ಪಾಕ್ಯೊಂಗ್/ಸಿಕ್ಕಿಂ: ರಾಷ್ಟ್ರದ100ನೇ ಹಾಗೂಸಿಕ್ಕಿಂನ ಮೊದಲ ಗ್ರೀನ್‌ಫೀಲ್ಡ್ ಪಾಕ್ಯೊಂಗ್ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲೋಕಾರ್ಪಣೆ ಮಾಡಿದರು.
‘ಹಿಂದಿನ ಸರ್ಕಾರಗಳು ಹೆಚ್ಚಿನ ಒತ್ತು ನೀಡದ ಕಾರಣ ಅಭಿವೃದ್ಧಿ ಕುಂಠಿತವಾಗಿತ್ತು. ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ. ಭಾರತದ ಬೆಳವಣಿಗೆ ಕಥೆಗೆ ಈ ಭಾಗ ಎಂಜಿನ್ ಆಗಲಿದೆ’ ಎಂದು ಮೋದಿ ಹೇಳಿದರು.
‘ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ವಾಯುಮಾರ್ಗ, ರೈಲು ಮಾರ್ಗಗಳ ಸಂಪರ್ಕ, ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸೌಕರ್ಯ ಸೇರಿದಂತೆಮೂಲಸೌಕರ್ಯ ಅಭಿವೃದ್ಧಿ ಕಲ್ಪಿಸಲು ಒತ್ತು ನೀಡಲಾಗಿದೆ' ಎಂದರು.
ಪರ್ವತಗಳ ನಾಡು ಸಿಕ್ಕಿಂ ಹಾಗೂ ದೇಶಕ್ಕೆ ಐತಿಹಾಸಿಕ ದಿನ ಎಂದು ಬಣ್ಣಿಸಿದ ಅವರು, ‘ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಮೂಲಕ ಆರ್ಥಿಕ ಬೆಳವಣಿಗೆಗೆ ಒತ್ತು ನೀಡಲಾಗುವುದು’ ಎಂದು ಹೇಳಿದರು.
ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಭಾಗವಹಿಸಿದ್ದರು.
9 ವರ್ಷಗಳ ನಂತರ ಸಾಕಾರಗೊಂಡ ಕನಸು: ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್‌ನಿಂದ 33 ಕಿ.ಮೀ. ದೂರದಲ್ಲಿರುವಪಾಕ್ಯೊಂಗ್‌ನಲ್ಲಿ 2009 ರಲ್ಲಿಯೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. ಅದು 9 ವರ್ಷಗಳ ನಂತರ ಸಾಕಾರಗೊಂಡಿದೆ.
ಭಾರತ–ಚೀನಾ ಗಡಿ ಭಾಗದಿಂದ 60 ಕಿ.ಮೀ. ದೂರದ ಪಾಕ್ಯೊಂಗ್ ಗ್ರಾಮದ ಬಳಿ ಗುಡ್ಡ ಪ್ರದೇಶದಲ್ಲಿರುವ ಈ ವಿಮಾನ ನಿಲ್ದಾಣವು 201 ಎಕರೆ ವಿಸ್ತೀರ್ಣ ಹೊಂದಿದೆ.
ಅಕ್ಟೋಬರ್ 4ರಿಂದ ಈ ನಿಲ್ದಾಣದಿಂದ ವಿಮಾನ ಸಂಚಾರ ವಿಧ್ಯುಕ್ತವಾಗಿ ಪ್ರಾರಂಭವಾಗಲಿದೆ.
4 ವರ್ಷದಲ್ಲಿ 35 ವಿಮಾನ ನಿಲ್ದಾಣ
ದೇಶದಲ್ಲಿ 2014ರವರೆಗೆ ಕೇವಲ 65 ವಿಮಾನ ನಿಲ್ದಾಣಗಳಿದ್ದವು. ಕಳೆದ ನಾಲ್ಕು ವರ್ಷಗಳಲ್ಲಿ ಹೊಸದಾಗಿ 35 ವಿಮಾನ ನಿಲ್ದಾಣ ನಿರ್ಮಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಕಳೆದ 70 ವರ್ಷಗಳಲ್ಲಿ ಕೇವಲ 400 ವಿಮಾನಗಳಿದ್ದರೆ, ಕಳೆದ ಒಂದು ವರ್ಷದಲ್ಲಿ 1,000 ವಿಮಾನಗಳ ಖರೀದಿಗೆ ವಿವಿಧ ವಿಮಾನಯಾನ ಸಂಸ್ಥೆಗಳು ಮುಂದಾಗಿವೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
*
ಸಾಮಾನ್ಯ ಜನರು ಸಹ ವಿಮಾನದಲ್ಲಿ ಪ್ರಯಾಣಿಸಬೇಕು ಎಂಬುವುದು ನಮ್ಮ ಉದ್ದೇಶ.
–ನರೇಂದ್ರ ಮೋದಿ, ಪ್ರಧಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.