ADVERTISEMENT

ನೂಪುರ್ ಶರ್ಮಾ ಬಂಧನಕ್ಕೆ ಒತ್ತಾಯ: ದೆಹಲಿಯ ಜಾಮಾ ಮಸೀದಿ ಬಳಿ ಪ್ರತಿಭಟನೆ

ಪಿಟಿಐ
Published 10 ಜೂನ್ 2022, 9:51 IST
Last Updated 10 ಜೂನ್ 2022, 9:51 IST
ದೆಹಲಿಯ ಜಾಮಾ ಮಸೀದಿ ಬಳಿ ಪ್ರತಿಭಟನೆ: ಪಿಟಿಐ ಚಿತ್ರ
ದೆಹಲಿಯ ಜಾಮಾ ಮಸೀದಿ ಬಳಿ ಪ್ರತಿಭಟನೆ: ಪಿಟಿಐ ಚಿತ್ರ   

ನವದೆಹಲಿ: ಪ್ರವಾದಿ ಮಹಮ್ಮದ್ ಕುರಿತಂತೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಅಮಾನತುಗೊಂಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಬಂಧನಕ್ಕೆ ಒತ್ತಾಯಿಸಿ ಇಲ್ಲಿನ ಜಾಮಾ ಮಸೀದಿ ಬಳಿ ಪ್ರತಿಭಟನೆ ನಡೆಸಲಾಗಿದೆ.

ಶುಕ್ರವಾರದ ನಮಾಜ್ ಬಳಿಕ ಗುಂಪು ಸೇರಿದ ಸಾವಿರಾರು ಮುಸ್ಲಿಮರು ಘೋಷಣೆಗಳನ್ನು ಕೂಗುತ್ತಾ, ಭಿತ್ತಿ ಪತ್ರ ಪ್ರದರ್ಶಿಸಿ ನೂಪುರ್ ಬಂಧನಕ್ಕೆ ಒತ್ತಾಯಿಸಿದರು.

ಸ್ವಲ್ಪ ಸಮಯದ ಬಳಿಕ ಕೆಲ ಪ್ರತಿಭಟನಾಕಾರರು ಸ್ಥಳ ಬಿಟ್ಟು ತೆರಳಿದರೆ, ಮತ್ತೆ ಕೆಲವರು ಪ್ರತಿಭಟನೆ ಮುಂದುವರಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಆದರೆ, ಮಸೀದಿ ವತಿಯಿಂದ ಪ್ರತಿಭಟನೆಗೆ ಕರೆ ಕೊಟ್ಟಿಲ್ಲ ಎಂದು ಜಾಮಾ ಮಸೀದಿಯ ಶಾಹಿ ಇಮಾಮ್ ತಿಳಿಸಿರುವುದಾಗಿ ಎಎನ್‌ಐ ಟ್ವೀಟ್ ಮಾಡಿದೆ.

ADVERTISEMENT

ದ್ವೇಷ ಹರಡುವಿಕೆ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ಆರೋಪದಡಿ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ವಿವಾದಿತ ಅರ್ಚಕ ಯತಿ ನರಸಿಂಗಾನಂದ್ ಸೇರಿ 31 ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ನೂಪುರ್ ಶರ್ಮಾ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾದ ಪೋಸ್ಟ್‌ಗಳನ್ನು ವಿಶ್ಲೇಷಿಸಿದ ಬಳಿಕ ಬುಧವಾರ ಈ ಎರಡು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರವಾದಿ ಮಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ನವೀನ್ ಕುಮಾರ್ ಜಿಂದಾಲ್ ಮತ್ತು ಪತ್ರಕರ್ತೆ ಸಭಾ ನಖ್ವಿ ಅವರ ಹೆಸರುಗಳನ್ನೂ ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.