ADVERTISEMENT

ಪಟೇಲರನ್ನು ನಿಮ್ಮ ದ್ವೇಷದ ರಾಜಕಾರಣಕ್ಕೆ ಬಳಸಿಕೊಳ್ಳುವುದು ನಿಲ್ಲಿಸಿ:ಕಾಂಗ್ರೆಸ್‌

ಪಿಟಿಐ
Published 29 ಮೇ 2025, 16:28 IST
Last Updated 29 ಮೇ 2025, 16:28 IST
ಪಟೇಲರು ಗೋಪಾಲಸ್ವಾಮಿ ಅವರಿಗೆ ಬರೆದಿದ್ದ ಪತ್ರ –ಪವನ್‌ ಖೇರಾ ‘ಎಕ್ಸ್‌’ನಲ್ಲಿ ಹಂಚಿಕೊಂಡಿರುವ ಚಿತ್ರ
ಪಟೇಲರು ಗೋಪಾಲಸ್ವಾಮಿ ಅವರಿಗೆ ಬರೆದಿದ್ದ ಪತ್ರ –ಪವನ್‌ ಖೇರಾ ‘ಎಕ್ಸ್‌’ನಲ್ಲಿ ಹಂಚಿಕೊಂಡಿರುವ ಚಿತ್ರ   

ನವದೆಹಲಿ: ‘ತಮ್ಮ ದ್ವೇಷದ ರಾಜಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರನ್ನು ತಪ್ಪಾಗಿ ಬಳಸಿಕೊಳ್ಳುತ್ತಿದ್ದಾರೆ ಮತ್ತು ಅವರನ್ನು ತಪ್ಪುತಪ್ಪಾಗಿ ಉಲ್ಲೇಖಿಸುತ್ತಿದ್ದಾರೆ. ಅವರು ಇದನ್ನು ನಿಲ್ಲಿಸಬೇಕು’ ಎಂದು ಕಾಂಗ್ರೆಸ್‌ ಗುರುವಾರ ಹೇಳಿದೆ.

ಕಾಶ್ಮೀರ ವಿಚಾರದ ಕುರಿತು ವಿಶ್ವಸಂಸ್ಥೆಗೆ ವಿಷಯಗಳನ್ನು ಮನದಟ್ಟು ಮಾಡಿಬಂದಿದ್ದ ಭಾರತದ ನಿಯೋಗದ ನೇತೃತ್ವವಹಿಸಿದ್ದ ಎನ್‌. ಗೋಪಾಲಸ್ವಾಮಿ ಅಯ್ಯಂಗಾರ್‌ ಅವರಿಗೆ ಪಟೇಲರು 1948ರಲ್ಲಿ ಬರೆದ ಪತ್ರವನ್ನು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ಅವರು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಗುಜರಾತ್‌ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು ಗಾಂಧಿನಗರದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ್ದರು. ‘1947ರಲ್ಲಿ ಭಾರತ ಮಾತೆಯನ್ನು ವಿಭಜನೆ ಮಾಡಲಾಯಿತು. ಸರಪಳಿಗಳನ್ನು ತುಂಡು ಮಾಡುವ ಬದಲು, ಕೈಗಳನ್ನು ತುಂಡು ಮಾಡಲಾಯಿತು. ದೇಶವು ಮೂರು ಭಾಗವಾಯಿತು. ಅದೇ ರಾತ್ರಿಯೇ ಕಾಶ್ಮೀರದಲ್ಲಿ ಮೊದಲ ಭಯೋತ್ಪಾದಕ ದಾಳಿ ನಡೆದಿತ್ತು’ ಎಂದಿದ್ದರು.

ADVERTISEMENT

‘ಮುಜಾಹಿದೀನ್‌ ಹೆಸರಿನಲ್ಲಿ ಭಯೋತ್ಪಾದಕರನ್ನು ಬಳಸಿಕೊಂಡು ಭಾರತದ ಒಂದು ಭಾಗವನ್ನು ಪಾಕಿಸ್ತಾನವು ತನ್ನ ವಶ ಮಾಡಿಕೊಂಡಿತು. ಅವತ್ತಿನ ದಿನವೇ ಈ ಮುಜಾಹಿದೀನ್‌ಗಳನ್ನು ಹತ್ಯೆ ಮಾಡಿದ್ದರೆ ಮತ್ತು ಪಿಒಕೆ ಅನ್ನು ವಾಪಸು ಪಡೆದುಕೊಳ್ಳುವವರೆಗೂ ನಮ್ಮ ಸೇನೆಯನ್ನು ತಡೆಯಬಾರದು ಎಂಬುದು ಪಟೇಲರ ಆಸೆಯಾಗಿತ್ತು. ಆದರೆ, ಪಟೇಲರ ಮಾತನ್ನು ಯಾರೂ ಕೇಳಿಸಿಕೊಳ್ಳಲಿಲ್ಲ. ಈಗ ಕಳೆದ 75 ವರ್ಷಗಳಿಂದ ನಾವು ಭಯೋತ್ಪಾದನೆಯನ್ನು ಅನುಭವಿಸುತ್ತಿದ್ದೇವೆ. ಪಹಲ್ಗಾಮ್‌ ದಾಳಿ ಕೂಡ ಇದರ ಮುಂದುವರಿದ ಭಾಗವೇ ಆಗಿದೆ’ ಎಂದಿದ್ದರು.

ಪತ್ರದಲ್ಲೇನಿದೆ?
‘ಸೇನಾ ನಿಯೋಜನೆಯು ಉತ್ತಮ ಸ್ಥಿತಿಯಲ್ಲೇನಿಲ್ಲ. ನಮ್ಮ ಸೇನಾ ಸಂಪನ್ಮೂಲಗಳು ಕ್ಷೀಣಿಸುತ್ತಿವೆ. ಇಂಥ ಸ್ಥಿತಿಯು ಎಷ್ಟು ದಿನಗಳ ವರೆಗೆ ಮುಂದುವರಿಯಬಹುದು ಎಂಬುದನ್ನು ಅಂದಾಜು ಮಾಡುವುದು ಕಷ್ಟವಾಗುತ್ತಿದೆ’ ಎಂದು ಪಟೇಲರು ಪತ್ರದಲ್ಲಿ ಬರೆದಿದ್ದರು.

ಖೇರಾ ಹೇಳಿದ್ದೇನು?

ಸತ್ಯ ತಿಳಿದುಕೊಳ್ಳುವ ಆಸಕ್ತಿ ಇರುವವರಿಗೆ ಪಿಒಕೆಗೆ ಸಂಬಂಧಿಸಿದ ಪಟೇಲರ ಎಚ್ಚರಿಕೆಯ ಮಾತುಗಳು ಅಂದಿನ ಸೇನಾ ಸ್ಥಿತಿಗತಿಗಳ ಕುರಿತು ವಾಸ್ತವಾಂಶವನ್ನು ತೆರೆದಿಡುತ್ತದೆ. ಸತ್ಯದ ಕುರಿತು ಅಂಥಾ ಆಸಕ್ತಿಯನ್ನೇನು ವಹಿಸದ ಪ್ರಧಾನಿ ಮೋದಿ ಅವರು ಪಟೇಲರನ್ನು ತಪ್ಪಾಗಿ ಉಲ್ಲೇಖಿಸುವುದನ್ನು ಬಿಡಬೇಕು. ಕಾಂಗ್ರೆಸ್‌ನ ನಾಯಕನನ್ನು ತಮ್ಮ ಪಕ್ಷದ ದ್ವೇಷದ ಮತ್ತು ವಿಭಜನಕಾರಿ ರಾಜಕಾರಣಕ್ಕಾಗಿ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು. ‘ಎಕ್ಸ್‌’ ವೇದಿಕೆಯಲ್ಲಿ ಪ್ರಧಾನಿಯೊಬ್ಬರ ಹೇಳಿಕೆಯನ್ನು ಫ್ಯಾಕ್ಟ್‌ಚೆಕ್‌ ಮಾಡಬೇಕಾಗಿ ಬಂದಿರುವುದು ನಾಚಿಕೆಗೇಡಿನ ಸಂಗತಿ

-ಪವನ್‌ ಖೇರಾ ಕಾಂಗ್ರೆಸ್‌ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.