ADVERTISEMENT

'ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ’ ಕುರಿತು ಮೋದಿ ಮಾತನಾಡಲು ಬಯಸಿದ್ದರು: ಜೋಶಿ

ಪಿಟಿಐ
Published 10 ಮಾರ್ಚ್ 2021, 11:41 IST
Last Updated 10 ಮಾರ್ಚ್ 2021, 11:41 IST
ಪ್ರಧಾನಿ ನರೇಂದ್ರ ಮೋದಿ (ಸಾಂದರ್ಭಿಕ ಚಿತ್ರ)
ಪ್ರಧಾನಿ ನರೇಂದ್ರ ಮೋದಿ (ಸಾಂದರ್ಭಿಕ ಚಿತ್ರ)   

ನವದೆಹಲಿ: ಭಾರತವು 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ‘ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ’ ಕುರಿತು (ಆಜಾದಿ ಕಾ ಅಮೃತಮಹೋತ್ಸವ) ಹೇಳಿಕೆ ನೀಡಲು ಬಯಸಿದ್ದರು. ಆದರೆ, ಸದನದಲ್ಲಿನ ಗದ್ದಲದಿಂದಾಗಿ ಸಾಧ್ಯವಾಗಲಿಲ್ಲ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಮಾರ್ಚ್ 12ರಿಂದ ಗುಜರಾತ್‌ನಿಂದ ‘ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ’ ಕಾರ್ಯಕ್ರಮಕ್ಕೆ ಮೋದಿ ಅವರು ಚಾಲನೆ ನೀಡಲಿದ್ದಾರೆ. ಅಲ್ಲದೇ, ಸಬರಮತಿ ಆಶ್ರಮದಿಂದ 21 ದಿನಗಳ ‘ದಂಡಿಯಾತ್ರೆ’ಯನ್ನೂ ಆರಂಭಿಸಲಿದ್ದಾರೆ.

‘ಸ್ಪೀಕರ್ ಅನುಮತಿ ನೀಡಿದ್ದರೂ, ಇತರರಿಂದ ಸಹಮತ ದೊರೆಯಲಿಲ್ಲ. ಹಾಗಾಗಿ, ಸದನದಲ್ಲಿ ಒಮ್ಮತ ದೊರೆತಾಗಲೇ ಮೋದಿ ಅವರು ಹೇಳಿಕೆ ನೀಡಲಿದ್ದಾರೆ’ ಎಂದು ಲೋಕಸಭೆಯಲ್ಲಿ ಜೋಶಿ ತಿಳಿಸಿದ್ದಾರೆ.

ADVERTISEMENT

ಇದಕ್ಕೂ ಮುನ್ನ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಎಲ್ಲ ಪಕ್ಷಗಳ ಮುಖಂಡರ ಸಭೆ ನಡೆಸಿದರು. ಕಾಂಗ್ರೆಸ್ ಹೊರತು ಪಡಿಸಿ, ಇತರ ಪಕ್ಷಗಳ ನಾಯಕರು ಸಭೆಯಲ್ಲಿ ಒಮ್ಮತ ವ್ಯಕ್ತಪಡಿಸಿದರು.

‘ಕಾಂಗ್ರೆಸ್ ಪಕ್ಷವು ತನ್ನ ತಂತ್ರಗಳನ್ನು ಮುಂದುವರಿಸಿತು. ಪ್ರಧಾನಿ ಅವರು ಹೇಳಿಕೆ ನೀಡಲು ಕೇವಲ ಐದು ನಿಮಿಷಗಳ ಕಾಲ ಅವಕಾಶಕ್ಕೆ ಕಾಂಗ್ರೆಸ್ ಅನ್ನು ಎರಡನೇ ಬಾರಿಗೆ ಕೋರಲಾಯಿತು. ಆದರೆ, ಕಾಂಗ್ರೆಸ್ ಇದಕ್ಕೆ ಅವಕಾಶ ನೀಡಲಿಲ್ಲ’ ಎಂದು ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.