ADVERTISEMENT

ಚುನಾವಣೋತ್ತರ ಹಿಂಸಾಚಾರ: ಪ.ಬಂಗಾಳ ಸರ್ಕಾರದ ಅರ್ಜಿ ವಿಚಾರಣೆ ಸೆ.20ಕ್ಕೆ- ಸುಪ್ರೀಂ

ಕೋಲ್ಕತ್ತ ಹೈಕೋರ್ಟ್ ಆದೇಶದ ವಿರುದ್ಧ ಅರ್ಜಿ ಸಲ್ಲಿಕೆ

ಪಿಟಿಐ
Published 13 ಸೆಪ್ಟೆಂಬರ್ 2021, 10:47 IST
Last Updated 13 ಸೆಪ್ಟೆಂಬರ್ 2021, 10:47 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಚುನಾವಣೋತ್ತರ ಹಿಂಸಾಚಾರ ಕುರಿತ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿರುವ ಕೋಲ್ಕತ್ತ ಹೈಕೋರ್ಟ್‌ನ ಆದೇಶದ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿರುವ ವಿಶೇಷ ಅರ್ಜಿಯನ್ನು ಸೆ. 20ರಂದು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಸೋಮವಾರ ಸುಪ್ರೀಂಕೋರ್ಟ್ ತಿಳಿಸಿದೆ.

ನ್ಯಾಯಮೂರ್ತಿಗಳಾದ ವಿನೀತ್ ಸರಣ್ ಹಾಗೂ ಅನಿರುದ್ಧ ಬೋಸ್ ಅವರನ್ನೊಳಗೊಂಡ ನ್ಯಾಯಪೀಠವು ಪಶ್ಚಿಮ ಬಂಗಾಳ ಸರ್ಕಾರವು ಸಲ್ಲಿಸಿದ ಚಾರ್ಟ್ ಅನ್ನು ಪರಿಶೀಲಿಸಿ ಅರ್ಜಿಯ ವಿಚಾರಣೆಯನ್ನು ಮುಂದೂಡಿದೆ.

ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಅತ್ಯಾಚಾರ ಮತ್ತು ಹಿಂಸಾಚಾರ ಪ್ರಕರಣವನ್ನು ತನಿಖೆ ಮಾಡಲು ರಚಿಸಲಾದ ಸಮಿತಿಯ ಸದಸ್ಯರನ್ನು ಉದ್ದೇಶಿಸಿ, ಮಾಹಿತಿಯನ್ನು ಸಂಗ್ರಹಿಸಲು ಈ ಸದಸ್ಯರನ್ನು ನೇಮಿಸಲಾಗಿದೆ ಎಂಬುದನ್ನು ಊಹಿಸಲು ಸಾಧ್ಯವೇ? ಇದು ಬಿಜೆಪಿ ತನಿಖಾ ಸಮಿತಿಯೇ? ಎಂದು ಪ್ರಶ್ನಿಸಿದರು.

ADVERTISEMENT

‘ಅತ್ಯಾಚಾರ ಮತ್ತು ಹತ್ಯೆಯಂಥ ಪ್ರಕರಣಗಳ ತನಿಖೆಗೆ ಸಿಬಿಐ ಇದೆ. ಅಂತೆಯೇ ಇತರ ಪ್ರಕರಣಗಳನ್ನು ವಿಶೇಷ ತನಿಖಾ ದಳವು (ಎಸ್‌ಐಟಿ) ತನಿಖೆ ನಡೆಸುತ್ತದೆ’ ಎಂದು ಹೇಳಿದರು.

ತನಿಖಾ ಸಮಿತಿಯ ಸದಸ್ಯರು ಇನ್ನೂ ಬಿಜೆಪಿಗೆ ಸಂಬಂಧಿಸಿದ ಪೋಸ್ಟ್‌ಗಳನ್ನೇ ಪೋಸ್ಟ್ ಮಾಡುತ್ತಿದ್ದಾರೆ. ಅಂಥವರನ್ನು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಸದಸ್ಯರನ್ನಾಗಿ ಹೇಗೆ ನೇಮಿಸಿಕೊಳ್ಳಲು ಸಾಧ್ಯ ಎಂದೂ ಪ್ರಶ್ನಿಸಿದ ಸಿಬಲ್ ಅವರು, ಮಧ್ಯಂತರ ಆದೇಶ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ನಂತರ ಅರ್ಜಿಯ ವಿಚಾರಣೆಯನ್ನು ಸೆ. 20ಕ್ಕೆ ನಡೆಸಲಾಗುವುದು ಎಂದು ನ್ಯಾಯಪೀಠವು ತಿಳಿಸಿತು.

ಚುನಾವಣೋತ್ತರ ಹಿಂಸಾಚಾರದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿರುವ ವಿರುದ್ಧ ವಿಶೇಷ ಅರ್ಜಿ ಸಲ್ಲಿಸಿರುವ ಪಶ್ಚಿಮ ಬಂಗಾಳ ಸರ್ಕಾರವು, ಬಿಜೆಪಿಯು ತೃಣಮೂಲ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಕರಣಗಳನ್ನು ದಾಖಲಿಸುವಲ್ಲಿ ನಿರತವಾಗಿದೆ. ಹಾಗಾಗಿ, ಅದರಿಂದ ನ್ಯಾಯಯುತವಾದ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದೆ.

ಚುನಾವಣೋತ್ತರ ಹಿಂಸಾಚಾರದ ಇತರ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸುವಂತೆ ಕೋಲ್ಕತ್ತ ಹೈಕೋರ್ಟ್ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.