ADVERTISEMENT

ಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲ: ವಾರಾಣಸಿಯಲ್ಲಿ ಪೋಸ್ಟರ್‌ಗಳು

ಪಿಟಿಐ
Published 8 ಜನವರಿ 2022, 6:53 IST
Last Updated 8 ಜನವರಿ 2022, 6:53 IST
ವಾರಣಸಿಯಲ್ಲಿ ಅಂಟಿಸಲಾಗಿರುವ ಪೋಸ್ಟರ್‌ಗಳು
ವಾರಣಸಿಯಲ್ಲಿ ಅಂಟಿಸಲಾಗಿರುವ ಪೋಸ್ಟರ್‌ಗಳು    

ವಾರಾಣಸಿ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ವಾರಾಣಸಿಯಲ್ಲಿ ಗಂಗಾ ನದಿಯ ಘಾಟ್‌ಗಳು ಮತ್ತು ನದಿಯ ಆಸುಪಾಸಿನಲ್ಲಿರುವ ದೇವಾಲಯಗಳಿಂದ ಹಿಂದೂಗಳಲ್ಲದವರು ದೂರವಿರಬೇಕು ಎಂದು ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬಲಪಂಥೀಯ ಸಂಘಟನೆಗಳು ಪೋಸ್ಟರ್‌ಗಳನ್ನು ಹಾಕಿರುವ ಸಾಧ್ಯತೆಗಳಿವೆ. ಅವುಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಕಾಶಿಯಲ್ಲಿ ಗಂಗಾ ನದಿಯ ಆಸುಪಾಸಿನ ಉದ್ದಕ್ಕೂ ಇರುವ ಘಾಟ್‌ಗಳು ಮತ್ತು ದೇವಾಲಯಗಳು ಸನಾತನ ಧರ್ಮ, ಭಾರತೀಯ ಸಂಸ್ಕೃತಿ, ನಂಬಿಕೆಯ ಸಂಕೇತಗಳಾಗಿವೆ. ಸನಾತನ ಧರ್ಮದಲ್ಲಿ ನಂಬಿಕೆ ಇರುವವರಿಗೆ ಸ್ವಾಗತ. ಇದು ಪಿಕ್ನಿಕ್ ಸ್ಪಾಟ್ ಅಲ್ಲ‘ ಎಂದು ಪೋಸ್ಟರ್‌ನಲ್ಲಿ ಹಿಂದಿಯಲ್ಲಿ ಬರೆಯಲಾಗಿದೆ.

ADVERTISEMENT

ಪೋಸ್ಟರ್‌ನಲ್ಲಿ ‘ಹಿಂದೂಯೇತರಿಗೆ ಪ್ರವೇಶ ನಿರ್ಬಂಧ’ ಎಂದು ಬರೆಯಲಾಗಿದೆ. ‘ಇದು ವಿನಂತಿಯಲ್ಲ, ಎಚ್ಚರಿಕೆ’ ಎಂದು ಕೊನೆಯಲ್ಲಿ ಹೇಳಲಾಗಿದೆ.

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಅದರ ಯುವ ಘಟಕ ಬಜರಂಗದಳದವರು ಹಾಕಿದ್ದಾರೆ ಎಂದು ಹೇಳಲಾದ ಪೋಸ್ಟರ್‌ಗಳ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿವೆ.

ವಾರಾಣಾಸಿ ಪೊಲೀಸರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸ್ಥಳೀಯ ಭೇಲುಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿದೆ. ವಿಡಿಯೊದಲ್ಲಿ ಮತ್ತು ಚಿತ್ರಗಳಲ್ಲಿ ಕಾಣಿಸಿಕೊಂಡಿರುವವರನ್ನು ಪತ್ತೆ ಮಾಡಲಾಗುತ್ತಿದೆ,’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಪೂರ್ವ ಉತ್ತರ ಪ್ರದೇಶದ ಧಾರ್ಮಿಕ ಕ್ಷೇತ್ರ ವಾರಾಣಸಿ ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.