ADVERTISEMENT

ಆಂಧ್ರ ಪ್ರದೇಶಕ್ಕೆ ನೆರವು: ಪ್ರಧಾನಿ ಮೋದಿ ಭರವಸೆ

₹58 ಸಾವಿರ ಕೋಟಿ ಮೊತ್ತದ ಯೋಜನೆಗಳಿಗೆ ಚಾಲನೆ

ಪಿಟಿಐ
Published 3 ಮೇ 2025, 0:42 IST
Last Updated 3 ಮೇ 2025, 0:42 IST
   

ಅಮರಾವತಿ (ಆಂಧ್ರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರು ಅಮರಾವತಿಯನ್ನು ‘ರಾಜಧಾನಿ ನಗರ’ವನ್ನಾಗಿ ಅಭಿವೃದ್ಧಿಪಡಿಸುವುದೂ ಸೇರಿದಂತೆ ₹58 ಸಾವಿರ ಕೋಟಿ ಮೊತ್ತದ ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಶುಕ್ರವಾರ ನೆರವೇರಿಸಿದರು.

ರಾಜಧಾನಿ ನಗರದಲ್ಲಿ ಮೂಲಸೌಕರ್ಯ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೆಗೆ ಸಂಬಂಧಿಸಿದ ನವೀಕರಣ ಮತ್ತು ರಕ್ಷಣಾ ಸಂಬಂಧಿತ ಯೋಜನೆಗಳು ಸೇರಿದಂತೆ ಒಟ್ಟು 94 ಯೋಜನೆಗಳು ಇದರಲ್ಲಿ ಒಳಗೊಂಡಿವೆ.

‘ಸುಮಾರು ₹60 ಸಾವಿರ ಕೋಟಿ ಮೊತ್ತದ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಈ ಯೋಜನೆಗಳು ಕಾಂಕ್ರೀಟ್ ರಚನೆಗಳು ಮಾತ್ರ ಅಲ್ಲ. ಮಹತ್ವಾಕಾಂಕ್ಷೆಯ ‘ಸ್ವರ್ಣಾಂಧ್ರ’ ಮತ್ತು ಮತ್ತು ವಿಕಸಿತ ಭಾರತ ನಿರ್ಮಾಣಕ್ಕೆ ಭದ್ರ ತಳಹದಿಯೂ ಹೌದು’ ಎಂದು ಪ್ರಧಾನಿ ಬಣ್ಣಿಸಿದರು.

ADVERTISEMENT

‘ಅಮರಾವತಿ ಕೇವಲ ಒಂದು ನಗರವಲ್ಲ. ಬದಲಾಗಿ, ಆಂಧ್ರ ಪ್ರದೇಶವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಪರಿವರ್ತಿಸುವ ಒಂದು ಶಕ್ತಿ ಆಗಿದೆ. ಆಂಧ್ರ ಪ್ರದೇಶದ ಅಭಿವೃದ್ಧಿಯಲ್ಲಿ ಕೇಂದ್ರ ಸರ್ಕಾರವು ಕೈಜೋಡಿಸಲಿದೆ ಎಂಬ ಭರವಸೆಯನ್ನು ಈ ರಾಜ್ಯದ ಜನರಿಗೆ ನೀಡಲು ಬಯಸುತ್ತೇನೆ’ ಎಂದು ಹೇಳಿದರು.

ಅಮರಾವತಿ ನಗರ ನಿರ್ಮಾಣದ ಭಾಗವಾಗಿ ಪ್ರಧಾನಿ ಅವರು ₹49 ಸಾವಿರ ಕೋಟಿ ಮೊತ್ತದ 74 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಯೋಗ ದಿನ:

ಜೂನ್ 21ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಆಚರಿಸುವುದಾಗಿ ಪ್ರಧಾನಿ ಮೋದಿ ತಿಳಿಸಿದರು.


‘ಕ್ವಾಂಟಮ್ ವ್ಯಾಲಿ’ ಮುಂದಿನ ವರ್ಷ ಆರಂಭ

‘ಭಾರತದ ಅತ್ಯಾಧುನಿಕ ಮತ್ತು ಮೊಟ್ಟಮೊದಲ ಕ್ವಾಂಟಮ್‌ ವ್ಯಾಲಿ ಟೆಕ್‌ ಪಾರ್ಕ್’ 2026ರ ಜ.1ರಂದು ಕಾರ್ಯಾರಂಭ ಮಾಡಲಿದೆ ಎಂದು ಎನ್‌.ಚಂದ್ರಬಾಬು ನಾಯ್ಡು ಹೇಳಿದರು.

ಮುಖ್ಯಮಂತ್ರಿ ಅವರು ಈ ಯೋಜನೆಗೆ ಸಂಬಂಧಿಸಿದಂತೆ ತಮ್ಮ ನಿವಾಸದಲ್ಲಿ ಐಬಿಎಂ, ಟಿಸಿಎಸ್‌ ಮತ್ತು ಎಲ್‌ ಆ್ಯಂಡ್‌ ಟಿ ಕಂಪನಿಗಳ ಜತೆ ಒಪ್ಪಂದಕ್ಕೆ ಸಹಿ ಹಾಕಿದರು. 

ಕ್ವಾಂಟಮ್ ವ್ಯಾಲಿ ಟೆಕ್ ಪಾರ್ಕ್‌ನಲ್ಲಿ ಐಬಿಎಂನ ಅತ್ಯಾಧುನಿಕ 156-ಕ್ಯೂಬಿಟ್‌ ಕ್ವಾಂಟಮ್ ಸಿಸ್ಟಮ್ ಸ್ಥಾಪನೆಯಾಗಲಿದೆ. ಇದು ದೇಶದಲ್ಲಿ ಸ್ಥಾಪಿಸಲಾಗುವ ಅತಿದೊಡ್ಡ ಕ್ವಾಂಟಮ್ ಕಂಪ್ಯೂಟಿಂಗ್ ವ್ಯವಸ್ಥೆ ಎನಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.