ADVERTISEMENT

ಸುಪ್ರೀಂ ಕೋರ್ಟ್‌ಗೆ ರಫೆಲ್‌ ಒಪ್ಪಂದದ ಮಾಹಿತಿ ಸಲ್ಲಿಸಿದ ಕೇಂದ್ರ ಸರ್ಕಾರ

ಪಿಟಿಐ
Published 12 ನವೆಂಬರ್ 2018, 19:32 IST
Last Updated 12 ನವೆಂಬರ್ 2018, 19:32 IST
.
.   

ನವದೆಹಲಿ:ಫ್ರಾನ್ಸ್‌ನಿಂದ 36 ರಫೇಲ್‌ ಯುದ್ಧ ವಿಮಾನ ಖರೀದಿಗೆ ಕೈಗೊಂಡ ನಿರ್ಧಾರಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ.

‘36 ರಫೇಲ್‌ ಯುದ್ಧ ವಿಮಾನ ಖರೀದಿ ನಿರ್ಧಾರ ಪ್ರಕ್ರಿಯೆ ವಿವರ’ ಎಂಬ ಶೀರ್ಷಿಕೆ ಅಡಿ ಕೇಂದ್ರ ಸರ್ಕಾರ ದಾಖಲೆ ಸಲ್ಲಿಸಿದೆ. ರಫೇಲ್‌ ವಿಮಾನಗಳ ಖರೀದಿಯಲ್ಲಿ ’ರಕ್ಷಣಾ ಖರೀದಿ ವಿಧಾನ–2013 (ಡಿಪಿಪಿ)’ ಅನುಸರಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ರಫೇಲ್‌ ಯುದ್ಧ ವಿಮಾನಗಳ ಖರೀದಿ ನಿರ್ಧಾರದ ಪ್ರಕ್ರಿಯೆಯ ಎಲ್ಲ ವಿವರಗಳನ್ನು ಕಾನೂನುಬದ್ಧವಾಗಿ ಬಹಿರಂಗಗೊಳಿಸಲಾಗುವುದು. ಈ ಮಾಹಿತಿಯನ್ನು ಅರ್ಜಿದಾರರಿಗೂ ಹಸ್ತಾಂತರಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಮೂವರು ಸದಸ್ಯರ ಪೀಠ ಹೇಳಿದೆ.

ADVERTISEMENT

ರಫೇಲ್‌ ಒಪ್ಪಂದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ಗೊಗೊಯಿ ನೇತೃತ್ವದ ಪೀಠವು ಅರ್ಜಿದಾರರಿಗೆ ಮಾಹಿತಿ ನೀಡುವಂತೆ ಇದೇ ಅಕ್ಟೋಬರ್‌ 31 ರಂದು ಆದೇಶಿಸಿತ್ತು.

ವರ್ಷದವರೆಗೆ ಚೌಕಾಸಿ: ವಿಮಾನಗಳ ಖರೀದಿಗಾಗಿ ಸಂಧಾನಕಾರರ ತಂಡವೊಂದನ್ನು ರಚಿಸಲಾಗಿತ್ತು. ಈ ತಂಡವು ಫ್ರಾನ್ಸ್‌ ಜೊತೆಗೆ ಒಂದು ವರ್ಷದವರೆಗೆ ಮಾತುಕತೆ ನಡೆಸಿತ್ತು. ವಿಮಾನ ಖರೀದಿ ಒಪ್ಪಂದಕ್ಕೆ ಸಹಿ ಮಾಡುವ ಮುನ್ನ ಭದ್ರತಾ ವ್ಯವಹಾರಗಳ ಮೇಲಿನ ಸಚಿವ ಸಂಪುಟ ಸಮಿತಿ ಅನುಮೋದನೆ ಪಡೆಯಲಾಗಿತ್ತು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

10 ದಿನದಲ್ಲಿ ತಿಳಿಸಲು ತಾಕೀತು

ರಫೇಲ್‌ ವಿಮಾನ ಖರೀದಿ ದರದ ವಿವರವಾದ ಮಾಹಿತಿಯನ್ನು 10 ದಿನದೊಳಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಕೋರ್ಟ್‌ಗೆ ಬೆಲೆ ವಿವರ ನೀಡದಿದ್ದರೆ ಕಾರಣ ನೀಡಿ ಪ್ರಮಾಣಪತ್ರ ಸಲ್ಲಿಸುವಂತೆ ತಾಕೀತು ಮಾಡಿದ ಕೋರ್ಟ್, ಅರ್ಜಿಯ ವಿಚಾರಣೆ
ಯನ್ನು ನ. 14ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.