ADVERTISEMENT

ಚುನಾವಣಾ ಸುಧಾರಣೆ: ಆಯುಕ್ತರ ಜೊತೆಗೆ ಪಿಎಂಒ ಅಧಿಕಾರಿಗಳ ಅನೌಪಚಾರಿಕ ಸಭೆ

ಪಿಟಿಐ
Published 17 ಡಿಸೆಂಬರ್ 2021, 12:25 IST
Last Updated 17 ಡಿಸೆಂಬರ್ 2021, 12:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಚುನಾವಣೆ ಸುಧಾರಣಾ ಕ್ರಮಗಳಿಗೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರೆ ಆಯುಕ್ತರೊಂದಿಗೆ ಪ್ರಧಾನ ಮಂತ್ರಿಗಳ ಕಚೇರಿಯ (ಪಿಎಂಇ) ಹಿರಿಯ ಅಧಿಕಾರಿಗಳು ಅನೌಪಚಾರಿಕವಾಗಿ ಸಭೆ ನಡೆಸಿದ್ದಾರೆ.

ಸುಧಾರಣಾ ಕ್ರಮಗಳ ಕುರಿತಾಗಿ ಚುನಾವಣಾ ಆಯೋಗವು ಹಿಂದೆ ಬರೆದಿದ್ದ ಪತ್ರಗಳ ಹಿನ್ನೆಲೆಯಲ್ಲಿ ಈ ಸಭೆಯನ್ನು ಆಯೋಜಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಚುನಾವಣೆ ಸುಧಾರಣಾ ಸಂಬಂಧಿತ ಕ್ರಮಗಳನ್ನು ಆಯೋಗವು ಆಗಿಂದಾಗ್ಗೆ ಪ್ರಸ್ತಾಪಿಸುತ್ತಿದೆ. ಈ ಬಗ್ಗೆ ಕಾನೂನು ಸಚಿವಾಲಯ ಮತ್ತು ಆಯೋಗದ ಮಧ್ಯೆ ನವೆಂಬರ್ ತಿಂಗಳಲ್ಲಿ ವರ್ಚುಯಲ್ ರೂಪದಲ್ಲಿಯೂ ಸಭೆ ನಡೆದಿತ್ತು.

ADVERTISEMENT

ಅನೌಪಚಾರಿಕ ಸಭೆಯ ಪರಿಣಾಮ ಸುಧಾರಣೆ ಕುರಿತ ವಿವಿಧ ಅಂಶಗಳು ಬುಧವಾರದ ಸಂಪುಟ ಸಭೆಯಲ್ಲೂ ಪ್ರಸ್ತಾಪವಾಗಿವೆ. ಇದಕ್ಕೆ ಸಂಬಂಧಿಸಿದ ಮಸೂದೆ ಪ್ರಸಕ್ತ ಅಧಿವೇಶನದಲ್ಲೇ ಮಂಡನೆಯಾಗುವ ಸಂಭವವಿದೆ.

ಮತದಾರರ ಪಟ್ಟಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವುದು, ಮತದಾರರ ಪಟ್ಟಿಗೆ ಹೆಸರು ನೋಂದಣಿಗೆ ಅರ್ಹತಾ ದಿನವಾಗಿ ವರ್ಷದಲ್ಲಿ ನಾಲ್ಕು ದಿನವನ್ನು ನಿಗದಿಪಡಿಸುವುದು ಸೇರಿದೆ. ಪ್ರಸ್ತುತ, 18 ವರ್ಷ ಮೀರಿದವರು ಹೆಸರು ನೋಂದಣಿ ಮಾಡಲು ವಾರ್ಷಿಕ ಒಂದು ಬಾರಿ ಅವಕಾಶವಿದ್ದು, ಪ್ರತಿವರ್ಷ ಜನವರಿ 1 ಅರ್ಹತಾ ದಿನವಾಗಿದೆ.

‘ಆಯೋಗಕ್ಕೆ ಕಾನೂನು ಸಚಿವಾಲಯ ಈಚೆಗೆ ಪತ್ರ ಬರೆದಿದ್ದು, ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಮುಖ್ಯ ಚುನಾವಣಾ ಆಯುಕ್ತರು ಹಾಜರಿರಬೇಕು ಎಂದು ಸೂಚಿಸಲಾಗಿತ್ತು. ಆದರೆ. ಈ ಸಭೆಗೆ ಮೂವರೂ ಆಯುಕ್ತರು ಹಾಜರಾಗಿರಲಿಲ್ಲ’ ಎಂದು ಮೂಲಗಳು ವಿವರಿಸಿವೆ.

ಸಂಬಂಧಿತ ವರದಿ ಕುರಿತು ಪ್ರತಿಕ್ರಿಯೆಗಾಗಿ ಸಂಪರ್ಕಿಸಿದಾಗ, ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌.ವೈ.ಖುರೇಷಿ ಅವರು, ‘ಇದು ನಿಜಕ್ಕೂ ಆಘಾತಕಾರಿ’ ಎಂದು ಹೇಳಿದರು. ವಿವರವಾದ ಪ್ರತಿಕ್ರಿಯೆಯನ್ನು ಬಯಸಿದಾಗ, ‘ನನ್ನ ಈ ಮಾತುಗಳೇ ಎಲ್ಲವನ್ನು ಹೇಳುತ್ತವೆ’ ಎಂದೂ ಪ್ರತಿಕ್ರಿಯಿಸಿದರು.

ಚುನಾವಣಾ ಸುಧಾರಣಾ ಕ್ರಮಗಳು 25 ವರ್ಷದಿಂದ ನೆನೆಗುದಿಯಲ್ಲಿವೆ. ಹಿಂದೆಯೂ ಅಯೋಗವು ಮಾಜಿ ಕಾನೂನು ಸಚಿವ ರವಿಶಂಕರ ಪ್ರಸಾದ್, ಈಗಿನ ಕಾನೂನು ಸಚಿವ ಕಿರಣ್‌ ರಿಜಿಜು ಅವರಿಗೆ ಅನೇಕ ಪತ್ರಗಳನ್ನು ಬರೆದಿದೆ.

ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಶಿಷ್ಟಾಚಾರದಂತೆ ಆಯುಕ್ತರು ಸಚಿವರನ್ನು ಭೇಟಿ ಆಗುವುದಿಲ್ಲ. ಕಾನೂನು ಸಚಿವರು ಅಥವಾ ಸಚಿವಾಲಯದ ಕಾರ್ಯದರ್ಶಿಗಳೇ ಆಯೋಗದ ಕಚೇರಿಗೆ ತೆರಳಿ ಭೇಟಿ ಆಗುವರು.

ವದಂತಿ ನಿಜವಾಯಿತು: ಕಾಂಗ್ರೆಸ್‌ ಟೀಕೆ

‘ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ತನ್ನ ಅಧೀನ ಸಂಸ್ಥೆಯಾಗಿ ನೋಡುತ್ತಿದೆ. ಈ ಮೂಲಕ ಸಂಸ್ಥೆಗಳ ಆಶಯಕ್ಕೇ ಧಕ್ಕೆ ತರುವ ಮಟ್ಟಕ್ಕಿಳಿದಿದೆ‘ ಎಂದು ಕಾಂಗ್ರೆಸ್‌ ಪಕ್ಷ ಟೀಕಿಸಿದೆ.

ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಜೊತೆಗಿನ ಸಭೆಗೆ ಬರಬೇಕು ಚುನಾವಣಾ ಆಯುಕ್ತರಿಗೆ ಕಾನೂನು ಸಚಿವಾಲಯ ಪತ್ರ ಬರೆದಿದೆ ಎಂಬ ವರದಿ ಉಲ್ಲೇಖಿಸಿ ಪಕ್ಷದ ವಕ್ತಾರ ರಣದೀಪ್‌ ಸುರ್ಜೆವಾಲಾ ಪ್ರತಿಕ್ರಿಯಿಸಿದ್ದಾರೆ.

‘ಆಯೋಗವನ್ನು ಅಧೀನ ಸಂಸ್ಥೆಯಾಗಿ ಸರ್ಕಾರ ನೋಡುತ್ತಿದೆ ಎಂಬ ವದಂತಿ ನಿಜವಾಗಿದೆ. ಸಭೆಗೆ ಬರಲು ಪಿಎಂಒ ಕಚೇರಿ ಆಯುಕ್ತರಿಗೆ ಸೂಚಿಸಿರುವುದು ಸ್ವತಂತ್ರ ಭಾರತದಲ್ಲಿ ಇದೇ ಮೊದಲು’ ಎಂದೂ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.