ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುಣ್ಯ ಸ್ಮರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಆಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.
‘ಪೂಜ್ಯ ಬಾಪು ಅವರಿಗೆ ಅವರ ಪುಣ್ಯ ತಿಥಿಯಂದು ನಮನಗಳು. ಅವರ ಆದರ್ಶಗಳು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ನಮ್ಮನ್ನು ಪ್ರೇರೇಪಿಸುತ್ತವೆ. ನಾನು ನಮ್ಮ ರಾಷ್ಟ್ರಕ್ಕಾಗಿ ಹುತಾತ್ಮರಾದ ಎಲ್ಲರಿಗೂ ಗೌರವ ನಮನ ಸಲ್ಲಿಸುತ್ತೇನೆ. ಅವರ ಸೇವೆ ಮತ್ತು ತ್ಯಾಗವನ್ನು ಸ್ಮರಿಸುತ್ತೇನೆ’ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ನೀವು ನನಗೆ ಮಾಡಬಹುದಾದ ದೊಡ್ಡ ಸಹಾಯವೆಂದರೆ, ನಿಮ್ಮ ಹೃದಯದಿಂದ ಭಯವನ್ನು ಹೊರಹಾಕುವುದು’ಎಂದು ಮಹಾತ್ಮ ಗಾಂಧಿ ಹೇಳಿದ್ದರು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಹುತಾತ್ಮರ ದಿನವಾದ ಇಂದು ನಾವು ಬಾಪು ಅವರಿಗೆ ನಮ್ಮ ಗೌರವವನ್ನು ಸಲ್ಲಿಸುತ್ತೇವೆ. ಅವರು ನಮ್ಮ ರಾಷ್ಟ್ರದ ಮಾರ್ಗದರ್ಶಕ ಬೆಳಕು ಎಂದೂ ಬರೆದುಕೊಂಡಿದ್ದಾರೆ. ಅವರ ಸತ್ಯ, ಅಹಿಂಸೆ, ಸರ್ವೋದಯ ಮತ್ತು ಸರ್ವಧರ್ಮದ ವಿಚಾರಗಳು ನಮ್ಮ ಹಾದಿಯನ್ನು ಬೆಳಗಿಸುತ್ತಲೇ ಇರುತ್ತವೆ. ಎಲ್ಲರಿಗೂ ಸಮಾನತೆ ಮತ್ತು ಉನ್ನತವಾದ ಅವರ ಆದರ್ಶಗಳನ್ನು ನಾಶಮಾಡಲು ಬಯಸುವವರ ವಿರುದ್ಧ ಹೋರಾಡಲು ನಾವು ಬದ್ಧರಾಗಿರಬೇಕು. ವೈವಿಧ್ಯತೆಯಲ್ಲಿ ಭಾರತದ ಏಕತೆಯನ್ನು ರಕ್ಷಿಸೋಣ ಮತ್ತು ಎಲ್ಲರಿಗೂ ನ್ಯಾಯ ಮತ್ತು ಸಮಾನತೆಯನ್ನು ಖಾತರಿಪಡಿಸೋಣ ಎಂದಿದ್ದಾರೆ.
ಸತ್ಯ ಮತ್ತು ಅಹಿಂಸೆಯ ಆರಾಧಕ, ಭಾರತೀಯ ಸ್ವಾತಂತ್ರ್ಯ ಚಳವಳಿಯ ಮಹಾನ್ ನಾಯಕ, 'ರಾಷ್ಟ್ರಪಿತ' ಮಹಾತ್ಮ ಗಾಂಧೀಜಿ ಅವರಿಗೆ ಅವರ ಪುಣ್ಯತಿಥಿಯಂದು ನನ್ನ ಹೃತ್ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಸ್ವದೇಶಿ ಮತ್ತು ಸ್ವಾವಲಂಬನೆಯನ್ನು ಕೇಂದ್ರೀಕರಿಸಿದ ಬಾಪು ಅವರ ಆಲೋಚನೆಗಳು ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದಿದ ಭಾರತಕ್ಕೆ ದಾರಿ ಮಾಡಿಕೊಡುತ್ತಿವೆ. ಅವರ ಜೀವನದ ಆದರ್ಶಗಳು ಸದಾ ಇಡೀ ಮಾನವಕುಲಕ್ಕೆ ಸ್ಫೂರ್ತಿ ನೀಡುತ್ತವೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.