ADVERTISEMENT

ಬಾಹ್ಯಾಕಾಶದಲ್ಲಿ ಅವಶೇಷ: ರಾಷ್ಟ್ರಪತಿ ದ್ರೌಪದಿ ಮುರ್ಮು ಕಳವಳ

‘ರಾಷ್ಟ್ರೀಯ ಬಾಹ್ಯಾಕಾಶ ದಿನ’ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ

ಪಿಟಿಐ
Published 23 ಆಗಸ್ಟ್ 2024, 13:37 IST
Last Updated 23 ಆಗಸ್ಟ್ 2024, 13:37 IST
ನವದೆಹಲಿಯಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ವಿಜ್ಞಾನ ಹಾಗೂ ತಂತ್ರಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್‌, ಇಸ್ರೋ ಮುಖ್ಯಸ್ಥ ಎಸ್‌. ಸೋಮನಾಥ್‌ ಅವರು ಉಪಗ್ರಹಗಳ ಮಾದರಿಗಳನ್ನು ವೀಕ್ಷಿಸಿದರು– ಪಿಟಿಐ ಚಿತ್ರ
ನವದೆಹಲಿಯಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ವಿಜ್ಞಾನ ಹಾಗೂ ತಂತ್ರಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್‌, ಇಸ್ರೋ ಮುಖ್ಯಸ್ಥ ಎಸ್‌. ಸೋಮನಾಥ್‌ ಅವರು ಉಪಗ್ರಹಗಳ ಮಾದರಿಗಳನ್ನು ವೀಕ್ಷಿಸಿದರು– ಪಿಟಿಐ ಚಿತ್ರ   

ನವದೆಹಲಿ: ಭೂಕಕ್ಷೆಯಲ್ಲಿ ನಿಷ್ಕ್ರಿಯಗೊಂಡ ಉಪಗ್ರಹಗಳ ಅವಶೇಷಗಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, 2030ರ ವೇಳೆಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ತನ್ನ ಬಾಹ್ಯಾಕಾಶ ಯೋಜನೆಗಳನ್ನು ‘ಅವಶೇಷಮುಕ್ತ’ ಆಗಿಸುವ ಗುರಿ ಹೊಂದಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ಚಂದ್ರಯಾನ–3 ಯೋಜನೆ ಯಶಸ್ವಿಯಾದ ಮೊದಲ ವರ್ಷಾಚರಣೆ ಅಂಗವಾಗಿ ನವದೆಹಲಿಯ ಭಾರತ್‌ ಮಂಟಪ್‌ನಲ್ಲಿ ಹಮ್ಮಿಕೊಂಡಿದ್ದ ಚೊಚ್ಚಲ ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಾಹ್ಯಾಕಾಶದಲ್ಲಿರುವ ಅವಶೇಷಗಳು ಯೋಜನೆಗಳಿಗೆ ಹಿನ್ನಡೆ ಉಂಟುಮಾಡಿವೆ. 2030ರ ಒಳಗಾಗಿ ಭಾರತವು ಎಲ್ಲ ಬಾಹ್ಯಾಕಾಶ ಯೋಜನೆಗಳನ್ನು ‘ಅವಶೇಷಮುಕ್ತ’ಗೊಳಿಸಲು ಮುಂದಡಿ ಇಟ್ಟಿದೆ’ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ADVERTISEMENT

ಕಡಿಮೆ ಸಂಪನ್ಮೂಲದಲ್ಲಿ ವಿಶ್ವದಲ್ಲಿಯೇ ಅತ್ಯುತ್ತಮ ಬಾಹ್ಯಾಕಾಶ ಯೋಜನೆಗಳನ್ನು ಸಾಕಾರಗೊಳಿಸಿದ ಇಸ್ರೊ ವಿಜ್ಞಾನಿಗಳನ್ನು ಅಭಿನಂದಿಸಿದ ಅವರು, ‘ಇದರಿಂದ ದೇಶದ ಸಾಮಾಜಿಕ, ಆರ್ಥಿಕ ಬೆಳವಣಿಗೆಗೂ ಅಮೂಲ್ಯ ಕೊಡುಗೆಗಳನ್ನು ನೀಡಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಳೆದ ವರ್ಷ ಆಗಸ್ಟ್‌ 23ರಂದು ಚಂದ್ರಯಾನ–3ರ ಭಾಗವಾಗಿ ಕಳುಹಿಸಿದ್ದ ‘ವಿಕ್ರಮ ಲ್ಯಾಂಡರ್‌’ ಚಂದ್ರನ ಅಂಗಳಕ್ಕೆ ಇಳಿದಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವೆಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಗಿತ್ತು. ‌

ಕಾರ್ಯಕ್ರಮದಲ್ಲಿ ‘ಭಾರತೀಯ ಅಂತರಿಕ್ಷ ಹ್ಯಾಕಥಾನ್‌’ ಹಾಗೂ ‘ರೊಬೊಟಿಕ್ಸ್‌ ಚಾಲೆಂಜ್‌’ನಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಿಸಿದರು. ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌, ಎಂಜಿನಿಯರ್‌ಗಳು, ಇಸ್ರೊ ವಿಜ್ಞಾನಿಗಳು, ಬಾಹ್ಯಾಕಾಶ ಕೈಗಾರಿಕೆಗಳ ವಿವಿಧ ಪ್ರತಿನಿಧಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.