ADVERTISEMENT

ನೂಪುರ್ ಹೇಳಿಕೆಯ ಕಿಡಿ: ಪ್ರಯಾಗರಾಜ್ ಗಲಭೆ ಮಾಸ್ಟರ್‌ಮೈಂಡ್ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜೂನ್ 2022, 7:08 IST
Last Updated 11 ಜೂನ್ 2022, 7:08 IST
ಪ್ರಯಾಗರಾಜ್‌ನಲ್ಲಿ ಶುಕ್ರವಾರ ನಡೆದ ಹಿಂಸಾಚಾರ– ಚಿತ್ರ: ಪಿಟಿಐ
ಪ್ರಯಾಗರಾಜ್‌ನಲ್ಲಿ ಶುಕ್ರವಾರ ನಡೆದ ಹಿಂಸಾಚಾರ– ಚಿತ್ರ: ಪಿಟಿಐ   

ಪ್ರಯಾಗರಾಜ್ (ಉತ್ತರ ಪ್ರದೇಶ):ಪ್ರವಾದಿ ಮಹಮ್ಮದ್ ಅವರ ಬಗ್ಗೆ ಬಿಜೆಪಿಯ ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ಅವರ ಹೇಳಿಕೆ ಖಂಡಿಸಿ ಶುಕ್ರವಾರ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ವ್ಯಾ‍ಪಕ ಹಿಂಸಾಚಾರ ನಡೆದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಮಾಸ್ಟರ್‌ ಮೈಂಡ್ ಎಂದು ಗುರುತಿಸಲಾದ ಜಾವೇದ್ ಅಹಮ್ಮದ್ ಅಲಿಯಾಸ್ ಜಾವೇದ್ ಪಂಪ್ ಎನ್ನುವ ವ್ಯಕ್ತಿಯನ್ನು ಬಂಧಿಸಲಾಗಿದೆ.

ಈ ಬಗ್ಗೆ ಶನಿವಾರ ಮಾಹಿತಿ ನೀಡಿರುವ ಪ್ರಯಾಗರಾಜ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಕುಮಾರ್ ಅವರು, ‘ಪ್ರಯಾಗರಾಜ್ ಗಲಭೆಯ ಮಾಸ್ಟರ್‌ಮೈಂಡ್ ಜಾವೇದ್ ಅಹಮ್ಮದ್‌ನನ್ನು ಬಂಧಿಸಲಾಗಿದ್ದು, ಈ ಘಟನೆಯ ಹಿಂದೆ ಇನ್ನೂ ಹಲವು ವ್ಯಕ್ತಿಗಳಿದ್ದುಅವರನ್ನೂ ಕೂಡ ಶೀಘ್ರವೇ ಬಂಧಿಸಲಾಗುತ್ತದೆ’ ಎಂದು ತಿಳಿಸಿದ್ದಾರೆ.

ADVERTISEMENT

ಪ್ರವಾದಿ ವಿರುದ್ಧದ ಹೇಳಿಕೆಗಳನ್ನು ಖಂಡಿಸಿ ಉದ್ರಿಕ್ತರು ಪ್ರಯಾಗರಾಜ್‌ನ ಅಟಾಲಾದಲ್ಲಿ ಪೊಲೀಸ್‌ ಠಾಣೆಗೆ ಕಲ್ಲೆಸೆದು ಬೆಂಕಿ ಹಚ್ಚಿದ್ದರು.

‘ಪ್ರಯಾಗರಾಜ್ ಗಲಭೆಯಲ್ಲಿ ಪೊಲೀಸರತ್ತ ಕಲ್ಲೆಸೆಯಲು ಕಿಡಗೇಡಿಗಳು ಮಕ್ಕಳನ್ನೂ ಕೂಡ ಬಳಸಿಕೊಂಡಿದ್ದಾರೆ. ಅರೋಪಿಗಳ ವಿರುದ್ಧ ಗೂಂಡಾಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು, ಅವರ ಆಸ್ತಿ–ಪಾಸ್ತಿ ಜಪ್ತಿ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು‘ ಎಂದುಅಜಯ್ ಕುಮಾರ್ ತಿಳಿಸಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

‘ಅಲ್ಲದೇ ಜಾವೀದ್ ಅಹಮ್ಮದ್ ಮಗಳು ಕೂಡ ದೆಹಲಿಯಲ್ಲಿ ಕೂತು ಈ ಗಲಭೆಗೆನೆರವು ನೀಡಿದ್ದಾಳೆ. ಅವಳ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಒಂದು ಪೊಲೀಸ್ ತಂಡವನ್ನು ದೆಹಲಿಗೆ ಕಳುಹಿಸಲಾಗಿದೆ’ ಎಂದು ಕುಮಾರ್ ತಿಳಿಸಿದ್ದಾರೆ. ಈ ಘಟನೆ ಬೆನ್ನಲ್ಲೇ ಪ್ರಯಾಗರಾಜ್‌ನಲ್ಲಿ ಉತ್ತರ ಪ್ರದೇಶ ಸರ್ಕಾರ ವ್ಯಾಪಕ ಪೊಲೀಸ್ ಬಂದೋಬಸ್ತ್ ನಿಯೋಜಿಸಿದೆ.

ಏತನ್ಮಧ್ಯೆ ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ದೇಶದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲು ಕೇಂದ್ರ ಸರ್ಕಾರ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.