ADVERTISEMENT

ಕೋವಿಡ್‌ ಲಸಿಕೆ: ಮುನ್ನೆಚ್ಚರಿಕೆ ಡೋಸ್‌ ನೀಡಿಕೆಗೆ ಚಾಲನೆ

ಖಾಸಗಿ ಆಸ್ಪತ್ರೆಗಳಲ್ಲಿ ನೀಡಿಕೆ * ಲಸಿಕೆ ದರದ ಜೊತೆ ಸೇವಾ ಶುಲ್ಕ ಗರಿಷ್ಠ ₹ 150 ಸಂಗ್ರಹಕ್ಕೆ ಅವಕಾಶ

ಪಿಟಿಐ
Published 10 ಏಪ್ರಿಲ್ 2022, 11:00 IST
Last Updated 10 ಏಪ್ರಿಲ್ 2022, 11:00 IST
ನವದೆಹಲಿಯ ಲಸಿಕಾ ಕೇಂದ್ರವೊಂದರಲ್ಲಿ ಯುವತಿಗೆ ಕೋವಿಡ್‌ ಲಸಿಕೆ ಕೋವ್ಯಾಕ್ಸಿನ್‌ನ ಮುನ್ನೆಚ್ಚರಿಕೆ ಡೋಸ್‌ಅನ್ನು ಭಾನುವಾರ ನೀಡಲಾಯಿತು. –ಪಿಟಿಐ ಚಿತ್ರ
ನವದೆಹಲಿಯ ಲಸಿಕಾ ಕೇಂದ್ರವೊಂದರಲ್ಲಿ ಯುವತಿಗೆ ಕೋವಿಡ್‌ ಲಸಿಕೆ ಕೋವ್ಯಾಕ್ಸಿನ್‌ನ ಮುನ್ನೆಚ್ಚರಿಕೆ ಡೋಸ್‌ಅನ್ನು ಭಾನುವಾರ ನೀಡಲಾಯಿತು. –ಪಿಟಿಐ ಚಿತ್ರ   

ನವದೆಹಲಿ: 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌ ಲಸಿಕೆಯ ಮುನ್ನೆಚ್ಚರಿಕೆ ಡೋಸ್‌ಅನ್ನು ಖಾಸಗಿ ಕೇಂದ್ರಗಳಲ್ಲಿ ನೀಡುವ ಕಾರ್ಯಕ್ರಮಕ್ಕೆ ದೇಶದಾದ್ಯಂತ ಭಾನುವಾರ ಚಾಲನೆ ನೀಡಲಾಯಿತು.

ಲಸಿಕೆಯ ಎರಡನೇ ಡೋಸ್‌ಅನ್ನು ಪಡೆದು 9 ತಿಂಗಳು ಅವಧಿ ಪೂರ್ಣಗೊಂಡವರಿಗೆ ಈ ಮುನ್ನೆಚ್ಚರಿಕೆ ಡೋಸ್‌ ನೀಡಲಾಗುತ್ತದೆ. ಈ ಡೋಸ್‌ ಪಡೆಯಲು ಹಣ ಪಾವತಿಸಬೇಕು.

ಲಸಿಕೆಯ ಮೂರನೇ ಡೋಸ್‌ನ ದರವಲ್ಲದೇ, ಸೇವಾ ಶುಲ್ಕವಾಗಿ ಗರಿಷ್ಠ ₹ 150 ವಿಧಿಸಬಹುದು ಎಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.

ADVERTISEMENT

‘ಮೊದಲ ಹಾಗೂ ಎರಡನೇ ಡೋಸ್‌ ಪಡೆದವರಿಗೆ ಅದೇ ಲಸಿಕೆಯ ಮೂರನೇ ಡೋಸ್‌ ನೀಡಲಾಗುವುದು. ಈ ಡೋಸ್ ಪಡೆಯುವ ಸಂಬಂಧ ಆನ್‌ಲೈನ್‌ ಮೂಲಕ ಅಥವಾ ನೇರವಾಗಿ ಲಸಿಕಾ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ರಾಜೇಶಭೂಷಣ್ ಹೇಳಿದ್ದಾರೆ.

ಕೋವಿಶೀಲ್ಡ್‌ನ ಉಚಿತ ವಯಲ್‌ ಪೂರೈಕೆ: ಎಸ್‌ಐಐ

ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಅವಧಿ ಮುಗಿಯದ ಲಸಿಕೆಯ ದಾಸ್ತಾನಿದ್ದರೆ, ಅದಕ್ಕೆ ಬದಲಾಗಿ ಉಚಿತವಾಗಿ ಲಸಿಕೆಯ ಹೊಸ ವಯಲ್‌ಗಳನ್ನು ಪೂರೈಕೆ ಮಾಡುವುದಾಗಿ ಕೇಂದ್ರ ಸರ್ಕಾರಕ್ಕೆ ಸೀರಂ ಇನ್ಟ್‌ಟಿಟ್ಯೂಟ್‌ ಆಫ್ ಇಂಡಿಯಾ (ಎಸ್‌ಐಐ) ತಿಳಿಸಿದೆ.

ಕೇಂದ್ರ ಸರ್ಕಾರ ಪ್ರತಿ ಮುನ್ನೆಚ್ಚರಿಕೆ ಡೋಸ್‌ನ ದರವನ್ನು ₹225 ಕ್ಕೆ ಇಳಿಕೆ ಮಾಡಿರುವ ಹಿನ್ನೆಲೆಯಲ್ಲಿ ದರದಲ್ಲಾಗುವ ವ್ಯತ್ಯಾಸವನ್ನು ಸರಿದೂಗಿಸಲು ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಸಂಸ್ಥೆ ತಿಳಿಸಿದೆ ಎಂದು ಮೂಲಗಳು ಹೇಳಿವೆ.

ಕಂಪನಿಯ ಈ ನಿರ್ಧಾರದ ಕುರಿತು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ತಿಳಿಸಿದ್ದಾಗಿ ಎಸ್‌ಐಐನ ನಿರ್ದೇಶಕ (ಸರ್ಕಾರ ಮತ್ತು ನಿಯಂತ್ರಣ ವ್ಯವಹಾರಗಳ ವಿಭಾಗ) ಪ್ರಕಾಶಕುಮಾರ್‌ ಸಿಂಗ್‌ ಭಾನುವಾರ ತಿಳಿಸಿದ್ದಾರೆ.

ಲಸಿಕೆಯ ದರದಲ್ಲಿನ ವ್ಯತ್ಯಾಸವನ್ನು ಸರಿದೂಗಿಸುವ ನಿಟ್ಟಿನಲ್ಲಿ ಹೆಚ್ಚುವರಿ ಡೋಸ್‌ಗಳನ್ನು ಪೂರೈಕೆ ಮಾಡುವುದಾಗಿ ಕೋವ್ಯಾಕ್ಸಿನ್ ಲಸಿಕೆ ತಯಾರಕ ಕಂಪನಿಯಾದ ಭಾರತ್ ಬಯೋಟೆಕ್‌ ಸಹ ತಿಳಿಸಿದೆ ಎಂದು ಸಚಿವಾಲಯದ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.