ADVERTISEMENT

ಡಿಸ್ಲೆಕ್ಸಿಯಾ ಬಗ್ಗೆ ಜೋಕ್ ಮಾಡಿದ ಪ್ರಧಾನಿ ನರೇಂದ್ರ ಮೋದಿ; ವಿಪಕ್ಷಗಳಿಂದ ಟೀಕೆ

ಪಿಟಿಐ
Published 4 ಮಾರ್ಚ್ 2019, 10:44 IST
Last Updated 4 ಮಾರ್ಚ್ 2019, 10:44 IST
   

ನವದೆಹಲಿ: ಮಾರ್ಚ್ 2ರಂದು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‍ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಡಿಸ್ಲೆಕ್ಸಿಯಾ (ಕಲಿಕೆಯಲ್ಲಿ ತೊಂದರೆ ಉಂಟುಮಾಡುವ ಕಾಯಿಲೆ) ತಮಾಷೆ ಮಾಡಿದ್ದಾರೆ.

ಹ್ಯಾಕಥಾನ್‍ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ತನ್ನ ಪ್ರಾಜೆಕ್ಟ್ ಬಗ್ಗೆ ಮಾತನಾಡಿ ಡಿಸ್ಲೆಕ್ಸಿಯಾ ಇರುವ ಮಕ್ಕಳಿಗೆ ಇದು ಹೇಗೆ ಸಹಾಯವಾಗುತ್ತದೆ ಎಂದು ವಿವರಿಸಿದ್ದಳು.ಡಿಸ್ಲೆಕ್ಸಿಯಾ ಬಾಧಿತ ಮಕ್ಕಳು ಅಂದರೆ ತಾರೇ ಜಮೀನ್ ಪರ್ ಸಿನಿಮಾದಲ್ಲಿರುವ ಇಶಾನ್ ಎಂಬ ಬಾಲಕನಂತೆ ಎಂದು ಆಕೆ ಉದಾಹರಣೆ ನೀಡಿದ್ದಳು. ಆಕೆ ಪ್ರಾಜೆಕ್ಟ್ ಬಗ್ಗೆ ಮಾತನಾಡುತ್ತಿದ್ದಂತೆ ಮಧ್ಯೆ ಮಾತನಾಡಿದ ಪ್ರಧಾನಿ ಮೋದಿ 40 ವರ್ಷದ ಮಕ್ಕಳಿಗೂ ಇದು ಸಹಾಯವಾಗುತ್ತದೆಯೇ?ಎಂದು ಕೇಳಿದ್ದರು. ಇಲ್ಲಿ ಮೋದಿ 40 ವರ್ಷದ ಮಕ್ಕಳು ಎಂದು ಹೇಳಿದ್ದು ರಾಹುಲ್ ಗಾಂಧಿ ಬಗ್ಗೆಯೇ ಆಗಿತ್ತು.ಇಷ್ಟು ಹೇಳಿ ಮೋದಿ ನಗತೊಡಗಿದರೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳೂ ನಗತೊಡಗಿದರು.

ಇದರ ಮಧ್ಯೆಯೇ ಆ ವಿದ್ಯಾರ್ಥಿನಿ ಯೆಸ್ ಎಂದು ಉತ್ತರಿಸಿದಾಗ, ಹಾಗಾದರೆ ಅಂಥಾ ಮಕ್ಕಳ ಅಮ್ಮನಿಗೆ ತುಂಬಾ ಖುಷಿಯಾಗುತ್ತದೆ ಎಂದು ಹೇಳಿ ಮೋದಿ ಮತ್ತೆ ನಗು ಮುಂದುವರಿಸಿದ್ದರು.

ADVERTISEMENT

ಡಿಸ್ಲೆಕ್ಸಿಯಾ ಮತ್ತು ಡಿಸ್ಲೆಕ್ಸಿಯಾ ಹೊಂದಿರುವ ಮಕ್ಕಳ ಬಗ್ಗೆ ಮೋದಿ ಈ ರೀತಿ ತಮಾಷೆ ಮಾಡಿದ್ದಕ್ಕೆ ಕಾಂಗ್ರೆಸ್ ಮತ್ತು ವಿಪಕ್ಷಗಳು ಮೋದಿಯವರನ್ನು ಟೀಕಿಸಿವೆ.

ರಾಜಕೀಯ ಲಾಭಕ್ಕಾಗಿ ಮೋದಿ ರಾಹುಲ್ ಗಾಂಧಿಯನ್ನು ಲೇವಡಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಕಿಡಿ ಕಾರಿದ್ದಾರೆ.

2013ರ ವರದಿ ಪ್ರಕಾರ ಭಾರತದ ಶಾಲೆಗಳಲ್ಲಿ 228,994,454 ಡಿಸ್ಲೆಕ್ಸಿಯಾ ಮಕ್ಕಳು ಇದ್ದಾರೆ. ಶೇ.15 ಡಿಸ್ಲೆಕ್ಸಿಯಾ ಪ್ರಕರಣಗಳು ಭಾರತದಲ್ಲಿವೆ. ಮೋದಿ ತಮ್ಮ ರಾಜಕೀಯ ಲಾಭಕ್ಕಾಗಿ ಈ ರೀತಿ ಅರಿವು ಇರದ ಮಾತುಗಳನ್ನಾಡಲು ಹಿಂಜರಿಯುವುದಿಲ್ಲ ಎಂದು ಪ್ರಿಯಾಂಕಾ ಟ್ವೀಟಿಸಿದ್ದಾರೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡಾ ಮೋದಿ ಮಾತುಗಳನ್ನು ಟೀಕಿಸಿ ಟ್ವೀಟ್ ಮಾಡಿದ್ದಾರೆ.

ಡಿಸ್ಲೆಕ್ಸಿಯಾ ಬಗ್ಗೆ ನಗೆಯಾಡಿದ ಮೋದಿಯವರ ವಿಡಿಯೊ ನೋಡಿದೆ.ಅವರಿಗೆ ನಾಚಿಕೆಯಾಗಬೇಕು, ಇದಕ್ಕಿಂತ ಕೆಳಗಿನ ಮಟ್ಟಕ್ಕೆ ನೀವು ಇಳಿಯಲು ಸಾಧ್ಯವಿಲ್ಲ.ಯಾವುದೇ ನದಿಯಲ್ಲಿ ಮುಳುಗೆದ್ದರೂ ನಿಮ್ಮ ಅಸೂಕ್ಷ್ಮ ಮಾತುಗಳು ತೊಳೆದು ಹೋಗುವುದಿಲ್ಲ.ಅಂಥವರು ನಿಧಾನವಾಗಿ ಕಲಿಯುತ್ತಾರೆ, ಆದರೆ ನಿಮ್ಮಂತೆ ಹೃದಯಹೀನರಲ್ಲ.

ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡಾ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ.

ಇದೇನಾ ನಿಮ್ಮ ಸಂಸ್ಕಾರ? - ಸೀತಾರಾಂ ಯೆಚೂರಿ


ನೆಟಿಜನ್‍ಗಳ ಆಕ್ರೋಶ
ಮೋದಿ ಡಿಸ್ಲೆಕ್ಸಿಯಾ ಮಕ್ಕಳ ಬಗ್ಗೆ ತಮಾಷೆ ಮಾಡಿದ್ದಕ್ಕೆ ನೆಟಿಜನ್‍ಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.