ADVERTISEMENT

ನೀತಿ ಸಂಹಿತೆ ಉಲ್ಲಂಘಿಸಿದ ಅಸ್ಸಾಂ ಸಿಎಂ: ಚುನಾವಣಾ ಆಯೋಗದಿಂದ ಎಚ್ಚರಿಕೆ

ಪಿಟಿಐ
Published 27 ಅಕ್ಟೋಬರ್ 2021, 8:29 IST
Last Updated 27 ಅಕ್ಟೋಬರ್ 2021, 8:29 IST
ಅಸ್ಸಾಂನಲ್ಲಿ ನಡೆಯುತ್ತಿರುವ ಉಪ ಚುನಾವಣೆಯ ಪ್ರಚಾರದಲ್ಲಿ ತೊಡಗಿರುವ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ
ಅಸ್ಸಾಂನಲ್ಲಿ ನಡೆಯುತ್ತಿರುವ ಉಪ ಚುನಾವಣೆಯ ಪ್ರಚಾರದಲ್ಲಿ ತೊಡಗಿರುವ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ   

ನವದೆಹಲಿ: ಅಸ್ಸಾಂನ ಒಂದು ವಿಧಾನಸಭಾ ಕ್ಷೇತ್ರಕ್ಕೆ ಇದೇ 30ರಂದು ನಡೆಯಲಿರುವ ಉಪ ಚುನಾವಣೆಯ ಪ್ರಚಾರದ ವೇಳೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರುಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗವು ಅವರಿಗೆ ಎಚ್ಚರಿಕೆ ನೀಡಿ ಬಿಟ್ಟುಬಿಟ್ಟಿದೆ.

‘ಬಿಜೆಪಿಯ ತಾರಾ ಪ್ರಚಾರಕರಾದ ಶರ್ಮಾ ಅವರು ಮಾದರಿ ನೀತಿ ಸಂಹಿತೆಗೆ ಸಂಬಂಧಿಸಿದಂತೆ ತಾನು ನೀಡಿರುವ ಸಲಹೆ/ಸೂಚನೆಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ‘ ಎಂದು ಚುನಾವಣಾ ಆಯೋಗ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

‘ಇನ್ನು ಮುಂದೆ ಪ್ರಚಾರದ ವೇಳೆ ಸಾರ್ವಜನಿಕ ಹೇಳಿಕೆಗಳನ್ನು ನೀಡುವಾಗ ಮಾದರಿ ನೀತಿ ಸಂಹಿತೆಯ ನಿಬಂಧನೆ ಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಎಚ್ಚರಿಕೆ ನೀಡುವ ಜೊತೆಗೆ, ಜಾಗರೂಕರಾಗಿ ಮತ್ತು ಸಂಯಮದಿಂದ ವರ್ತಿಸಬೇಕು‘ ಎಂದು ಆದೇಶದಲ್ಲಿ ತಿಳಿಸಿದೆ.

ADVERTISEMENT

ಉಪ ಚುನಾವಣೆಯ ಪ್ರಚಾರದ ವೇಳೆ ಶರ್ಮಾ ಅವರು ರಸ್ತೆಗಳ ಅಭಿವೃದ್ಧಿ ಮತ್ತು ಇತರೆ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಭರವಸೆ ನೀಡುವ ಮೂಲಕ ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದರು. ಈ ಸಂಬಂಧ ಆಯೋಗ ಸೋಮವಾರ ಶರ್ಮಾ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.