ADVERTISEMENT

ನೂಪುರ್‌ ವಿರುದ್ಧ ಒತ್ತಾಯದ ಕ್ರಮ ಬೇಡ: ಸುಪ್ರೀಂ

ಪಿಟಿಐ
Published 19 ಜುಲೈ 2022, 12:14 IST
Last Updated 19 ಜುಲೈ 2022, 12:14 IST
ನೂಪುರ್‌ ಶರ್ಮಾ
ನೂಪುರ್‌ ಶರ್ಮಾ   

ನವದೆಹಲಿ: ನೂಪುರ್‌ ಶರ್ಮಾ ಅವರು ಪ್ರವಾದಿ ಮಹಮ್ಮದರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಹಲವು ರಾಜ್ಯಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳ ಆಧಾರದಲ್ಲಿ ಒತ್ತಾಯ ಪೂರ್ವಕ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಜೆ.ಬಿ.ಪಾರ್ದಿವಾಲಾ ಅವರಿದ್ದ ದ್ವಿಸದಸ್ಯ ಪೀಠವು ಜುಲೈ 1ರಂದು ನೂಪುರ್‌ ಶರ್ಮಾ ಅವರನ್ನು ತರಾಟೆಗೆ ತೆಗೆದುಕೊಂಡ ನಂತರವೂ ಕೊಲೆ ಬೆದರಿಕೆ ಪತ್ರಗಳು ಬರುತ್ತಿರುವುದು ಮುಂದುವರಿದಿರುವುದನ್ನು ಟಿಪ್ಪಣಿ ಮಾಡಿಕೊಂಡಿದೆ.

ನೂಪುರ್‌ ವಿರುದ್ಧದ ಎಫ್‌ಐಆರ್‌ ಅಥವಾ ದೂರುಗಳನ್ನು ಆಧರಿಸಿ ಒತ್ತಾಯ ಪೂರ್ವಕವಾಗಿ ಕ್ರಮ ಕೈಗೊಳ್ಳಬಾರದು ಅಥವಾ ಪ್ರಕರಣಕ್ಕೆ ಮಹತ್ವ ನೀಡಬಾರದು ಎಂದು ಪೀಠ ಹೇಳಿದೆ. ಭವಿಷ್ಯದಲ್ಲಿ ಈ ಕುರಿತಂತೆ ದಾಖಲಾಗುವ ಪ್ರಕರಣಗಳಿಗೂ ಈ ಆದೇಶ ಅನ್ವಯವಾಗಲಿದೆ ಎಂದು ತಿಳಿಸಿದೆ.

ADVERTISEMENT

ವಿವಿಧೆಡೆ ದಾಖಲಿಸಿರುವ ಎಫ್ಐಆರ್‌ಗಳನ್ನು ಒಗ್ಗೂಡಿಸಬೇಕು ಎಂಬ ಬೇಡಿಕೆಗೆ ಸಂಬಂಧಿಸಿ, ಶರ್ಮಾ ಅವರು ಎಲ್ಲ ಕಡೆಗೂ ಅಲೆಯಬೇಕಿಲ್ಲ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಸಂಬಂಧ ದೆಹಲಿ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಿಗೆ ನೋಟಿಸ್‌ ಜಾರಿ ಮಾಡಿದೆ. ಆಗಸ್ಟ್‌ 10ರ ಒಳಗೆ ಪ್ರತಿಕ್ರಿಯಿಸುವಂತೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಆಗಸ್ಟ್‌ 10ಕ್ಕೆ ನಿಗದಿ ಮಾಡಿದೆ.

ಜುಲೈ 1ರಂದು, ಇದೇ ದ್ವಿಸದಸ್ಯ ಪೀಠವು 'ದೇಶಕ್ಕೇ ಬೆಂಕಿ ಹಚ್ಚಿದ ನೂಪುರ್‌' ಎಂದು ತರಾಟೆಗೆ ತೆಗೆದುಕೊಂಡಿತ್ತು. ನೂಪುರ್‌ ಅವರಿಗೆ ಮಾತಿನ ಮೇಲೆ ಹಿಡಿತವಿಲ್ಲ. ಸುದ್ದಿ ವಾಹಿನಿ ಕಾರ್ಯಕ್ರಮದಲ್ಲಿ ಸಡಿಲವಾದ ಮಾತುಗಳನ್ನಾಡಿದರು ಮತ್ತು ದೇಶಕ್ಕೆಲ್ಲಾ ಬೆಂಕಿ ಹಚ್ಚಿದರು. ಅದರ ಜತೆಯಲ್ಲೇ, ತಾನು ಹತ್ತು ವರ್ಷ ವಕೀಲೆಯಾಗಿದ್ದೆ ಎಂದು ಹೇಳಿಕೊಂಡಿದ್ದಾರೆ. ನಾಚಿಕೆಗೇಡು. ಆ ಹೇಳಿಕೆ ಕುರಿತು ಅವರು ತಕ್ಷಣವೇ ದೇಶದ ಕ್ಷಮೆಯಾಚಿಸಬೇಕಿತ್ತು ಎಂದು ಪೀಠವು ಅಭಿಪ್ರಾಯಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.