ADVERTISEMENT

ಖಾಸಗಿ ರೈಲು ಸೇವೆ: ಸಚಿವಾಲಯದ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 12:18 IST
Last Updated 9 ಜುಲೈ 2020, 12:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಪ್ರಯಾಣಿಕ ರೈಲುಗಳ ಖಾಸಗೀಕರಣಕ್ಕೆ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿರುವ ರೈಲ್ವೆ ಸಚಿವಾಲಯ,ಈಗಿರುವ ರೈಲುಗಳ ಜೊತೆಗೆ ಹೆಚ್ಚುವರಿಯಾಗಿ ಖಾಸಗಿ ರೈಲುಗಳು ಕಾರ್ಯಾಚರಣೆ ನಡೆಸಲಿವೆ ಎಂದು ತಿಳಿಸಿದೆ.

151 ಪ್ರಯಾಣಿಕ ರೈಲುಗಳ ನಿರ್ವಹಣೆಯನ್ನು ಖಾಸಗಿ ವಲಯಕ್ಕೆ ನೀಡಲು ನಿರ್ಧರಿಸಲಾಗಿದೆ. ಬೇಡಿಕೆ ಹೆಚ್ಚಿದ್ದು, ರೈಲುಗಳ ಪ್ರಮಾಣ ಕಡಿಮೆ ಇರುವ ಮಾರ್ಗಗಳಲ್ಲಿ ಈ ಖಾಸಗಿ ರೈಲುಗಳ ಸೇವೆ ಒದಗಿಸಲಾಗುವುದು ಎಂದು ರೈಲ್ವೆ ಸಚಿವಾಲಯ ಹೇಳಿಕೆ ನೀಡಿದೆ.

‘ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲುಅಸ್ತಿತ್ವದಲ್ಲಿರುವ ರೈಲುಗಳ ಜೊತೆಗೆ ಖಾಸಗಿ ರೈಲುಗಳನ್ನು ಪರಿಚಯಿಸಲಾಗುತ್ತಿದೆ. 2019ರಲ್ಲಿ 84 ಲಕ್ಷ ಜನ ರೈಲಿನಲ್ಲಿ ಪ್ರಯಾಣಿಸಿದ್ದಾರೆ.2030ರಲ್ಲಿ ಪ್ರಯಾಣಿಕರ ಸಂಖ್ಯೆ 3 ಕೋಟಿ ಆಗುವ ನಿರೀಕ್ಷೆಯಿದೆ. ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ತಿಳಿಸಿದೆ.

ADVERTISEMENT

‘ಈ ಖಾಸಗಿ ರೈಲುಗಳಲ್ಲಿ ತಂತ್ರಜ್ಞಾನ ಉತ್ತಮ ಮಟ್ಟದಲ್ಲಿದ್ದು, ವೇಗವು ಹೆಚ್ಚಿರಲಿದೆ. ಉದ್ಯೋಗ ಸೃಷ್ಟಿಯು ಸಾಧ್ಯವಾಗುತ್ತದೆ. ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ಲಭ್ಯವಾಗುತ್ತದೆ’ ಎಂದು ಹೇಳಿದೆ.

151 ಆಧುನಿಕ ರೈಲುಗಳು 109 ಜೋಡಿ ಮಾರ್ಗಗಳಲ್ಲಿ ಚಲಿಸಲು ಖಾಸಗಿ ಘಟಕಗಳಿಂದ ರೈಲ್ವೆ ಸಚಿವಾಲಯಅರ್ಹತಾ ಅರ್ಜಿಗಳನ್ನು ಆಹ್ವಾನಿಸಿತ್ತು. ಈ ಕ್ರಮಕ್ಕೆ ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾಗಿತ್ತು. ಖಾಸಗಿ ರೈಲುಗಳ ಸಂಚಾರಕ್ಕೆ ಅನುಮತಿ ನೀಡುವ ಮೂಲಕ ಸರ್ಕಾರ ಬಡವರ ಸಾರಿಗೆ ವ್ಯವಸ್ಥೆಯನ್ನು ಕಸಿದುಕೊಳ್ಳುತ್ತಿದೆ ಎಂಬ ಅಭಿಪ್ರಾಯ ಕೇಳಿಬಂದಿತ್ತು.ರೈಲ್ವೆ ನೌಕರರ ಸಂಘ ಸಹ ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.