ADVERTISEMENT

ಮಾಜಿ DGPಯಿಂದ ಸುಲಿಗೆ ಯತ್ನ :ರಾಜಕಾರಣಿ, ಇಬ್ಬರು ಪತ್ರಕರ್ತರು ಸೇರಿ ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2023, 12:47 IST
Last Updated 13 ಫೆಬ್ರುವರಿ 2023, 12:47 IST
.
.   

ಅಹಮದಾಬಾದ್‌: ನಿವೃತ್ತ ಡಿಜಿಪಿಯೊಬ್ಬರನ್ನು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸಲು ಬ್ಲಾಕ್‌ ಮೇಲ್ ಮಾಡಿ ₹ 8 ಕೋಟಿ ಸುಲಿಗೆ ಮಾಡಲು ಯತ್ನಿಸಿದ ಆರೋಪದ ಮೇಲೆ ಸ್ಥಳೀಯ ರಾಜಕಾರಣಿ ಮತ್ತು ಇಬ್ಬರು ಪತ್ರಕರ್ತರು ಸೇರಿದಂತೆ ಐವರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಸೋಮವಾರ ಬಂಧಿಸಿದೆ.

ಹಿರಿಯ ಪೊಲೀಸ್ ಅಧಿಕಾರಿ ಹೆಸರು ಉಲ್ಲೇಖಿಸಿ ಅತ್ಯಾಚಾರ ಸಂತ್ರಸ್ತೆ ಸಹಿ ಮಾಡಿದ ಅಫಿಡವಿಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಪ್ರಾರಂಭಿಸಿದ ವಾರದ ನಂತರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಹಣ ಸುಲಿಗೆ ಮಾಡಲು ಆರೋಪಿಗಳು ಅಧಿಕಾರಿಯ ಆಪ್ತರನ್ನು ಸಂಪರ್ಕಿಸಿದ್ದಾರೆ ಎಂದು ಎಟಿಎಸ್ ಮೂಲಗಳು ತಿಳಿಸಿವೆ.

ಇದೇ 9 ರಂದು ಪೊಲೀಸ್ ಮಹಾನಿರ್ದೇಶಕರು ಈ ಬಗ್ಗೆ ತನಿಖೆ ನಡೆಸುವಂತೆ ಎಟಿಎಸ್‌ಗೆ ಆದೇಶಿಸಿದ್ದರು.

ADVERTISEMENT

ಗಾಂಧಿನಗರ ನಿವಾಸಿ ಜಿ.ಕೆ.ಪ್ರಜಾಪತಿ ಅಲಿಯಾಸ್ ಜಿ.ಕೆ.ದಾದಾ, ಪ್ರಜಾಪತಿಯೊಂದಿಗೆ ನಿಕಟವರ್ತಿಗಳಾದ ಗಾಂಧಿನಗರ ನಿವಾಸಿ ಮಹೇಂದ್ರ ಪರ್ಮಾರ್ ಅಲಿಯಾಸ್ ರಾಜು ಜೆಮಿನಿ, ಸೂರತ್ ನಿವಾಸಿ ಹರ್ಷ್ ಜಾಧವ್ ಮತ್ತು ಗಾಂಧಿನಗರದ ನಿವಾಸಿಗಳಾದ ಅಶುತೋಷ್ ಪಾಂಡ್ಯ ಮತ್ತು ಕಾರ್ತಿಕ್ ಜಾನಿ ಎಂಬುವವರನ್ನು ಬಂಧಿಸಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ. ಪಾಂಡ್ಯ ಮತ್ತು ಜಾನಿ ಹವ್ಯಾಸಿ ಪತ್ರಕರ್ತರು ಎಂದು ವರದಿಯಾಗಿದೆ.

ಇತರ ನಾಲ್ವರು ಆರೋಪಿಗಳೊಂದಿಗೆ ಸೇರಿಕೊಂಡು ಪ್ರಜಾಪತಿ ಅವರು ಸಂತ್ರಸ್ತೆಯ ಅಫಿಡವಿಟ್‌ನಲ್ಲಿ ಮಾಜಿ ಡಿಜಿಪಿ ಹೆಸರನ್ನು ತಪ್ಪಾಗಿ ಸೇರಿಸಿದ್ದಾರೆ ಎಂದು ಎಟಿಎಸ್ ಹೇಳಿದೆ. ಹಣ ಕೊಡದಿದ್ದರೆ ಅಫಿಡವಿಟ್ ಅನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಸುಲಿಗೆ (ಐಪಿಸಿ 389) ಮತ್ತು ಕ್ರಿಮಿನಲ್ ಪಿತೂರಿ (ಐಪಿಸಿ 120 ಬಿ) ಗಾಗಿ ಆರೋಪಿಗಳ ವಿರುದ್ಧ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಎಟಿಎಸ್ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಜೋಶಿ ತಿಳಿಸಿದ್ದಾರೆ.

ಅತ್ಯಾಚಾರ ಸಂತ್ರಸ್ತೆಯ ಹೇಳಿಕೆ ಪಡೆಯಲಾಗಿದೆ ಎಂದು ಎಟಿಎಸ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.