ADVERTISEMENT

ಪರ‍್ರೀಕರ್‌ಗೆ ಶುಭಾಶಯ ಕೋರಿದ ಮೋದಿ

ಪಿಟಿಐ
Published 13 ಡಿಸೆಂಬರ್ 2018, 18:50 IST
Last Updated 13 ಡಿಸೆಂಬರ್ 2018, 18:50 IST
   

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್‌ ಪರ‍್ರೀಕರ್‌ ಅವರ 63ನೇ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

‘ಪರ‍್ರೀಕರ್‌ ಅವರ ಕಠಿಣ ಪರಿಶ್ರಮ ಹಾಗೂ ಗೋವಾದ ಅಭಿವೃದ್ಧಿ ಬಗ್ಗೆ ಅವರಿಗಿರುವ ಬದ್ಧತೆ ಅಭಿನಂದನೀಯ’ ಎಂದು ಮೋದಿ ಗುರುವಾರ ಟ್ವೀಟ್‌ ಮಾಡಿದ್ದಾರೆ.

ಎನ್‌ಕೌಂಟರ್‌ಗೆ ಇಬ್ಬರು ಉಗ್ರರು ಬಲಿ

ADVERTISEMENT

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ ಭದ್ರತಾ ಪಡೆಗಳ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಲಷ್ಕರ್ ಉಗ್ರರು ಹತರಾಗಿದ್ದಾರೆ.

ಸಪೋರ್‌ನ ಬ್ರಾತ್‌ ಕಲಾನ್‌ ಪ್ರದೇಶದಲ್ಲಿ ಉಗ್ರರು ಅವಿತಿರುವ ಮಾಹಿತಿ ಆಧರಿಸಿ ಯೋಧರು ಶೋಧ ಕಾರ್ಯ ನಡೆಸುತ್ತಿದ್ದಾಗ, ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಯೋಧರು ಪ್ರತಿದಾಳಿ ನಡೆಸಿ ಉಗ್ರರನ್ನು ಹೊಡೆದುರುಳಿಸಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ.

ವಿಚಾರಣೆಗೆ ಹಾಜರಾಗಲು ಪಳನಿಸ್ವಾಮಿಗೆ ಸೂಚನೆ

ಚೆನ್ನೈ: ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ಕುರಿತಂತೆ ವಿಚಾರಣೆಗಾಗಿ ಈ ತಿಂಗಳ 20ರಂದು ಹಾಜರಾಗುವಂತೆ ಉಪ ಮುಖ್ಯಮಂತ್ರಿ ಪಳನಿಸ್ವಾಮಿ ಅವರಿಗೆ ತನಿಖಾ ಆಯೋಗ ಸೂಚಿಸಿದೆ.

ಆನ್‌ಲೈನ್‌ ಔಷಧ ಮಾರಾಟಕ್ಕೆ ತಡೆ

ನವದೆಹಲಿ: ಆನ್‌ಲೈನ್‌ ಮೂಲಕ ಔಷಧ ಮಾರಾಟಕ್ಕೆ ದೆಹಲಿ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಆನ್‌ಲೈನ್‌ ಮೂಲಕ ಔಷಧ‌ಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಡಾ. ಜಹೀರ್‌ ಅಹಮದ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಾಜೇಂದ್ರ ಮೆನನ್‌ ಹಾಗೂ ವಿ.ಕೆ.ರಾವ್‌ ಅವರಿದ್ದ ಪೀಠವು ಈ ತಡೆಯಾಜ್ಞೆ ನೀಡಿದೆ.

ಕೇಂದ್ರ, ದೆಹಲಿ ಸರ್ಕಾರ, ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ, ಭಾರತೀಯ ಔಷಧ ಪರಿಷತ್‌ಗೆ ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ ಪೀಠವು ವಿಚಾರಣೆಯನ್ನು ಮಾರ್ಚ್‌ 25ಕ್ಕೆ ಮುಂದೂಡಿತು.

₹ 100ರ ನಾಣ್ಯದಲ್ಲಿ ಅಟಲ್‌ ಚಿತ್ರ

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಭಾವಚಿತ್ರವಿರುವ ₹ 100ರ ನಾಣ್ಯವನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಅಧಿಕೃತ ಹೇಳಿಕೆ ತಿಳಿಸಿರುವುದಾಗಿ ‘ಎನ್‌ಡಿಟಿವಿ’ ವರದಿ ಮಾಡಿದೆ.

ನಾಣ್ಯದ ಒಂದು ಬದಿ ವಾಜಪೇಯಿ ಅವರ ಭಾವಚಿತ್ರವಿದ್ದು ದೇವನಾಗರಿ ಲಿಪಿಯಲ್ಲಿ ಅವರ ಹೆಸರಿರುತ್ತದೆ. ಭಾವಚಿತ್ರದ ಕೆಳಗೆ ಇಸವಿ 1924– 2018 (ವಾಜಪೇಯಿ ಅವರು ಹುಟ್ಟಿದ ವರ್ಷ ಮತ್ತು ಮೃತಪಟ್ಟ ವರ್ಷ) ಎಂದು ಬರೆದಿರುತ್ತದೆ.

ಕರ್ತಾರಪುರ: ರಸ್ತೆ ನಿರ್ಮಿಸಲಿರುವ ಭಾರತ

ಸಿಖ್ಖರ ಪುಣ್ಯಕ್ಷೇತ್ರ ಕರ್ತಾರಪುರ ದರ್ಬಾರ್ ಸಾಹಿಬ್ ಗುರುದ್ವಾರದ ಕಾರಿಡಾರ್‌ಗಾಗಿ 4 ಕಿ.ಮೀ. ರಸ್ತೆಯನ್ನು ಭಾರತವೇ ನಿರ್ಮಿಸಲಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಸಂಸತ್ತಿನಲ್ಲಿ ತಿಳಿಸಿದೆ.

ಮೆಹುಲ್‌ ಚೋಕ್ಸಿ ವಿರುದ್ಧ ರೆಡ್‌ಕಾರ್ನರ್‌ ನೋಟಿಸ್‌

ನೀರವ್ ಮೋದಿ ಜತೆಗೂಡಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ₹13 ಸಾವಿರ ಕೋಟಿ ವಂಚಿಸಿ ಪರಾರಿಯಾಗಿರುವ ವಜ್ರಾಭರಣ ಉದ್ಯಮಿ ಮೆಹುಲ್ ಚೋಕ್ಸಿ ವಿರುದ್ಧ ಇಂಟರ್‌ಪೋಲ್ ರೆಡ್‌ಕಾರ್ನರ್ ನೋಟಿಸ್ ಹೊರಡಿಸಿದೆ ಎಂದು ಸಿಬಿಐ ಗುರುವಾರ ತಿಳಿಸಿದೆ.

ಜನವರಿ ತಿಂಗಳಿನಿಂದ ನಾಪತ್ತೆಯಾಗಿರುವ ಚೋಕ್ಸಿ, ಆಂಟಿಗುವಾ ದೇಶದ ಪೌರತ್ವ ಪಡೆದುಕೊಂಡಿದ್ದಾರೆ. ರಾಜಕೀಯ ಪಿತೂರಿಯಿಂದಸಿಬಿಐ ತನ್ನ ವಿರುದ್ಧ ಪ್ರಕರಣದಾಖಲಿಸಿದೆ ಎಂದು ಚೋಕ್ಸಿ ಆರೋಪಿಸಿದ್ದಾರೆ. ಭಾರತದಲ್ಲಿ ಜೈಲುಗಳ ಪರಿಸ್ಥಿತಿ, ತನ್ನ ಭದ್ರತೆ ಹಾಗೂ ಆರೋಗ್ಯದ ಬಗ್ಗೆ ಚೋಕ್ಸಿ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರೆಡ್‌ಕಾರ್ನರ್ ನೋಟಿಸ್ ಹೊರಡಿಸಿರುವ ಇಂಟರ್‌ಪೋಲ್, ಆರೋಪಿಯನ್ನು ಬಂಧಿಸುವಂತೆ ತನ್ನ ಸದಸ್ಯರಾಷ್ಟ್ರಗಳಿಗೆ ಮನವಿ ಮಾಡಿದೆ.ಪ್ರತ್ಯೇಕ ದೋಷಾರೋಪ ಪಟ್ಟಿ ಸಲ್ಲಿಸಿರುವ ಸಿಬಿಐ, ಚೋಕ್ಸಿ ₹7 ಸಾವಿರ ಕೋಟಿ ಹಾಗೂ ನೀರವ್ ಮೋದಿ ₹6 ಸಾವಿರ ಕೋಟಿ ವಂಚಿಸಿದ್ದಾರೆ ಎಂದು ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.