ನವದೆಹಲಿ: ವಿದೇಶಗಳಿಂದ ಬರುವವರ ಮೂಲಕ ಮತ್ತು ಸೂಕ್ತ ಮುನ್ನೆಚ್ಚರಿಕೆಯ ಸ್ವಚ್ಛತಾ ಕ್ರಮಗಳನ್ನು ಅನುಸರಿಸದೇ ಇರುವ ಕಾರಣದಿಂದಾಗಿ ಕೊರೊನಾ ವೈರಸ್ ಪಿಡುಗು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು, ಗುರುವಾರ ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಕೊರೊನಾ ವೈರಸ್ ಹರಡುತ್ತಿರುವ ಬಗ್ಗೆ ಮತ್ತು ಅದರ ತಡೆಗೆ ಕೈಗೊಂಡಿರುವ, ಮುಂದೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಪ್ರಧಾನಿ ಅವರು ದೇಶದ ಪ್ರಜೆಗಳಿಗೆ ವಿವರಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ. ಈ ಘೋಷಣೆ ಮಾಡಿದಂದಿನಿಂದ ದೇಶದಲ್ಲಿ ಕಾರ್ಯಾಚರಣೆ ಸಂಪೂರ್ಣ ಸ್ಥಗಿತ ಆಗಲಿದೆಯೇ ಎಂದು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚಿಸುತ್ತಿದ್ದಾರೆ.
ದೇಶಾದ್ಯಂತ ಕೊರೊನಾ ವೈರಸ್ ಹರಡುವಿಕೆ ಮತ್ತು ಕೋವಿಡ್-19 ಕಾಯಿಲೆ ಕಾಣಿಸಿಕೊಂಡಿರುವ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಸಂಜೆ ಉನ್ನತ ಮಟ್ಟದ ಸಭೆ ನಡೆಸಿದ್ದು, ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.
ಮುಂದೆ ಬರಬಹುದಾದ ಹೆಚ್ಚುವರಿ ಅಪಾಯಗಳಿಗೆ ಸಜ್ಜುಗೊಳಿಸುವಲ್ಲಿ ಭಾರತದ ಕಾರ್ಯಸಾಮರ್ಥ್ಯವನ್ನು ವೃದ್ಧಿಸುವ ಬಗ್ಗೆ ಚರ್ಚಿಸಲಾಯಿತು. ಪರೀಕ್ಷಾ ಸೌಕರ್ಯಗಳನ್ನು ಹೆಚ್ಚಳಗೊಳಿಸುವ ಕುರಿತಾಗಿಯೂ ಮಾತುಕತೆ ನಡೆದಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಹೇಳಿದೆ.
ವ್ಯಕ್ತಿಗತವಾಗಿ ಹಾಗೂ ಸ್ಥಳೀಯ ಸಮುದಾಯಗಳು ಮತ್ತು ಸಂಘಟನೆಗಳು ಕೊರೊನಾ ವೈರಸ್ ಪಿಡುಗಿನ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಸಕ್ರಿಯವಾದ ಮತ್ತು ಜವಾಬ್ದಾರಿಯುತವಾದ ಪಾತ್ರ ವಹಿಸಬೇಕಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
ಮುಂದೆ ಯಾವ ಕ್ರಮಗಳನ್ನು ಕೈಗೊಳ್ಳಬೇಕೆಂಬುದರ ಕುರಿತಾಗಿ ಅವರು ಅಧಿಕಾರಿಗಳು ಮತ್ತು ತಾಂತ್ರಿಕ ತಜ್ಞರಿಂದ ಮಾಹಿತಿ ಪಡೆದಿದ್ದಾರೆ.
ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಯಾವುದೇ ಪರಿಸ್ಥಿತಿಗೆ ಸಿದ್ಧರಾಗಬೇಕು ಮತ್ತು ಇದೇ ವೇಳೆ ಯಾವುದೇ ಕಾರಣಕ್ಕೂ ಆತಂಕ ಪಡಬೇಕಿಲ್ಲ ಎಂದು ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶ ನೀಡುತ್ತಲೇ ಇದ್ದಾರೆ.
ಕೊರೊನಾ ವೈರಸ್ ಎದುರಿಸುವ ನಿಟ್ಟಿನಲ್ಲಿ ಮುನ್ನೆಲೆಯಲ್ಲಿ ನಿಂತು ಸಹಕಾರ ನೀಡುತ್ತಿರುವ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ, ಅರೆಸೇನಾ ಪಡೆಗಳು ಮತ್ತು ವೈಮಾನಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರು, ನಗರಾಡಳಿತದ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರಾದಿಯಾಗಿ ಎಲ್ಲರಿಗೂ ಪ್ರಧಾನಿ ಅವರು ಧನ್ಯವಾದ ಹೇಳಿದ್ದಾರೆ.
ಇದಕ್ಕೆ ಮೊದಲು, ಪ್ರಧಾನಿ ಅವರು ಸಾರ್ಕ್ ರಾಷ್ಟ್ರಗಳ ನಾಯಕರ ಸಭೆ ಕರೆದು, ವಿಡಿಯೊ ಕಾನ್ಫರೆನ್ಸ್ ಮೂಲಕವಾಗಿ, ಎದುರಾಗಿರುವ ಜಾಗತಿಕ ಪಿಡುಗಿನ ವಿರುದ್ಧ ಜಂಟಿ ಹೋರಾಟಕ್ಕೆ ಸಜ್ಜಾಗಲು ವೇದಿಕೆ ಕಲ್ಪಿಸಿಕೊಟ್ಟಿದ್ದರು.
ಸರ್ಕಾರವು ಅಫ್ಘಾನಿಸ್ತಾನ, ಫಿಲಿಪ್ಪೀನ್ಸ್ ಮತ್ತು ಮಲೇಷ್ಯಾ ಹಾಗೂ ಐರೋಪ್ಯ ಒಕ್ಕೂಟದ ಟರ್ಕಿ ಹಾಗೂ ಯುನೈಟೆಡ್ ಕಿಂಗ್‌ಡಂನಿಂದ ಬರುವ ಪ್ರಯಾಣಿಕರಿಗೆ ನಿಷೇಧ ಹೇರಿದ್ದು, ಮಾರ್ಚ್ 31ರವರೆಗೆ ಅತ್ಯಂತ ಕಟ್ಟೆಚ್ಚರ ವಹಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದೆ. ಈಗಾಗಲೇ ಹಲವು ರಾಜ್ಯ ಸರ್ಕಾರಗಳು ಸಂಪೂರ್ಣ ವಹಿವಾಟು ಬಂದ್ ಘೋಷಿಸಿ, ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.