ADVERTISEMENT

ಚೀನಾದಿಂದ 6,000 ಆಮ್ಲಜನಕ ಸಿಲಿಂಡರ್ ಖರೀದಿಸಿದ ದೆಹಲಿ ಸಿಎಂ ಕೇಜ್ರಿವಾಲ್

ಪಿಟಿಐ
Published 24 ಮೇ 2021, 12:28 IST
Last Updated 24 ಮೇ 2021, 12:28 IST
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್   

ನವದೆಹಲಿ: ತಮ್ಮ ಸರ್ಕಾರವು ಚೀನಾದಿಂದ 6,000 ಆಮ್ಲಜನಕ ಸಿಲಿಂಡರ್‌ಗಳನ್ನು ಆಮದು ಮಾಡಿಕೊಂಡಿದ್ದು, ಇದನ್ನು ಮೂರು ಡಿಪೋಗಳಲ್ಲಿ ಸಂಗ್ರಹಿಸಲಾಗುವುದು. ಕೊರೊನಾ ಮೂರನೇ ಅಲೆಯ ಸಂದರ್ಭ ಈ ಆಕ್ಸಿಜನ್ ಬಳಸಲಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಎರಡನೇ ಅಲೆಯು ಕ್ರಮೇಣ ಕ್ಷೀಣಿಸುತ್ತಿದೆ. ಹೀಗಾಗಿ, ಮೂರನೇಅಲೆಗೆ ಸರ್ಕಾರ ಸಿದ್ಧತೆಗಳನ್ನು ಪ್ರಾರಂಭಿಸಿದೆ ಎಂದು ಕೇಜ್ರಿವಾಲ್ ಹೇಳಿದರು.

‘ಚೀನಾದಿಂದ ಸುಮಾರು 6,000 ಆಮ್ಲಜನಕ ಸಿಲಿಂಡರ್‌ಗಳನ್ನು ವಿಮಾನದಲ್ಲಿ ತರಿಸಲಾಗಿದೆ. ಅದರಲ್ಲಿ, ಈಗಾಗಲೇ 4,400 ಸಿಲಿಂಡರ್‌ಗಳು ಆಗಮಿಸಿವೆ. ಉಳಿದ 1,600 ಸಿಲಿಂಡರ್‌ಗಳು ಎರಡು ಮೂರು ದಿನಗಳಲ್ಲಿ ತಲುಪಲಿವೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಆಮ್ಲಜನಕ ಸಿಲಿಂಡರ್‌ಗಳನ್ನು ಆಮದು ಮಾಡಿಕೊಳ್ಳಲು ಸಹಕರಿಸಿದ ವಿದೇಶಾಂಗ ಸಚಿವಾಲಯ ಮತ್ತು ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಕೇಜ್ರಿವಾಲ್ ಅವರು ಧನ್ಯವಾದ ಹೇಳಿದ್ದಾರೆ.

ಸಿಲಿಂಡರ್‌ಗಳನ್ನು ಸಂಗ್ರಹಿಸಲು ದೆಹಲಿ ಸರ್ಕಾರ ಮೂರು ಡಿಪೋಗಳನ್ನು ರಚಿಸುತ್ತಿದೆ. ಈ ಸಿಲಿಂಡರ್‌ಗಳನ್ನು ಅಗತ್ಯವಿರುವ ಜನರಿಗೆ ನೀಡಬಹುದು ಮತ್ತು ಆಸ್ಪತ್ರೆಗಳಲ್ಲಿ ಹೆಚ್ಚುವರಿ ಆಮ್ಲಜನಕ ಹಾಸಿಗೆಗಳನ್ನು ರಚಿಸಲು ಬಳಸಬಹುದು ಎಂದು ಕೇಜ್ರಿವಾಲ್ ಹೇಳಿದರು.

‘ಒಂದೊಮ್ಮೆ ಕೋವಿಡ್-19ರ ಮೂರನೇ ಅಲೆ ಆರಂಭವಾದರೆ, ಈ 6,000 ಸಿಲಿಂಡರ್‌ಗಳನ್ನು 3,000 ಆಮ್ಲಜನಕ ಹಾಸಿಗೆಗಳನ್ನು ಸಿದ್ಧಪಡಿಸಲು ಬಳಸಿಕೊಳ್ಳಬಹುದು. ಬಹುಶಃ, ಸಾಂಕ್ರಾಮಿಕ ರೋಗವು ಆರಂಭವಾದಾಗಿನಿಂದ ಭಾರತಕ್ಕೆ ತರಲಾದ ಅತಿದೊಡ್ಡ ಆಮ್ಲಜನಕದ ಸರಕು ಇದಾಗಿದೆ’ಎಂದು ಅವರು ಹೇಳಿದರು.

ಎಚ್‌ಸಿಎಲ್ ಮತ್ತು ಗಿವ್ ಇಂಡಿಯಾ ಫೌಂಡೇಶನ್ ಈ ಉದ್ದೇಶಕ್ಕಾಗಿ ದೇಣಿಗೆ ನೀಡಿದೆ ಎಂದು ಅವರು ಹೇಳಿದರು.

‘ಇದಲ್ಲದೆ, ನಾವು ದೊಡ್ಡ ಪ್ರಮಾಣದಲ್ಲಿ ಆಮ್ಲಜನಕ ಸಾಂದ್ರಕಗಳನ್ನು ಖರೀದಿಸುತ್ತಿದ್ದೇವೆ. ಅಗತ್ಯವಿರುವ ಜನರಿಗೆ ಆಮ್ಲಜನಕ ಒದಗಿಸಲು ಎಲ್ಲಾ ಜಿಲ್ಲೆಗಳಲ್ಲಿ ಆಮ್ಲಜನಕ ಸಾಂದ್ರೀಕರಣ ಬ್ಯಾಂಕುಗಳನ್ನು ಸ್ಥಾಪಿಸಲಾಗಿದೆ. ಇದರ ಜೊತೆಗೆ, ಆಮ್ಲಜನಕ ಟ್ಯಾಂಕ್‌ಗಳನ್ನು ಖರೀದಿಸಲು ನಿರ್ಧರಿಸಿದ್ದೇವೆ. ಅದಕ್ಕಾಗಿ, ಆಮ್ಲಜನಕ ಸಂಗ್ರಹ ಸ್ಥಳವನ್ನು ರಚಿಸುತ್ತಿದ್ದೇವೆ’ಎಂದು ತಿಳಿಸಿದರು.

‘ಎರಡನೇ ಅಲೆಯ ಸಮಯದಲ್ಲಿ ನಾವು ಎದುರಿಸಿದ ಸಮಸ್ಯೆಗಳನ್ನು ಈಗ ಪರಿಹರಿಸಲಾಗುತ್ತಿದೆ’ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.