ವಾರಾಣಸಿ: ವಾರಾಣಸಿಯಲ್ಲಿ ₹2,183 ಕೋಟಿ ವೆಚ್ಚದ 52 ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನೆರವೇರಿಸಿದ್ದಾರೆ.
ವಾರಾಣಸಿ ಸಮೀಪದ ಸೇವಾಪುರಿ ಬ್ಲಾಕ್‌ನಲ್ಲಿರುವ ಬನೌಲಿ ಗ್ರಾಮದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
‘ವಾರಾಣಸಿಯ ಎಲ್ಲಾ ಕುಟುಂಬಗಳಿಗೂ ನನ್ನ ನಮಸ್ಕಾರಗಳು..’ ಎಂದು ಪ್ರಧಾನಿ ಮೋದಿ ಅವರು ಭಾಷಣ ಆರಂಭಿಸಿದ್ದಾರೆ.
ರಸ್ತೆ ನಿರ್ಮಾಣ, ಆರೋಗ್ಯ, ಶಿಕ್ಷಣ, ಕ್ರೀಡೆ, ಪ್ರವಾಸೋದ್ಯಮ ಹಾಗೂ ನಗರಾಭಿವೃದ್ದಿ ಸೇರಿದಂತೆ 52 ಅಭಿವೃದ್ದಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ಇದೇ ವೇಳೆ ರೈತರಿಗೆ ಆರ್ಥಿಕವಾಗಿ ಸಹಾಯ ಮಾಡುವ ಉದ್ದೇಶದಿಂದ ₹20,500 ಕೋಟಿ ವೆಚ್ಚದಲ್ಲಿ ದೇಶದಾದ್ಯಂತವಿರುವ 9.70 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಪಿಎಂ–ಕಿಸಾನ್ ಸಮ್ಮಾನ್ ನಿಧಿಯ 20ನೇ ಕಂತನ್ನು ಪಾವತಿಸಲಾಯಿತು.
ಕಾರ್ಯಕ್ರಮದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಡಿಸಿಎಂ ಕೇಶವ್ ಪ್ರಸಾದ್, ಬ್ರಜೇಶ್ ಪಾಠಕ್, ಸಚಿವರು ಹಾಗೂ ಶಾಸಕರು ಉಪಸ್ಥಿತರಿದ್ದರು.
ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಇದುವರೆಗೂ ವಾರಾಣಸಿ ಕ್ಷೇತ್ರಕ್ಕೆ 51 ಸಲ ಭೇಟಿ ನೀಡಿದ್ದಾರೆ ಎಂದು ಬಿಜೆಪಿ ಕಾಶಿ ಘಟಕದ ಮುಖ್ಯಸ್ಥ ದಿಲೀಪ್ ಪಾಟೀಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.