ADVERTISEMENT

70ನೇ ವಸಂತಕ್ಕೆ ಕಾಲಿಟ್ಟ ಮೋದಿ: ಅಭಿಮಾನಿಗಳು, ಗಣ್ಯರಿಂದ ಶುಭಾಶಯಗಳ ಮಹಾಪೂರ

ಪಿಟಿಐ
Published 17 ಸೆಪ್ಟೆಂಬರ್ 2020, 7:56 IST
Last Updated 17 ಸೆಪ್ಟೆಂಬರ್ 2020, 7:56 IST
ಮೋದಿ ಜನ್ಮದಿನದ ಪ್ರಯುಕ್ತ ನವದೆಹಲಿಯಲ್ಲಿ ಹಿಂದೂ ಸೇನಾ ಕಾರ್ಯಕರ್ತರು ಕೇಕ್‌ ಕತ್ತರಿಸಿ ಸಂಭ್ರಮಿಸಿದರು–ಪಿಟಿಐ ಚಿತ್ರ 
ಮೋದಿ ಜನ್ಮದಿನದ ಪ್ರಯುಕ್ತ ನವದೆಹಲಿಯಲ್ಲಿ ಹಿಂದೂ ಸೇನಾ ಕಾರ್ಯಕರ್ತರು ಕೇಕ್‌ ಕತ್ತರಿಸಿ ಸಂಭ್ರಮಿಸಿದರು–ಪಿಟಿಐ ಚಿತ್ರ    
""

ನವದೆಹಲಿ/ಮಾಸ್ಕೊ/ಕಠ್ಮಂಡು/ಬರ್ಲಿನ್‌: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುರುವಾರ 70ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ರಾಷ್ಟ್ರಪತಿ, ಉಪರಾಷ್ಟ್ರಪತಿ, ಕೇಂದ್ರದ ಸಚಿವರು ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಮೋದಿ ಅವರಿಗೆ ಶುಭ ಹಾರೈಸಿದ್ದಾರೆ.

ADVERTISEMENT

ಮೋದಿ ಹುಟ್ಟುಹಬ್ಬವನ್ನು ‘ಸೇವಾ ದಿವಸ’ವನ್ನಾಗಿ ಆಚರಿಸುವ ಮೂಲಕ ಬಿಜೆಪಿ ಸಂಭ್ರಮಿಸಿದೆ.

‘ಜನ್ಮದಿನ ಆಚರಿಸಿಕೊಳ್ಳುತ್ತಿರುವ ಪ್ರಧಾನಿ ಮೋದಿಜಿ, ನಿಮಗೆ ಅಭಿನಂದನೆ ಹಾಗೂ ಶುಭಾಶಯಗಳು. ಜೀವನ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ನೀವು ತೋರಿರುವ ಬದ್ಧತೆಯು ಎಲ್ಲರಿಗೂ ಆದರ್ಶವಾಗಿದೆ’ ಎಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಹೇಳಿದ್ದಾರೆ.

‘ಮೋದಿ ಅವರ ಅವಿರತ ಶ್ರಮದಿಂದಾಗಿ ದೇಶದ ಕೀರ್ತಿಯು ಮತ್ತಷ್ಟು ಉತ್ತುಂಗಕ್ಕೇರಿದೆ. ಅವರ ಅತ್ಯುತ್ತಮ ಕೆಲಸಗಳಿಂದಾಗಿ ಭಾರತವು ಸ್ವಾವಲಂಬಿಯಾಗಿ ಬೆಳೆಯುವ ಹಾದಿಯಲ್ಲಿ ಮುಂದಡಿ ಇಟ್ಟಿದೆ. ದೇಶದ ಕಲ್ಯಾಣಕ್ಕಾಗಿ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದು ಇದು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ’ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ನುಡಿದಿದ್ದಾರೆ.

ಕಲಾವಿದ ಸುದರ್ಶನ್‌ ಪಟ್ನಾಯಕ್‌ ಅವರು ಮರಳು ಕಲೆಯ ಮೂಲಕ ಪ್ರಧಾನಿ ಮೋದಿಗೆ ಶುಭಕೋರಿರುವುದು

‘ಬಲಿಷ್ಠ ಭಾರತವನ್ನು ಕಟ್ಟುವುದಕ್ಕಾಗಿ ಮೋದಿ ಅವರು ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ಅವರ ನಾಯಕತ್ವದಲ್ಲಿ ಭಾರತವು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ವಿಶ್ವಮಟ್ಟದಲ್ಲಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡಿದೆ. ಪಕ್ಷದ ಕಾರ್ಯಕರ್ತರಿಗೆ ಅವರು ಸ್ಫೂರ್ತಿಯ ಸೆಲೆಯಾಗಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಟ್ವೀಟ್‌ ಮಾಡಿದ್ದಾರೆ.

‘ಮೋದಿ ಎಲ್ಲರ‍ಪ್ರೀತಿ ಪಾತ್ರರಾಗಿದ್ದಾರೆ. ಸ್ವಾವಲಂಬಿ ಹಾಗೂ ಬಲಿಷ್ಠ ಭಾರತ ಕಟ್ಟಲು ಅವರು ಅಡಿಗಲ್ಲು ಹಾಕಿದ್ದಾರೆ. ಶೋಷಿತ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಶ್ರಮಿಸಿದ್ದಾರೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಮೋದಿ ಅವರು ಬಡವರು ಹಾಗೂ ದಮನಿತರ ಕಲ್ಯಾಣಕ್ಕಾಗಿ ದುಡಿಯುತ್ತಿದ್ದಾರೆ. ಅವರಿಗೆ ಭಗವಂತ ಇನ್ನಷ್ಟು ಆರೋಗ್ಯ ಮತ್ತು ಆಯಸ್ಸು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ.

ಪುಟಿನ್‌, ಶರ್ಮಾ, ಏಂಜೆಲಾ ಶುಭ ಹಾರೈಕೆ: ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್, ನೇಪಾಳದ ಪ್ರಧಾನ ಮಂತ್ರಿ ಕೆ.ಪಿ.ಶರ್ಮಾ ಒಲಿ ಹಾಗೂ ಜರ್ಮನಿಯ ಚಾನ್ಸೆಲರ್‌ ಏಂಜೆಲಾ ಮರ್ಕೆಲ್‌ ಅವರೂ ಮೋದಿಗೆ ಶುಭ ಕೋರಿದ್ದಾರೆ.

‘ನಿಮ್ಮ ಜನ್ಮದಿನಕ್ಕೆ ಹೃದಯಪೂರ್ವಕವಾಗಿ ಹಾರೈಸುತ್ತಿದ್ದೇನೆ’ ಎಂದು ಪುಟಿನ್‌ ಅವರು ಮೋದಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

‘ಉಭಯ ದೇಶಗಳ ನಡುವಣ ವಿಶೇಷ ಹಾಗೂ ಕಾರ್ಯತಂತ್ರದ ಸಹಭಾಗಿತ್ವದಲ್ಲಿ ನಿಮ್ಮ ವೈಯಕ್ತಿಕ ಕಾಣಿಕೆಯು ಅಗಾಧವಾದುದ್ದು’ ಎಂದೂ ಪುಟಿನ್‌ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಪತ್ರವನ್ನು ನವದೆಹಲಿಯಲ್ಲಿರುವ ರಷ್ಯಾ ರಾಯಭಾರಿ ಕಚೇರಿಯ ವೆಬ್‌ಸೈಟ್‌ಗೆ ಅಪ್‌‌ಲೋಡ್‌ ಮಾಡಲಾಗಿದೆ.

‘ಹುಟ್ಟುಹಬ್ಬದ ಈ ಶುಭ ದಿನದಂದು ನಿಮಗೆ ಮನಃಪೂರ್ವಕ ಅಭಿನಂದನೆಗಳು. ನಿಮ್ಮ ಜೀವನವು ಆರೋಗ್ಯ ಮತ್ತು ಸಂತಸಮಯವಾಗಿರಲೆಂದು ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ. ಉಭಯ ದೇಶಗಳ ನಡುವಣ ಬಾಂಧವ್ಯವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನಾವು ಇನ್ನಷ್ಟು ಉತ್ತಮ ಕೆಲಸಗಳನ್ನು ಮಾಡೋಣ’ ಎಂದು ಒಲಿ ಅವರು ಟ್ವೀಟ್‌ ಮಾಡಿದ್ದಾರೆ.

‘ಜನ್ಮದಿನದ ಈ ಶುಭ ಸಂದರ್ಭದಲ್ಲಿ ನಿಮಗೆ ಹೃದಯಪೂರ್ವಕ ಅಭಿನಂದನೆಗಳು. ಭಾರತ ಮತ್ತು ಜರ್ಮನಿ ನಡುವಣ ಬಾಂಧವ್ಯ ಬಲಪಡಿಸುವ ನಿಟ್ಟಿನಲ್ಲಿ ಹಿಂದಿನ ಕೆಲ ವರ್ಷಗಳಿಂದ ನಾವು ಒಗ್ಗೂಡಿ ಕೆಲಸ ಮಾಡುತ್ತಿದ್ದು ಅದರಲ್ಲಿ ಯಶಸ್ಸನ್ನೂ ಕಂಡುಕೊಂಡಿದ್ದೇವೆ. ಈ ಸಹಕಾರ ಮತ್ತು ಬಾಂಧವ್ಯ ಹೀಗೆ ಮುಂದುವರಿಯಲಿ’ ಎಂದು ಮರ್ಕೆಲ್‌ ಅವರು ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.