್‌ ಅನ್ನು ಯುನೆಸ್ಕೊ ಪಟ್ಟಿಗೆ ಸೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.