ADVERTISEMENT

‘ಸಾಲ ವಸೂಲಾತಿ ಕಿರುಕುಳ ತಡೆಗೆ ಮಸೂದೆ’

ಅನೈತಿಕ, ನಿಯಯಬಾಹಿರ ವಸೂಲಾತಿ ಕ್ರಮ: ಕಾಯ್ದೆ ತಿದ್ದುಪಡಿಗೆ ಖಾಸಗಿ ಸದಸ್ಯರ ಮಸೂದೆ ಮಂಡನೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 19:36 IST
Last Updated 23 ಜೂನ್ 2019, 19:36 IST

ನವದೆಹಲಿ: ಸಾಲ ವಸೂಲಾತಿಗೆ ಅನುಸರಿಸಲಾಗುತ್ತಿರುವ ‘ಅನೈತಿಕ ಮತ್ತು ನಿಯಮಬಾಹಿರ’ ಕ್ರಮಗಳಿಗೆ ಕಡಿವಾಣ ಹಾಕಲು, ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಕೋರುವ ಖಾಸಗಿ ಸದಸ್ಯರ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ.

‘ಆರ್ಥಿಕ ಸೊತ್ತುಗಳ ಭದ್ರತೆ ಮತ್ತು ಪುನರ್‌ರಚನೆ ಹಾಗೂ ಭದ್ರತಾ ಕ್ರಮದ ಜಾರಿ (ತಿದ್ದುಪಡಿ) ಮಸೂದೆ’ ಅನ್ನು ಆರ್‌ಎಸ್‌ಪಿ ಸಂಸದ ಎನ್‌.ಕೆ. ಪ್ರೇಮಚಂದ್ರನ್‌ ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದರು.

'SARFAESI' ಎಂದೇ ಗುರುತಿಸಲಾಗುವ ಕಾಯ್ದೆಯು 2002ರಲ್ಲಿ ಜಾರಿಗೆ ಬಂದಿದೆ. ಸಾಲ ಮರುಪಾವತಿಯಾಗದ ಪ್ರಕರಣಗಳಲ್ಲಿ ಸಾಲಗಾರರು ಸಾಲಕ್ಕೆ ಆಧಾರವಾಗಿ ಇಟ್ಟಿರುವ ಆಸ್ತಿಯನ್ನು ಹರಾಜು ಹಾಕಲು ಹಣಕಾಸು ಸಂಸ್ಥೆಗಳಿಗೆ ಉಲ್ಲೇಖಿತ ಕಾಯ್ದೆ ಅವಕಾಶ ಕಲ್ಪಿಸುತ್ತದೆ.

ADVERTISEMENT

ಮಸೂದೆ ಮಂಡಿಸಿದ ಪ್ರೇಮಚಂದ್ರನ್‌ ಅವರು, ‘ವಿದ್ಯಾರ್ಥಿಗಳು, ಪೋಷಕರು, ರೈತರು, ಹಿರಿಯ ನಾಗರಿಕರು, ಅಂಗವಿಕಲರು, ಇತರೆ ದುರ್ಬಲ ವರ್ಗಗಳ ಜನರಿಗೆ ಕಿರುಕುಳದಿಂದ ರಕ್ಷಣೆ ನೀಡಲು ಕಾಯ್ದೆಗೆ ತಿದ್ದುಪಡಿ ಅಗತ್ಯ’ ಎಂದು ಪ್ರತಿಪಾದಿಸಿದರು.

ಪ್ರೇಮಚಂದ್ರನ್‌ ಅವರು ಖಾಸಗಿ ಮಸೂದೆಗೆ ಪೂರಕವಾಗಿ ಸಲ್ಲಿಸಿರುವ ಟಿಪ್ಪಣಿಯಲ್ಲಿ ‘ಕಾಯ್ದೆ ಆಧಾರದಲ್ಲಿ ಹಣಕಾಸು ಸಂಸ್ಥೆಗಳು ಖಾಸಗಿ ಸಂಸ್ಥೆಗಳ ನೆರವು ಪಡೆದು ಆಸ್ತಿ ಹರಾಜಿಗೆ ಮುಂದಾಗುತ್ತಿವೆ. ಇದರಿಂದಾಗಿ ಸಮಾಜದ ದುರ್ಬಲ ವರ್ಗದವರು ವಸತಿರಹಿತರಾಗುತ್ತಿದ್ದಾರೆ’ ಎಂದು ಎಂದಿದ್ದಾರೆ.

ಒಂದು ಲಕ್ಷ ಮೀರಿದ ಯಾವುದೇ ಸಾಲದ ಮರುಪಾವತಿಗೆ ವಿಫಲರಾದ ಪ್ರಕರಣಗಳಲ್ಲಿ ಕಾಯ್ದೆ ಅನುಸಾರ ಸಾಲ ವಸೂಲಾತಿ ಕ್ರಮಗಳಿಗೆ ಮುಂದಾಗಬಹುದು. ಈ ಮಿತಿಯನ್ನು ₹10 ಲಕ್ಷಕ್ಕೆ ಹೆಚ್ಚಿಸಬೇಕು ಎಂಬುದು ಪ್ರೇಮಚಂದ್ರನ್ ಅವರ ಆಗ್ರಹ.

ಇದರ ಹೊರತಾಗಿ ಶೈಕ್ಷಣಿಕ ಸಾಲ, ₹20 ಲಕ್ಷವರೆಗಿನ ಕೃಷಿ ಸಾಲ, ಸ್ವಉದ್ಯೋಗಕ್ಕಾಗಿ ಪಡೆದ ₹20 ಲಕ್ಷವರೆಗಿನ ಸಾಲ, ಹಿರಿಯ ನಾಗರಿಕರು, ವಿಧವೆಯರು ಶೇ 60ಕ್ಕೂ ಹೆಚ್ಚು ಅಂಗವೈಕಲ್ಯವುಳ್ಳ ಅಂಗವಿಕಲರು ಪಡೆದ ₹15 ಲಕ್ಷವರೆಗಿನ ಸಾಲ, ಎಚ್‌ಐವಿ/ಏಡ್ಸ್‌ ಪೀಡಿತರು ಪಡೆದ ಸಾಲಗಳನ್ನು ಕಾಯ್ದೆ ವ್ಯಾಪ್ತಿಯಿಂದ ಕೈಬಿಡಬೇಕು ಎಂಬ ಅಂಶವನ್ನು ಖಾಸಗಿ ಸದಸ್ಯರ ಮಸೂದೆಯಲ್ಲಿ ಸೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.