ADVERTISEMENT

ಕಾಂಗ್ರೆಸ್‌– ಚೀನಾ ಒಪ್ಪಂದ ಏನು? ; ತನಿಖೆಗಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 14:49 IST
Last Updated 24 ಜೂನ್ 2020, 14:49 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ‘ಕಾಂಗ್ರೆಸ್‌ ಹಾಗೂ ಚೀನಾದ ಕಮ್ಯುನಿಸ್ಟ್‌ ಪಕ್ಷದ (ಸಿಪಿಸಿ) ಮಧ್ಯೆ 2008ರಲ್ಲಿ ನಡೆದಿದೆ ಎನ್ನಲಾದ ಒಪ್ಪಂದದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಥವಾ ಸಿಬಿಐ ಮೂಲಕ ತನಿಖೆ ನಡೆಸಬೇಕು’ ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಬುಧವಾರ ಅರ್ಜಿ ಸಲ್ಲಿಸಲಾಗಿದೆ.

ವಕೀಲ ಶಶಾಂಕ್‌ ಶೇಖರ್ ಝಾ ಹಾಗೂ ಪತ್ರಕರ್ತ ಸಾವಿಯೊ ರೋಡ್ರಿಗಸ್‌ ಎಂಬುವವರು ಈ ಅರ್ಜಿ ಸಲ್ಲಿಸಿದ್ದು, ‘ಒಪ್ಪಂದದ ವಿವರಗಳನ್ನು ಬಹಿರಂಗಪಡಿಸದಿರುವುದು ನಾಗರಿಕರ ಬದುಕುವ ಹಕ್ಕಿನ ಉಲ್ಲಂಘನೆಯಾಗಿದೆ’ ಎಂದಿದ್ದಾರೆ.

‘ಎರಡು ಪಕ್ಷಗಳ ನಡುವೆ ಉನ್ನತಮಟ್ಟದ ಮಾಹಿತಿ ಮತ್ತು ಸಹಕಾರ ವಿನಿಮಯದ ಈ ಒಪ್ಪಂದಕ್ಕೆ, 2008ರ ಆಗಸ್ಟ್‌ 7ರಂದು ಸಹಿ ಮಾಡಲಾಗಿತ್ತು. ದ್ವಿಪಕ್ಷೀಯ, ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ಪ್ರಮುಖ ಬೆಳವಣಿಗೆಗಳ ಬಗ್ಗೆ ಪರಸ್ಪರ ಸಮಾಲೋಚನೆ ನಡೆಸುವ ವಿಚಾರವೂ ಈ ಒಪ್ಪಂದದಲ್ಲಿ ಇದೆ. ಒಪ್ಪಂದದ ವಿಚಾರದಲ್ಲಿ ಇನ್ನಷ್ಟು ಸ್ಪಷ್ಟತೆ ಹಾಗೂ ಪಾರದರ್ಶಕತೆ ಬೇಕಾಗಿದೆ’ ಎಂದು ಮನವಿಯಲ್ಲಿ ಹೇಳಲಾಗಿದೆ.

ADVERTISEMENT

2008ರಿಂದ 2013ರವರೆಗಿನ ಅವಧಿಯಲ್ಲಿ ಚೀನಾ ಗಡಿಯಲ್ಲಿ 600ಕ್ಕೂ ಹೆಚ್ಚು ಸಂಘರ್ಷಗಳು ನಡೆದಿವೆ ಎಂಬ ಮಾಧ್ಯಮ ವರದಿಯನ್ನು ಉಲ್ಲೇಖಿಸಿರುವ ಅರ್ಜಿದಾರರು, ಸೋನಿಯಾ ಮತ್ತು ರಾಹುಲ್‌ ಗಾಂಧಿ, ಕಾಂಗ್ರೆಸ್‌ ಪಕ್ಷ ಹಾಗೂ ಕೇಂದ್ರ ಸರ್ಕಾರವನ್ನು ಪ್ರತಿವಾದಿಗಳನ್ನಾಗಿ ಹೆಸರಿಸಿದ್ದಾರೆ.

‘ಚೀನಾದೊಂದಿಗೆ ಭಾರತದ ಸಂಬಂಧ ಚೆನ್ನಾಗಿಲ್ಲದಿದ್ದರೂ ಸೋನಿಯಾ ಅವರು, ಆ ದೇಶದ ಜತೆಗೆ ಒಪ್ಪಂದ ಮಾಡಿಕೊಂಡು ಅದರ ವಿವರಗಳನ್ನು ಮುಚ್ಚಿಟ್ಟಿದ್ದರು. ತನ್ನ ಆಡಳಿತಾವಧಿಯಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಮಾಡಿದ್ದ ಪಕ್ಷವೇ ರಾಷ್ಟ್ರೀಯ ಮಹತ್ವದ ಈ ವಿಚಾರದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿದೆ’ ಎಂದಿದ್ದಾರೆ.

ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಪಾರದರ್ಶಕತೆ ಎಂಬ ಮಾಧ್ಯಮದ ಮೂಲಕ ಸಾಧಿಸಬಹುದು. 1967ರ ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆಯಡಿ, ಎನ್‌ಐಎ ಅಥವಾ ಸಿಬಿಐ ಮೂಲಕ ತನಿಖೆ ನಡೆಸಿದರೆ ಮಾತ್ರ ಒಪ್ಪಂದದ ವಿವರಗಳೇನೆಂಬುದು ಬಹಿರಂಗವಾಗಲಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.